ಸೊನೋಮಾ : ಕಳೆದ 84 ವರ್ಷಗಲ್ಲೇ ಅತ್ಯಂತ ಭೀಕರ ಹಾಗೂ ಘೋರ ಎನಿಸಿರುವ ಕ್ಯಾಲಿಫೋರ್ನಿಯ ಕಾಡ್ಗಿಚ್ಚಿಗೆ ಕನಿಷ್ಠ 33 ಮಂದಿ ಬಲಿಯಾಗಿದ್ದಾರೆ.
ಬೆಂಕಿಯನ್ನು ಹತೋಟಿಗೆ ತರಲು ಶತಾಯ ಗತಾಯ ಹೋರಾಡುತ್ತಿರುವ ಅಗ್ನಿ ಶಾಮಕಗಳಿಗೆ ಸ್ವಲ್ಪ ಮಟ್ಟಿನ ಯಶಸ್ಸು ಸಿಕ್ಕಿದೆ. “ಆದರೆ ನಾವಿನ್ನೂ ತುರ್ತು ಪರಿಸ್ಥಿತಿಯಿಂದ ಹೊರಬಂದಿಲ್ಲ; ಅಥವಾ ಅದರ ಸನಿಹಕ್ಕೂ ತಲುಪಿಲ್ಲ’ ಎಂದು ಕ್ಯಾಲಿಫೋರ್ನಿಯ ಗವರ್ನರ್ ಕಾರ್ಯಾಲಯದ ತುರ್ತು ಸೇವಾ ದಳ ನಿರ್ದೇಶಕ ಮಾರ್ಕ್ ಗಿಲಾರ್ಡುಸ್ಸಿ ಹೇಳಿದ್ದಾರೆ.
ಬೆಂಕಿಗೆ ಈ ತನಕ 5,700 ಕಟ್ಟಡಗಳು ಹಾಗೂ ರಚನೆಗಳು ನಾಶವಾಗಿವೆ; ಈ ಮೊದಲು ಇವುಗಳ ಸಂಖ್ಯೆಯನ್ನು 3,500 ಎಂದು ತಿಳಿಯಲಾಗಿತ್ತು ಎಂದು “ಕಾಲ್ ಫಯರ್’ ಟ್ವಿಟರ್ ಹೇಳಿದೆ.
ಬೆಂಕಿ ಅವಘಡದಿಂದಾಗಿ ನೂರಾರು ಜನರು ನಾಪತ್ತೆಯಾಗಿದ್ದಾರೆ; ಭಾರೀ ದೊಡ್ಡ ಸಂಖ್ಯೆಯಲ್ಲಿ ಸಂತ್ರಸ್ತರ ಸ್ಥಳಾಂತರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.
ಕಾಡ್ಗಿಚ್ಚು ಆರಂಭವಾಗಿ 5 ದಿನ ಕಳೆದರೂ ಇನ್ನೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ; ಸುಮಾರು ಎಂಟು ಸಾವಿರ ಅಗ್ನಿ ಶಾಮಕಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ಸುಮಾರು ಎಂಟು ಕೌಂಟಿಗಳಲ್ಲಿ ಕನಿಷ್ಠ 20 ಕಡೆಗಳಲ್ಲಿ ಬೆಂಕಿಯು ವ್ಯಾಪಿಸುತ್ತಿದೆ. ಸೊನೋಮಾ ಕೌಂಟಿಯೊಂದರಲ್ಲಿ ನೂರಾರು ಜನರು ನಾಪತ್ತೆಯಾಗಿದ್ದಾರೆ. ಹಲವಾರು ಕಟ್ಟಡಗಳು, ಮೋಟಾರು ವಾಹನಗಳು ಸುಟ್ಟು ಕರಕಲಾಗಿವೆ.
ಬೆಂಕಿಯನ್ನು ನಿಯಂತ್ರಿಸಲು ಹೆಣಗುತ್ತಿರುವ ಅಗ್ನಿ ಶಾಮಕಗಳು ತಮ್ಮ ಕಾರ್ಯಾಚರಣೆಯಲ್ಲಿ ಪ್ರಗತಿ ಸಾಧಿಸುತ್ತಿವೆ; ಆದರೂ ಬೆಂಕಿಯನ್ನು ಪೂರ್ತಿಯಾಗಿ ನಂದಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ರಾಜಧಾನಿ ಸ್ಯಾಕ್ರಮೆಂಟೋದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಕ್ಯಾಲಿಫೋರ್ನಿಯದ ಅರಣ್ಯ ಮತ್ತು ಅಗ್ನಿ ಸಂರಕ್ಷಣೆ ಇಲಾಖೆಯ ನಿರ್ದೇಶಕ ಕೆನ್ ಪಿಮ್‌ಲೋಟ್ ಹೇಳಿದರು.