ಮದ್ದೂರು: ಕಾಂಗ್ರೆಸ್‌ಗೆ ಚುನಾವಣೆ ಬಗ್ಗೆ ಬಹಳ ಆಸಕ್ತಿ ಇದೆ. ನಮಗೆ ಕಾಯೋಕೆ ಆಗೋಲ್ಲ. ಮಧ್ಯಂತರ ಚುನಾವಣೆ ಬೇಕೆಂದು ಹೇಳಲಿ ಎಂದು ಮಾಜಿ ಸಿ.ಎಂ. ಸಿದ್ದರಾಮಯ್ಯಗೆ ಡಿಸಿಎಂ ಡಾ. ಅಶ್ವತ್ಥನಾರಾಯಣ ಟಾಂಗ್ ನೀಡಿದರು.
ಸಿದ್ದರಾಮಯ್ಯನವರಿಗೆ ಮಧ್ಯಂತರ ಚುನಾವಣೆಬೇಕು ಎಂದೆನಿಸಿರಬಹುದು. ಹೋದಲ್ಲೆಲ್ಲಾ ಚುನಾವಣೆ ಮಾತುಗಳನ್ನಾಡುತ್ತಿದ್ದಾರೆ. ನಮಗೆ ಚುನಾವಣೆ ಬೇಕು ಅಂತ ನೇರವಾಗಿಯೇ ಹೇಳಲಿ. ತಾಕತ್ತಿದ್ದರೆ ಅವರ ನಾಯಕರಿಂದ ಹೇಳಿಸಲಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಸವಾಲು ಹಾಕಿದರು.
ಶಾಸಕರನ್ನು ಹಿಡಿದಿಡುವ ಪ್ರಯತ್ನ: ದೇವೇಗೌಡರು ಮಧ್ಯಂತರ ಚುನಾವಣೆ ಎದುರಾಗಬಹುದು ಎಂದು ಹೇಳುತ್ತಿದ್ದಾರೆಯೇ ವಿನಾ ಚುನಾವಣೆ ಬೇಕೂಂತ ಹೇಳುತ್ತಿಲ್ಲ. ಸಿದ್ದರಾಮಯ್ಯ ಹೇಳುತ್ತಿರುವುದಕ್ಕೂ ದೇವೇಗೌಡರು ಹೇಳುತ್ತಿರುವುದಕ್ಕೂ ವ್ಯತ್ಯಾಸವಿದೆ. ಸಿದ್ಧರಾಮಯ್ಯ ಚುನಾವಣೆ ಎಂದರೆ ರಾತ್ರಿಯೇ ಎದ್ದು ಕೂರುತ್ತಾರೆ. ಅವರ ಪಕ್ಷದ ಶಾಸಕರು ಚುನಾವಣೆ ಬಯಸುತಿದ್ದಾರೆಯೇ ಎಂದು ಪ್ರಶ್ನಿಸಿದರು. ಇದೆಲ್ಲವೂ ಶಾಸಕರನ್ನು ಭಯದಲ್ಲಿಡುವುದಕ್ಕೆ ಮಾಡುತ್ತಿರುವ ತಂತ್ರವಷ್ಟೇ. ಅವರು ಪಕ್ಷದಲ್ಲಿ ಉಳಿದುಕೊಳ್ಳುವುದಿಲ್ಲವೆಂಬ ಕಾರಣಕ್ಕೆ ಭಯದಲ್ಲಿ ಡುವ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ಸುಮ್ಮನಿರುವುದೇ ಲೇಸು: ಯಡಿಯೂರಪ್ಪನವರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸದಿರುವುದೇ ಉತ್ತಮ. ಅಸಂಬದ್ಧ ಹೇಳಿಕೆಗಳನ್ನು ನಿರ್ಲಕ್ಷ್ಯ ಮಾಡಬೇಕು. ಕುಮಾರಸ್ವಾಮಿ ಯಾರು, ಏನೂಂತ ನಾವು ಹಿಂದಿ ನಿಂದಲೂ ನೋಡಿಕೊಂಡು ಬಂದಿದ್ದೇವೆ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದರೆ ಅವರ ಮಾತುಗಳಿಗೆ ಮಹತ್ವ ನೀಡಿದಂತಾಗುತ್ತದೆ. ಅದಕ್ಕಿಂತ ಸುಮ್ಮನಿರುವುದೇ ಲೇಸು ಎಂದು ಹೇಳಿದರು.
ಅನರ್ಹರ ಕುರಿತ ಚರ್ಚೆಗೆ ಸಕಾಲವಲ್ಲ: ಅನರ್ಹ ಶಾಸಕರ ಬಗ್ಗೆ ಈಗ ಏನು ಮಾತನಾಡುವುದಕ್ಕೆ ಇದು ಸಕಾಲವಲ್ಲ ಎಂದರು. ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಸೆ.23ರಂದು ಚುನಾವಣೆ ನಿಗದಿಯಾಗಿದೆ. ಕಾಂಗ್ರೆಸ್, ಜೆಡಿಎಸ್ ನವರು ಬಿಜೆಪಿ ಜೊತೆಗಿದ್ದಾರೆ. ಅಧಿಕಾರ ಯಾರೇ ಹಿಡಿದರೂ ಬಿಜೆಪಿ ಪಕ್ಷದಡಿಯಲ್ಲೇ ಆಗುತ್ತಾರೆ ಎಂದು ಹೇಳಿದರು. ಜೆಡಿಎಸ್ ನಿರ್ದೇಶಕರನ್ನು ಬಿಜೆಪಿ ಕೊಂಡುಕೊಂಡಿದೆ ಎನ್ನುವ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆರೋಪ ಕುರಿತು ಪ್ರತಿಕ್ರಿಯಿಸಿ, ನಾವು ಯಾರನ್ನೂ ಕರೆದೂ ಇಲ್ಲ, ಕೊಂಡುಕೊಂಡೂ ಇಲ್ಲ. ಈ ಮಾತನ್ನು ಪುಟ್ಟರಾಜುರವರೇ ಅವರ ಪಕ್ಷದ ನಿರ್ದೇಶಕರಿಗೆ ಹೇಳಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಮನ್‌ಮುಲ್ ನಾಮ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿ ವಜಾಗೊಂಡಿರುವ ಎನ್.ಸಿ. ಪ್ರಸನ್ನಕುಮಾರ್ ಅವರ ಮನೆಗೆ ಭೇಟಿ ನೀಡಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಬಿಜೆಪಿ ಕಾರ್ಯದರ್ಶಿ ನಾಗಾನಂದ್, ಮುಖಂಡರಾದ ಯೋಗೇಶ್, ಕೋಡಿಹಳ್ಳಿ ಶಿವಪ್ಪ, ಶಿವಪುರ ಶ್ರೀನಿವಾಸ್, ಮೂರ್ತಿ, ವರುಣ್, ಸುನೀಲ್, ಅಶೋಕ್ ಇದ್ದರು.