Advertisement

ಇಟಲಿಯಲ್ಲೀಗ ಹೊಸ ಬದುಕಿನ ಲೆಕ್ಕಾಚಾರ

06:00 PM Apr 13, 2020 | Sriram |

ಕೆಲವು ರಾಷ್ಟ್ರಗಳು ಬಿಟ್ಟರೆ ಉಳಿದೆಡೆಯಲ್ಲೆಲ್ಲ ಕೋವಿಡ್‌ -19 ವೈರಾಣು ಆವರಿಸಿಕೊಳ್ಳುತ್ತಿದೆ. ಚೀನ ಸದ್ಯಕ್ಕೆ ಗೆದ್ದಿರಬಹುದು, ಆದರೆ ಮತ್ತೆ ಸೋಲುವ ಭಯ ಕಾಡುತ್ತಲೇ ಇದೆ. ಇದು ಒಂದು ದೇಶದ ಕಥೆಯಲ್ಲ ; ಸಾವಿನ ನೆರಳಿನಿಂದ ಹೊರಬಂದ ದಕ್ಷಿಣ ಕೊರಿಯಾ, ಇಟಲಿಯಲ್ಲೆಲ್ಲ ಮೆಲ್ಲನೆ ಬದುಕು ಅರಳಿಕೊಳ್ಳಲು ಮುಹೂರ್ತ ಹುಡುಕುತ್ತಿದೆ. ಇದರ ಮಧ್ಯೆಯೇ ಹೊಸ ಸಮಸ್ಯೆಗಳು ಆರಂಭವಾಗಿವೆ ಇಟಲಿಯ ಮಾದರಿಯಲ್ಲಿ.

Advertisement

ಮಿಲನ್‌: ಇಟಲಿಯ ಮಾಫಿಯಾ ಜಗತ್ತು ಅತ್ಯಂತ ಕುಪ್ರಸಿದ್ಧ. ಪರ್ಯಾಯ ಆಡಳಿತ ವ್ಯವಸ್ಥೆಯನ್ನೇ ನಡೆಸುತ್ತಿರುವ ಈ ಮಾಫಿಯಾ ಡಾನ್‌ಗಳ ಹೆಸರು ಕೇಳಿದರೆ ಜನರು ನಡುಗುತ್ತಾರೆ. ಆದರೆ ಈಗ ಕೋವಿಡ್‌-19 ತಾಂಡವವಾಡುತ್ತಿರುವ ಸಮಯದಲ್ಲಿ ಇದೇ ಮಾಫಿಯಾ ಜನರ ನೆರವಿಗೆ ಧಾವಿಸಿದೆ. ಇದರಿಂದ ಜನರಿಗೆ ಉಪಕಾರವಾಗಿದ್ದರೂ ಇಟಲಿಯ ಸರಕಾರಕ್ಕೆ ಮಾತ್ರ ಹೊಸ ತಲೆನೋವು ಶುರುವಾಗಿದೆ.

ಮಾಫಿಯಾ ಜಗತ್ತಿನವರು ಕೋವಿಡ್‌-19 ನಿಂದಾಗಿ ಮನೆಯಲ್ಲೇ ಉಳಿದವರಿಗೆ ಆಹಾರ ಸಾಮಗ್ರಿಗಳು ಹಾಗೂ ಇನ್ನಿತರ‌ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವ ವಿಡಿಯೊ ಚಿತ್ರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಸರಕಾರಕ್ಕಿಂತಲೂ ಸಮರ್ಪಕವಾಗಿ ಮಾಫಿಯಾದವರು ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಿ ನೆರವಾಗುತ್ತಿದ್ದಾರೆ ಎಂಬ ಪ್ರಶಂಸೆಯೂ ಕೇಳಿ ಬರುತ್ತಿದೆ. ಈ ಮೂಲಕ ಮಾಫಿಯಾ ಜನರ ಮನಗೆದ್ದರೆ ಮುಂದಿನ ದಿನಗಳಲ್ಲಿ ಆಡಳಿತ ನಡೆಸಲು ಕಷ್ಟವಾಗಬಹುದು ಎನ್ನುವುದು ಸರಕಾರದ ಚಿಂತೆಗೆ ಕಾರಣ.

