Advertisement

ಆ ಒಂದು ಕರೆಯು…

10:25 AM Feb 26, 2020 | Team Udayavani |

” ಸಾರ್‌, ನಿಮ್ಮದು ಮನೆ ಸಾಲ ಇದೆಯಲ್ವಾ? ನಿಮ್ಮ ಲೋನ್‌ ನಂಬರ್‌ ಇದೆ ತಾನೆ? ಮತ್ತೆ ನೀವು ಬ್ಯಾಂಕ್‌ಗೆ ಒಂದು ಸಲ ಬನ್ನಿ. ಬಡ್ಡಿ ಕಡಿಮೆ ಇರುವ ಪ್ಲಾನ್‌ಗೆ ಬದಲಾಯಿಸೋಣ…’

Advertisement

ಮೊಬೈಲ್‌ನ ಆ ಬದಿಯಿಂದ ಈ ರೀತಿ ಹೇಳುತ್ತಿದ್ದಾಗಲೇ ಮನಸ್ಸು ತಥಾಕಥಿವಾಗಿ ಹೇಳುತ್ತಿತ್ತು. ಇವನು ಯಾರೋ ನನಗೆ ದೋಖಾ ಹಾಕೋಕೆ ಹೀಗೆ ಹೇಳ್ತಿರೋದು ಅಂತ. ಏಕೆಂದರೆ, ಈ ಮೊದಲು ನಾನೇ ಖುದ್ದು ಬ್ಯಾಂಕ್‌ಗೆ ಹೋಗಿ, ಸಾಲದ ಮೊತ್ತ ಎಷ್ಟಿದೆ ಅಂತ ಪರೀಕ್ಷಿಸಿ. ಬಡ್ಡಿ ಕಡಿಮೆ ಇರುವ ಸ್ಕೀಂಗೆ ನನ್ನ ಲೋನ್‌ ವರ್ಗಾಯಿಸಲು ಸಾಧ್ಯವಿಲ್ಲವೇ ಅಂತ ಕೇಳಿದ್ದೆ. ಆಗ, ಅವರು “ನೋಡಿ, ಆ ಕೌಂಟರ್‌ಗೆ ಹೋಗಿ’ ಅಂದಿದ್ದರು. ಅಲ್ಲಿಗೆ ಹೋದರೆ, ಅಲ್ಲಿದ್ದ ಹೆಂಗಸು ಮುಖ ಕಿವುಚಿ, “ಇಲ್ಲ ರೀ. ಹಾಗೆಲ್ಲ ಮಾಡೋಕೆ ಆಗೋಲ್ಲ. ಒಂದು ಸಲ ಸಾಲ ಪಡೆದರೆ ಮುಗೀತು. ಪ್ಲಾನ್‌ ಗೀನ್‌ ಬದಲಾಯಿಸೋಕೆ ಆಗೋಲ್ಲ ‘ ಅಂತ ಮುಖಕ್ಕೆ ಹೊಡೆದಂಗೆ ಹೇಳಿದ್ದಳು. ಇದೆಲ್ಲಾ ಆಗಿ ಇನ್ನೂ ಮೂರು ತಿಂಗಳು ಕಳೆದಿಲ್ಲ. ಅಷ್ಟರಲ್ಲಿ ಈ ಫೋನ್‌. ಅದು ಹೇಗೆ, ಲೋನ್‌ ಪ್ಲಾನ್‌ ಚೇಂಜ್‌ ಮಾಡ್ತೀನಿ ಅಂತ ಕರೆ ಮಾಡ್ತಾರೆ. ಇದರಲ್ಲಿ ಏನೋ ಮಸಲತ್ತು ಇರಬೇಕು. ಯಾವ ಕಾರಣಕ್ಕೂ ಇವರಿಗೆ ಅಕೌಂಟ್‌ ನಂಬರ್‌ ಹೇಳಲೇಬಾರದು. ಈ ಸಲ ಕರೆ ಮಾಡಿದರೆ, ಆಕೆಯಂತೆ ನಾನೂ, ಬೇಡ ಸ್ವಾಮಿ ನಿಮ್ಮ ನೆರವು ಅಂತ ಮುಖಕ್ಕೆ ಹೊಡೆದಂತೆ ಹೇಳಿಬಿಡಬೇಕು ಅಂದುಕೊಂಡೆ.

ಒಂದು ತಿಂಗಳ ನಂತರ ಮತ್ತೆ ಕರೆ ಬಂತು. ಅದೇ ವ್ಯಕ್ತಿ, “ಸಾರ್‌, ಏಕೆ ಬಡ್ಡಿ ಹೆಚ್ಚಿಗೆ ಕಟಿ¤àರಾ, ಪ್ಲಾನ್‌ ಚೇಂಜ್‌ ಮಾಡಿಸಿಕೊಳ್ಳಿ’ ಅಂದ.

ಬೈಗಳು, ಗಂಟಲು ದಾಟಿ ಬಾಯಿಗೆ ಬಂದೇ ಬಿಟ್ಟಿತು ಅನಿಸಿತು. ಒಂದು ನಿಮಿಷ ಮನಸ್ಸು ಬದಲಾಯಿಸಿ. ನಿಮ್ಮ ಹೆಸರೇನು? ಅಂದೆ, “ನಾನು ಬ್ಯಾಂಕ್‌ ಮ್ಯಾನೇಜರ್‌. ಅನುಮಾನ ಇದ್ದರೆ ನೀವೇ ಬ್ಯಾಂಕ್‌ಗೆ ಬನ್ನಿ. ಮೂರೇ ನಿಮಿಷದಲ್ಲಿ ನಿಮ್ಮ ಕೆಲಸ ಆಗಿಹೋಗುತ್ತದೆ’ ಅಂದರು.

