ಬಾಗಲಕೋಟೆ: ಜಿಲ್ಲೆಯ ಮೂರು ತಾಲೂಕುಗಳಲ್ಲಿ ನೀರಿನ ತೀವ್ರ ಕೊರತೆಯಿರುವ ಹಿನ್ನೆಲೆಯಲ್ಲಿ ಜು. 1ರಿಂದ ಸೆ. 15ವರೆಗೆ ಜಲಶಕ್ತಿ ಅಭಿಯಾನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ನಿರ್ದೇಶಕ ಮಹೇಶ ಕೆ.ಎಂ. ಕರೆ ನೀಡಿದರು.
ಜಿಪಂ ಸಭಾಭವನದಲ್ಲಿ ಶನಿವಾರ ಜರುಗಿದ ಜಲಶಕ್ತಿ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಬಾಗಲಕೋಟೆ, ಬಾದಾಮಿ ಹಾಗೂ ಮುಧೋಳ ತಾಲೂಕುಗಳಲ್ಲಿ ನೀರಿನ ಕೊರತೆ ಕಂಡುಬಂದಿದ್ದರಿಂದ ಈ ಭಾಗದಲ್ಲಿ ನೀರಿನ ಸದ್ಬಳಕೆ ಹಾಗೂ ನೀರಿನ ಸಂಪನ್ಮೂಲ ಪುನರ್ಜೀವನ ಕುರಿತು, ನೀರಿನ ಅವಶ್ಯಕತೆ ಮುಂದಿನ ಪೀಳಿಗೆಗೆ ನೀರು ದೊರಕುವ ಸಲುವಾಗಿ ಸದ್ಯ ಯಾವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ಮುಧೋಳ ಭಾಗದಲ್ಲಿ ಕಬ್ಬು ಬೆಳೆಯನ್ನು ಹೇರಳವಾಗಿ ಬೆಳೆಯುತ್ತಿರುವುದರಿಂದ ಆ ಭಾಗದ ರೈತರು ಹೆಚ್ಚು ನೀರು ಬಳಸಿ ಉತ್ಪನ್ನ ಹೆಚ್ಚಿಸಬಹುದೆಂಬ ತಪ್ಪ್ಪು ಕಲ್ಪನೆಯಿಂದ ಅವಶ್ಯಕತೆಗೆ ಮೀರಿ ನೀರು ಬಳಸಿದ್ದರಿಂದ ಅಲ್ಲಿಯ ಭೂಮಿ ಸವಳು-ಜವಳು ಆಗಿದೆ. ಈ ನಿಟ್ಟಿನಲ್ಲಿ ನೀರಿನ ಕೊರತೆ ಕಂಡುಬಂದಿದೆ. ಅದರಂತೆ ಬಾದಾಮಿ ತಾಲೂಕಿನಲ್ಲಿ ಕೆಂಪು ಹಾಗೂ ಮರಳು ಭೂಮಿಯಾಗಿದ್ದರಿಂದ ಸಾಕಷ್ಟು ನೀರು ಉಪಯೋಗಿಸಿದರೂ ಕೂಡಾ ಉಪಯೋಗಕ್ಕೆ ಬರುತ್ತಿಲ್ಲವಾದ್ದರಿಂದ ನೀರಿನ ಕೊರತೆ ಉಂಟಾಗಿದೆ ಎಂದರು.
ಬಾಗಲಕೋಟೆ ಭಾಗದಲ್ಲಿ ಕಲಾದಗಿ ಭಾಗ ಸುಣ್ಣದ ಪ್ರಮಾಣ ಹೆಚ್ಚಾಗಿದ್ದು, ಮೀತಿಮೀರಿದ ಬೋರವೆಲ್ಗಳ ಕೊರತೆಯಿಂದಾಗಿ ನೀರಿನ ಕೊರತೆ ಕಂಡುಬಂದಿದೆ. ಆದ್ದರಿಂದ ಈ ಮೂರು ಭಾಗಗಳಲ್ಲಿ ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆ ಕುರಿತು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅಭಿಯಾನದ ಸರಕಾರೇತರ ಸಂಸ್ಥೆಗಳು, ಶಾಲಾ ಮಕ್ಕಳು ಹಾಗೂ ಗ್ರಾಮದ ಮುಖ್ಯಸ್ಥರನ್ನು ಒಳಗೊಂಡಂತೆ ಗ್ರಾಮೀಣ ಮಟ್ಟದಲ್ಲಿ ಜಲಶಕ್ತಿ ಅಭಿಯಾನದ ಕಾರ್ಯ ಚಟುವಟಿಕೆ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ತಿಳಿಸಿದರು.
ನೀರಿನ ಸಂರಕ್ಷಣೆಗೆ ಮೂಲಗಳಾದ ಕೆರೆ, ಕೃಷಿ ಹೊಂಡ, ಬಾವಿ, ಬೋರವೆಲ್ಗಳ ಸಂರಕ್ಷಣೆ ಹಾಗೂ ಪುನರುಜ್ಜೀವನಗೊಳಿಸುವದು, ಸಮಗ್ರ ಜಲಾನಯನ ಮಳೆಯ ನೀರನ್ನು ಸಂಗ್ರಹಿಸುವ ಸಲುವಾಗಿ ಮಳೆ ನೀರು ಕೊಯ್ಲು ಕಾರ್ಯಕ್ರಮಗಳನ್ನು ಸರ್ಕಾರಿ ಕಚೇರಿ ಹಾಗೂ ಆವರಣಗಳಲ್ಲಿ ಹಮ್ಮಿಕೊಳ್ಳಬೇಕು. ಮೂರು ತಾಲೂಕುಗಳಲ್ಲಿ ತಲಾ ಒಂದು ಕಿರು ಜಲಾನಯನ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಜಲಾನಯನ ಅಭಿವೃದ್ದಿ ಹಾಗೂ ಅರಣ್ಯ ಇಲಾಖೆ ವತಿಯಿಂದ ಒಗ್ಗೂಡಿಸಿ ಅನುಷ್ಠಾನಗೊಳಿಸಲು ತಿಳಿಸಿದರು.
ಭಾರತ ಸರ್ಕಾರದ ನೋಡಲ್ ಅಧಿಕಾರಿ ಒ.ಆರ್.ಕೆ ರೆಡ್ಡಿ, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ, ಜಿಪಂ ಉಪಕಾರ್ಯದರ್ಶಿ ವಿ.ಎಸ್. ಹಿರೇಮಠ ಉಪಸ್ಥಿತರಿದ್ದರು.