ಜನರು ಮಾಫಿಯಾ ಬೆಂಬಲಕ್ಕೆ ನಿಂತು ಬಿಟ್ಟರೆ ಆಡಳಿತ ವ್ಯವಸ್ಥೆ ಏರುಪೇರಾಗ ಬಹುದು. ಒಂದು ವೇಳೆ ಮಾಫಿಯಾದವರೇ ಮುಖ್ಯವಾಹಿನಿಯನ್ನು ನಿಯಂತ್ರಿಸುವ ಪರಿಸ್ಥಿತಿ ಬಂದರೆ ಇದರ ಪರಿಣಾಮ ಕೋವಿಡ್‌-19ಗಿಂತಲೂ ಭೀಕರವಾಗಬಹುದು ಎನ್ನುತ್ತಿದ್ದಾರೆ ಸರಕಾರದ ವಕ್ತಾರರು. ಆದರೆ ಮಾಫಿಯಾ ಜಗತ್ತು ಮಾತ್ರ ಸಂಕಷ್ಟದ ಈ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಸಿಕ್ಕಿದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ.

Advertisement

ಸರಕಾರ ಜನರಿಗೆ ಶಾಪಿಂಗ್‌ ವೋಚರ್‌ಗಳನ್ನು ವಿತರಿಸುತ್ತಿದ್ದರೂ ಅದು ಎಲ್ಲರಿಗೂ ಸಿಗುತ್ತಿಲ್ಲ. ಅದರಲ್ಲೂ ಈ ಗ್ರೇ ಎಕಾನಮಿಯ (ಮಾಫಿಯಾ ಎಕಾನಮಿ) ಭಾಗವಾಗಿರುವವರನ್ನು ಕೇಳುವವರೇ ಇಲ್ಲದಂತಾಗಿದೆ. ಮಾಫಿಯಾ ಗ್ಯಾಂಗ್‌ಗಳೇ ಈಗ ಇವರ ಬದುಕಿಗೆ ಆಧಾರವೆಂಬಂತೆ ತೋರುತ್ತಿದೆ. ಇಲ್ಲಿ ಕಡಿಮೆಯೆಂದರೂ ಸುಮಾರು 33 ಲಕ್ಷ ಮಂದಿ ಈ ಗ್ರೇ ಎಕಾನಾಮಿಯಲ್ಲಿದ್ದಾರೆ. ಲಾಕ್‌ಡೌನ್‌ನಿಂದ ಅತಿ ಹೆಚ್ಚು ಸಂಕಷ್ಟ ಎದುರಾಗಿರುವುದು ಇವರಿಗೆ. ಸರಕಾರದ ದಾಖಲಾತಿಯಲ್ಲಿ ಇಲ್ಲದ ಇವರಿಗೆ ಯಾವ ನೆರವು ಸಿಗುತ್ತಿಲ್ಲ. ಇಲ್ಲಿನ ಸರಕಾರಕ್ಕೆ ತನ್ನ ಅಧಿಕೃತ ಪ್ರಜೆಗಳಿಗೆ ದೈನಂದಿನ ಜೀವನದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇನ್ನು ಈ ಅನಧಿಕೃತ ಜನರನ್ನು ಕೇಳುವರಾರು? ಹಾಗಾಗಿ ಮಾಫಿಯಾದವರಿಗೂ ಇದು ವರವಾಗಿದೆ.