ಇರಲಿ ನೋಡೋಣ ಅಂತ ಹೋದರೆ, ನಿಜವೇ ಆಗಿತ್ತು. ಆ ವ್ಯಕ್ತಿ ನನ್ನ ಚೇಂಬರ್‌ನಲ್ಲಿ ಕೂಡ್ರಿಸಿ, ಅಪ್ಲಿಕೇಷನ್‌ ಕೊಟ್ಟು,- “ನೀವು ಈಗ ಪ್ರೋಸಸಿಂಗ್‌ ಚಾರ್ಜ್‌ ಅಂತ ಇಷ್ಟು ಕಟ್ಟಿದರೆ, ವರ್ಷಕ್ಕೆ ಹೆಚ್ಚು ಕಮ್ಮಿ 30 ಸಾವಿರ ಉಳಿಯುತ್ತೆ . ನೋಡಿ ಏನು ಮಾಡ್ತೀರ? ಅಂತ’ ಎಂದು ಅವರೇ ಎರಡೇ ನಿಮಿಷದಲ್ಲಿ ಲೆಕ್ಕ ಮಾಡಿ ಹೇಳಿದರು. ಜೊತೆಗೆ ಟೀ ತರಿಸಿಕೊಟ್ಟರು. ಕುಡಿದು, ಸರಿ ಸಾರ್‌, ನೀವು ಹೇಗೆ ಹೇಳ್ತೀರೋ ಹಾಗೆ ಅಂದೆ. ಜೇಬಲ್ಲಿದ್ದ ಕಾರ್ಡ್‌ನ ಮೂಲಕ ಹೇಳಿದಷ್ಟು ದುಡ್ಡು ಕಟ್ಟಿದೆ. ಅದನ್ನು ಎಂಟ್ರಿ ಮಾಡಿ, ನೋಡ ನೋಡುತ್ತಲೇ ಸಾಲದ ಪ್ಲಾನ್‌ ಬದಲಾಯಿತು. ವರ್ಷಕ್ಕೆ ಮೂವತ್ತು ಸಾವಿರ ಅಂದರೆ, ಐದು ವರ್ಷಕ್ಕೆ ಒಂದೂವರೆ ಲಕ್ಷ ಉಳಿತಾಯ. ಚೇಂಬರ್‌ನಿಂದ ಎದ್ದು ಬರುವ ಮೊದಲು…

Advertisement

“ಸಾರ್‌, ಗ್ರಾಹಕರಿಗೆ ನೀವೇ ಏಕೆ ಹೀಗೆಲ್ಲ ಫೋನ್‌ ಮಾಡಿ ಈ ಪ್ಲಾನ್‌ಗೆ ಸಾಲ ಬದಲಾಯಿಸಿಕೊಳ್ಳಿ ಅಂತೀರ? ಎಷ್ಟೋ ಬ್ಯಾಂಕ್‌ನವರಿಗೆ ನಿಮ್ಮಂಥ ಒಳ್ಳೆ ಬುದ್ಧಿ ಏಕೆ ಇರಲ್ಲ?’ ಅಂದರೆ, “ನೋಡಿ ಸಾರ್‌, ನಮಗೆ ಅಗತ್ಯ ಇರೋಷ್ಟು ಸಂಬಳ ಬರುತ್ತೆ. ಲಂಚ ತಗೊಳ್ಳೋದು ಸರಿಯಲ್ಲ. ಇದನ್ನು ಮೀರಿ ತಗೊಂಡರೂ ಜೀರ್ಣಿಸಿಕೊಳ್ಳಲು ಆಗಲ್ಲ. ನನಗೂ ಇನ್ನೇನು ರಿಟೈರ್‌ವೆುಂಟ್‌ ಆಗೋ ಸಮಯ. ನಾಲ್ಕು ಜನಕ್ಕೆ ಒಳ್ಳೇದು ಮಾಡಿ ಹೋದರೆ, ನಿಮ್ಮಂಥವರು ನನ್ನ ನೆನಪಿಸಿಕೊಳ್ತೀರ. ಇದಕ್ಕಿಂತ ಇನ್ನೇನು ಭಾಗ್ಯ ಬೇಕು? ‘ಅಂದರು.. ದಿನಗಟ್ಟಲೆ ಕಾದರೂ ಮಾಡಿಕೊಡದ ಕೆಲಸವನ್ನು ಮೂರೇ ಮೂರು ನಿಮಿಷದಲ್ಲಿ ಮುಗಿಸಿದ ಆ ವ್ಯಕ್ತಿಯ ಹೆಸರು ಸರಿಯಾಗಿ ನೆನಪಿಲ್ಲ. ಆದರೆ, ಅವರು ಎಲ್ಲಿದ್ದರೂ ಚೆನ್ನಾಗಿರಲಿ…

ದೇವರಾಜ, ಮತ್ತಿಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next