ಹುಣಸೂರು: ನಗರಸಭೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಸರ್ಕಾರಿ ಆಸ್ತಿ ರಕ್ಷಣೆಯಲ್ಲಿ ವಿಫಲವಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ನಗರಸಭಾ ಸದಸ್ಯ ಸತೀಶ್‌ಕುಮಾರ್ ನಗರಸಭೆ ಕಚೇರಿ ಮುಂಭಾಗ ಒಂಟಿಯಾಗಿ ಪ್ರತಿಭಟಣೆ ನಡೆಸಿದರು.
ನಗರಸಭೆಯಲ್ಲಿ ನಕಲಿ ದಾಖಲೆಗೆ ಖಾತೆ ಮಾಡಿಕೊಡುವ ಹಾಗೂ ಸೂಕ್ತ ದಾಖಲೆಗಳಿದ್ದರೂ ದಾಖಲಾತಿ ನೀಡಲು ಅಲೆದಾಡಿಸುವುದು, ನಗರದಲ್ಲಿ ಸಾಕಷ್ಟು ನಗರಸಭೆ ಆಸ್ತಿ ಒತ್ತುವರಿ ಯಾಗಿದ್ದು, ಆಸ್ತಿ ಸಂರಕ್ಷಿಸುವಲ್ಲಿ ಪೌರಾಯುಕ್ತರು ಸೇರಿದಂತೆ ಹಲವು ಅಧಿಕಾರಿಗಳು ವಿಫಲರಾಗಿದ್ದಾರೆ.
ಇದನ್ನೂ ಓದಿ:- ಉದಯವಾಣಿ ಫಲಶ್ರುತಿ: ಚೌಲ್ಗೆರೆ ಗ್ರಾಮಕ್ಕೆ ಲೋಕಾಯುಕ್ತ ಇಂಜಿನಿಯರ್ ಭೇಟಿ, ರಸ್ತೆ ಪರಿಶೀಲನೆ
ಕೆಲವೆಡೆ ಅನಧಿಕೃತ ವಾಣಿಜ್ಯ ಮಳಿಗೆ, ಮನೆಗಳು ನಿರ್ಮಾಣವಾಗುತ್ತಿವೆ. ರಸ್ತೆಗಳನ್ನೇ ಒತ್ತುವರಿ ಮಾಡಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದಾರೆ. ದೂರು ನೀಡಿದರೂ ಕ್ರಮವಹಿಸಿಲ್ಲ. ನಮೂನೆ-3 ನೀಡುವಲ್ಲಿಯೂ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಡೀಸಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಸತೀಶ್ ಕುಮಾರ್ ತಿಳಿಸಿದ್ದಾರೆ.
ಎಸಿ ಮನವಿ ಸ್ವೀಕಾರ: ವಿಷಯ ತಿಳಿದ ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸೂಕ್ತ ದಾಖಲಾತಿಗಳೊಂದಿಗೆ ಎಸಿಗೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.