ಹೆಚ್ಚಿದ ಕಳ್ಳತನ, ಸುಲಿಗೆ
ಲಾಕ್‌ಡೌನ್‌ ಜಾರಿಯಾದ ಬಳಿಕ ಇಟಲಿಯಲ್ಲಿ ಪಡಿತರ ವಸ್ತುಗಳ ಕಳ್ಳತನ ಮತ್ತು ಸುಲಿಗೆ ವ್ಯಾಪಕವಾಗಿ ನಡೆಯುತ್ತಿದೆ. ಚಿಕ್ಕಪುಟ್ಟ ಅಂಗಡಿಗಳಿಂದ ಜನರು ಹಗಲೇ ಆಹಾರ ವಸ್ತುಗಳು, ಪಿಜ್ಜಾ, ಪಾಸ್ತಾಗಳನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ಸೂಪರ್‌ ಮಾರ್ಕೆಟ್‌, ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗಳಿಗೆ ಪೊಲೀಸ್‌ ಕಾವಲು ಒದಗಿಸಿದ್ದರೂ ಜನರ ಗುಂಪು ಅವರ ಕಣ್ತಪ್ಪಿಸಿ ಕಳ್ಳತನ ಮಾಡುತ್ತಿದೆ. ಜನರಿಗೆ ಈಗ ಅಗತ್ಯವಾಗಿ ಬೇಕಾಗಿರುವುದು ದೈನಂದಿನ ಜೀವನಕ್ಕೆ ಬೇಕಾಗಿರುವ ವಸ್ತುಗಳು. ಇವುಗಳ ಪೂರೈಕೆಯನ್ನು ಸರಾಗಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಇಟಲಿಯ ಸ್ಥಿತಿ ಭಯಾನಕವಾಗಬಹುದು ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ ಪೊಲೀಸ್‌ ಅಧಿಕಾರಿ ನಿಕೊಲ ಗ್ರಟ್ಟೆರಿ.
ಕೋವಿಡ್‌ನಿಂದಾಗಿ ದೇಶದಲ್ಲಿ ಬಡತನ ಹೆಚ್ಚಲಿದೆ. ಈ ಅವಕಾಶವನ್ನು ಮಾಫಿಯಾ ಬಳಸಿ ಕೊಂಡರೆ ಕಷ್ಟ. ಸಾಧಾರಣವಾಗಿ ಮಾಫಿಯಾ ಗ್ಯಾಂಗ್‌ಗಳು ಇಂಥ ಪರಿಸ್ಥಿತಿಯನ್ನೇ ನಿರೀಕ್ಷಿಸು ತ್ತಿರುತ್ತವೆ. ನಿರುದ್ಯೋಗಿಗಳು, ಬಡವರೇ ಮಾಫಿಯಾ ಗ್ಯಾಂಗ್‌ಗಳಿಗೆ ಸೇರ್ಪಡೆಯಾಗುವವರು. ಆಹಾರ, ನೀರು, ಹಣ ಕೊಡುವ ಮೂಲಕ ಮಾಫಿಯಾ ಗ್ಯಾಂಗ್‌ಗಳು ಈ ಬಡವರ ಅನುಕಂಪ ಪಡೆಯಲು ಪ್ರಯತ್ನಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎನ್ನುತ್ತಾರೆ ಒಳಾಡಳಿತ ಸಚಿವೆ ಲೂಸಿಯಾನ ಲ್ಯಾಮೊರ್ಗಿಸ್‌.

ವಲಸಿಗರ ಪಾಡು ಹೇಳತೀರದು
ಇಟಲಿಯಲ್ಲಿ ವಲಸಿಗರ ಪಾಡು ಇನ್ನಷ್ಟು ದಯನೀಯವಾಗಿದೆ. ಆಫ್ರಿಕ ದೇಶಗಳಿಂದ ಮುಖ್ಯವಾಗಿ ನೈಜಿರಿಯಾ, ಘಾನಾದಂಥ ದೇಶಗಳಿಂದ ವಲಸೆ ಬಂದಿರುವವರು ಹೆಚ್ಚಾಗಿ ನೆಲೆಯಾಗಿರುವುದು ಕ್ಯಾಸ್ಟೆಲ್‌ ವೊಲ್ಟನೊì ನಗರದಲ್ಲಿ. ಇದು ಒಂದು ಕೊಳೆಗೇರಿಯಂಥ ನಗರ. ಇಲ್ಲಿರುವ 25,000 ವಲಸಿಗರಲ್ಲಿ 5,000 ಮಂದಿ ಮಾತ್ರ ನೋಂದಾಯಿತರು. ಉಳಿದವರು ಅಕ್ರಮ ವಲಸಿಗರು. ಇವರು ಆಹಾರ, ನೀರು ಹಾಗೂ ಇನ್ನಿತರ ಅಗತ್ಯ ವಸ್ತುಗಳು ಸಿಗದೆ ಪರದಾಡುತ್ತಿದ್ದಾರೆ. ಸೋಂಕಿನ ಸಾವಿನ ಪ್ರಕರಣವೂ ಇವರಲ್ಲೇ ಹೆಚ್ಚಿದೆ. ಕಡಿಮೆ ಬಾಡಿಗೆಗೆ ಮನೆಗಳು ಸಿಗುತ್ತಿರುವ ಕಾರಣ ಹಾಗೂ ಅಕ್ರಮವಾಗಿ ವಾಸ ಮಾಡಲು ಮನೆ ಮಾಲಕರೇ ಅವಕಾಶ ಕೊಡುವುದರಿಂದ ಇಟಲಿಯ ದಕ್ಷಿಣಕ್ಕಿರುವ ಈ ನಗರ ವಲಸಿಗರ ಮೆಚ್ಚಿನ ತಾಣ. ಮಾಫಿಯಾ ಡಾನ್‌ಗಳ ಕಪಿಮುಷ್ಟಿಯಲ್ಲಿರುವ ಈ ನಗರಕ್ಕೆ ಸರಕಾರಿ ವ್ಯವಸ್ಥೆ ಪ್ರವೇಶಿಸುವುದು ಕಷ್ಟ.

Advertisement

Udayavani is now on Telegram. Click here to join our channel and stay updated with the latest news.

Next