ಬೆಳಗಾವಿ: ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎಲ್ಲ ನಾಯಕರು ಒಂದಾಗಿ ಕೆಲಸ ಮಾಡಬೇಕು. ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಬೇಕು ಎಂಬ ನಿಟ್ಟಿನಲ್ಲಿ ಶನಿವಾರ ನಗರದಲ್ಲಿ ಬಿಜೆಪಿ ನಾಯಕರ ಮಹತ್ವದ ಸಭೆ ನಡೆಯಿತು.
ನಗರದ ಖಾಸಗಿ ಹೋಟೆಲ್‌ದಲ್ಲಿ ನಡೆದ ಬೆಳಗಾವಿ ನಗರ, ಚಿಕ್ಕೋಡಿ ಹಾಗೂ ಬೆಳಗಾವಿ ಗ್ರಾಮಾಂತರ ಜಿಲ್ಲೆಗಳ ಬಿಜೆಪಿ ನಾಯಕರ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಬಿಜೆಪಿ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಭಿನ್ನಾಭಿಪ್ರಾಯ ಅಥವಾ ಮನಸ್ತಾಪಕ್ಕೆ ಅವಕಾಶ ಕೊಡದೇ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಸೂಚನೆ ನೀಡಿದರು.
ಮೂರು ಜಿಲ್ಲೆಗಳ ನಾಯಕರು ತಮ್ಮ ವಯಕ್ತಿಕ ಮನಸ್ತಾಪ ಬದಿಗಿಡಬೇಕು. ಪಕ್ಷದ ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಯಾ ಕ್ಷೇತ್ರದಲ್ಲಿ ಶಾಸಕರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಪಕ್ಷದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಪಕ್ಷದೊಳಗೆ ಆರೋಪ-ಪ್ರತ್ಯಾರೋಪಕ್ಕೆ ಅವಕಾಶ ಕೊಡಬಾರದು ಎಂಬ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು ಎಂದು ಮೂಲಗಳು ಹೇಳಿವೆ.
ಸಭೆಯ ಒಳಗಡೆ ಮತ್ತು ಹೊರಗಡೆ ಪಕ್ಷದೊಳಗಿನ ಭಿನ್ನಮತದ ಬಗ್ಗೆಯೇ ಮಾತುಗಳು ಕೇಳಿಬಂದಿದ್ದು ಗಮನಿಸಬೇಕಾದ ಸಂಗತಿ. ಜಿಲ್ಲೆಯ ಪ್ರಭಾವಿ ನಾಯಕರು ತಮ್ಮದೇ ಗುಂಪು ಕಟ್ಟಿಕೊಂಡು ಒಡಾಡುತ್ತಿರುವ ದೃಶ್ಯಗಳು ಚರ್ಚೆಗೆ ದಾರಿ ಮಾಡಿಕೊಟ್ಟವು.
Related Articles
ನಾಯಕರ ಗೈರು: ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳು ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು ಸಭೆಗೆ ಹಾಲಿ ಸಂಸದರು, ಶಾಸಕರು ಹಾಗೂ ಮಾಜಿ ಶಾಸಕರನ್ನು ಆಹ್ವಾನಿಸಲಾಗಿತ್ತು. ಆದರೆ ಕೆಲವು ಶಾಸಕರು ಸಭೆಯಿಂದ ದೂರ ಉಳಿದಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿತು. ಮುಖ್ಯವಾಗಿ ಸಚಿವ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ನಡೆಸುತ್ತಿರುವ ರಮೇಶ ಜಾರಕಿಹೊಳಿ ಅವರ ಅನುಪಸ್ಥಿತಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.
ಡಿಸಿಸಿ ಬ್ಯಾಂಕ್ ನಂತರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ ಫಲಿತಾಂಶದ ನಂತರ ರಮೇಶ ಜಾರಕಿಹೊಳಿ ಅವರ ಮೇಲೆ ಜಿಲ್ಲೆಯ ನಾಯಕರಿಗೆ ಉಂಟಾದ ಕೋಪ ಇನ್ನೂ ಶಮನವಾಗಿಲ್ಲ. ಮೇಲಾಗಿ ಕೆಲವು ಕ್ಷೇತ್ರಗಳಲ್ಲಿ ಅವರ ನೇರ ಹಸ್ತಕ್ಷೇಪ ಸಹ ಶಾಸಕರು ಹಾಗೂ ಸಂಸದರ ಅಸಮಾಧಾನಕ್ಕೆ ಕಾರಣವಾಗಿದೆ. ಇದೆಲ್ಲದರ ಪರಿಣಾಮ ಜಿಲ್ಲಾ ಬಿಜೆಪಿಯಲ್ಲಿ ಗುಂಪುಗಾರಿಕೆ ಬೆಳೆದಿದೆ ಎಂಬ ಮಾತುಗಳು ಕೇಳಿಬಂದವು.
ಉಳಿದಂತೆ ಜಿಲ್ಲೆಯ ಶಾಸಕರಾದ ಪಿ.ರಾಜೀವ್ ಮತ್ತು ದುರ್ಯೋಧನ ಐಹೊಳೆ, ರಾಜ್ಯಸಭಾ ಮಾಜಿ ಸದಸ್ಯರಾದ ಪ್ರಭಾಕರ ಕೋರೆ ಅವರ ಗೈರುಹಾಜರಿ ಎದ್ದುಕಂಡಿತು. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ತಡವಾಗಿ ಬಂದು ಎಲ್ಲರ ಗಮನ ಸೆಳೆದರು.
ಭಿನ್ನಮತ ದೂರವಾಯಿತೇ?: ಮೇಲ್ನೋಟಕ್ಕೆ ಇದು ಪಕ್ಷದ ಸಂಘಟನೆಯ ಸಭೆ ಎನ್ನಲಾದರೂ ನಾಯಕರ ನಡುವಿನ ಭಿನ್ನಮತ ಶಮನವನ್ನು ದೂರಮಾಡುವ ಪ್ರಯತ್ನದ ಸಭೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದವು. ಜಿಲ್ಲೆಯ ನಾಯಕರಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಾಕಷ್ಟು ಸಲ ಇದು ಎಲ್ಲರ ಮುಂದೆಯೇ ಬಹಿರಂಗವಾಗಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ನಡೆದ ವಿಧಾನ ಪರಿಷತ್ ಚುನಾವಣೆಯ ಸಮಯದಲ್ಲಿ ಈ ಭಿನ್ನಮತ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣವಾಯಿತು ಎಂಬುದು ಈಗಲೂ ಚರ್ಚೆಯಲ್ಲಿದೆ.
ಆಗ ಇದ್ದ ಗುಂಪುಗಾರಿಕೆ ಈಗ ಮತ್ತಷ್ಟು ವಿಸ್ತಾರಗೊಂಡಿದೆ. ಈ ಗುಂಪುಗಾರಿಕೆ ಮತ್ತು ಮನಸ್ತಾಪ ಬರುವ ವಿಧಾನಪರಿಷತ್ ಚುನಾವಣೆಯ ಮೇಲೂ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ನಾನು ಭಿನ್ನಮತ ಶಮನಕ್ಕೆ ಬಂದಿಲ್ಲ. ನಮ್ಮಲ್ಲಿ ಭಿನ್ನಮತ ಇಲ್ಲವೇ ಇಲ್ಲ ಎಂದು ಪ್ರಹ್ಲಾದ ಜೋಶಿ ಹೇಳಿದರೂ ಜಿಲ್ಲೆಯ ಪ್ರಮುಖ ನಾಯಕರು ಪರಸ್ಪರ ಮಾತನಾಡದೇ ಅಂತ ಕಾಯ್ದುಕೊಂಡಿದ್ದು, ಬಿಗುವಿನಿಂದ ಸಭೆಯಲ್ಲಿ ಕುಳಿತಿದ್ದು ಭಿನ್ನಮತ ಇದೆ ಎಂಬುದಕ್ಕೆ ಪುಷ್ಟಿ ನೀಡುವಂತಿದ್ದವು.
ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದರಾದ ಮಂಗಲಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಮಹಾದೇವಪ್ಪ ಯಾದವಾಡ, ಬಾಲಚಂದ್ರ ಜಾರಕಿಹೊಳಿ, ಮಹಾಂತೇಶ ದೊಡ್ಡಗೌಡರ, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ, ಅನಿಲ ಬೆನಕೆ, ಆನಂದ ಮಾಮನಿ, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ರವಿಕುಮಾರ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪುರ ಮೊದಲಾದವರು ಉಪಸ್ಥಿತರಿದ್ದರು.