Advertisement
ವಿದ್ಯಾ ಸಾಲದ ಬಗ್ಗೆ ಕಳೆದ ಎರಡು ವಾರಗಳಿಂದ ಸಕಾಲಿಕವಾಗಿ ಚರ್ಚೆ ಮಾಡುತ್ತಲೇ ಬಂದಿದ್ದೇವೆ. ಕಾಲೇಜು ಪ್ರವೇಶಾತಿ ಪ್ರಕ್ರಿಯೆ ಜೋರಾಗಿ ನಡೆಯುತ್ತಿರುವ ಈ ಸಮಯದಲ್ಲಿ ಈ ಮಾಲಿಕೆ ಉಪಯುಕ್ತವಾಗಿದೆ ಎಂದು ನಂಬಿದ್ದೇನೆ. ಈ ವಾರದ ವಿಷಯ – ವಿದ್ಯಾ ಸಾಲದ ಮೇಲೆ ಬಡ್ಡಿ ಯಾವ ರೀತಿ ಲೆಕ್ಕ ಹಾಕಲಾಗುತ್ತದೆ ಮತ್ತು ಅದರ ಮೇಲೆ ಆದಾಯ ತೆರಿಗೆ ವಿನಾಯಿತಿ ಯಾವ ರೀತಿ ದೊರಕುತ್ತದೆ?ಬಡ್ಡಿ ಲೆಕ್ಕಾಚಾರ: ವಿದ್ಯಾ ಸಾಲದ ಮೇಲೆ ಬಡ್ಡಿಯನ್ನು ಎರಡು ಹಂತದಲ್ಲಿ ವಿಧಿಸಲಾಗುತ್ತದೆ – ಮೊರಟೋರಿಯಂ ಮತ್ತು ಮರುಪಾವತಿಯ ಅವಧಿಗಳಲ್ಲಿ.
Related Articles
Advertisement
ಈ ಲೆಕ್ಕಾಚಾರದ ಪ್ರಕಾರ ರೂ. 10 ಲಕ್ಷ ಎಂದು ಯೋಚಿಸಿ ತೆಗೆದುಕೊಂಡ ಸಾಲ 5 ವರ್ಷದ ಕೊನೆಗೆ ರೂ 13.50 ಲಕ್ಷ ಆಗುತ್ತದೆ. ಹಲವಾರು ಜನರು ಇದನ್ನು ನೋಡಿ ಹೌಹಾರುತ್ತಾರೆ. ಸಾಲದ ಅವಧಿಯಲ್ಲೂ ಬಡ್ಡಿ ಇದೆ ಎನ್ನುವ ಕಲ್ಪನೆ ಅವರಿಗೆ ಇರುವುದಿಲ್ಲ. ಸಾಲದ ಅವಧಿಯಲ್ಲಿ ಬಡ್ಡಿ ಕಟ್ಟುವ ಅಗತ್ಯವಿಲ್ಲ ಎನ್ನುವುದೇನೋ ನಿಜ, ಆದರೆ ಬಡ್ಡಿಯೇ ಇಲ್ಲ ಎಂದು ಎಲ್ಲೂ ಹೇಳಿಲ್ಲ; ಹೇಳಲು ಸಾಧ್ಯವೂ ಇಲ್ಲ ಅಲ್ಲವೇ? ಆದರೂ ಜನಸಾಮಾನ್ಯರು ವಿದ್ಯಾಭ್ಯಾಸದ ಅವಧಿಯಲ್ಲಿ ಬಡ್ಡಿಯೇ ಇಲ್ಲ ಎನ್ನುವ ಭ್ರಮೆಯಲ್ಲಿ ಇರುತ್ತಾರೆ. ಬಡ್ಡಿ ಇದ್ದರೂ ಅದು ಇಷ್ಟೆಲ್ಲಾಆಗುತ್ತದೆ ಎನ್ನುವ ಕಲ್ಪನೆ ಇರುವುದಿಲ್ಲ. ಆ ಮೇಲೆ ಬ್ಯಾಂಕನ್ನು ಹತ್ತು ಲಕ್ಷದ ಸಾಲ ಹದಿನಾಲ್ಕೂವರೆ ಹೇಗಾಯಿತು ಎಂದು ಹಳಿಯುತ್ತಾರೆ.
ಆದರೆ, ಇಂತಹ ಘೋರ ಪರಿಣಾಮವನ್ನು ತಪ್ಪಿಸಿಕೊಳ್ಳಲು ಸಾಲದ ಅವಧಿಯುದ್ದಕ್ಕೂ ಬಡ್ಡಿ ಕಟ್ಟುವ ಆಯ್ಕೆಯೂ ಸಾಲಗಾರನಿಗೆ ಇರುತ್ತದೆ. ಅಷ್ಟೇ ಏಕೆ, ಸಾಲದ ಅವಧಿಯುದ್ದಕ್ಕೂ ಬಡ್ಡಿ ಕಟ್ಟುವವರಿಗೆ ಬ್ಯಾಂಕು ಶೇ.1 ರಿಯಾಯಿತಿಯನ್ನೂ ನೀಡುತ್ತದೆ. (ಮೇಲಿನ ಉದಾಹರಣೆಯಲ್ಲಿ ಶೇ.10 ಬದಲು ಶೇ. 9 ಲೆಕ್ಕದಲ್ಲಿ ಬಡ್ಡಿಕಟ್ಟಿದರೆ ಸಾಕು) ಆ ರೀತಿ ಬಡ್ಡಿಯನ್ನು ಕಟ್ಟುತ್ತಾ ಹೋಗುವವರಿಗೆ ಕಡಿಮೆ ಬಡ್ಡಿಯ ಲಾಭವೂ ದೊರಕುತ್ತದೆ, ಸಾಲದ ಮೊತ್ತ ಅನವಶ್ಯಕ ವೃದ್ಧಿಯಾಗುವ ಭಯವೂ ಇರುವುದಿಲ್ಲ. ಕಾಲಕಾಲಕ್ಕೆ ಸಾಲದ ಅವಧಿಯುದ್ದಕ್ಕೂ ಬಡ್ಡಿ ಕಟ್ಟುವವರಿಗೆ ಸಾಲವು ಮೂಲಮೊತ್ತದಲ್ಲಿಯೇ ಉಳಿಯುತ್ತದೆ.2.ಮರುಪಾವತಿಯ ಅವಧಿ: ಒಮ್ಮೆ ಈ ರೀತಿ ಪೇರಿಸಲ್ಪಟ್ಟ ಸಾಲದ ಮೊತ್ತವನ್ನು ಮೊರಟೋರಿಯಂ ಅವಧಿ ಮುಗಿದಾಕ್ಷಣ ಆ ಸಮಯಕ್ಕೆ ಅನ್ವಯವಾಗುವ ಬಡ್ಡಿದರದಲ್ಲಿ ಇ.ಎಂ.ಐ ಆಗಿ ಪರಿವರ್ತಿಸುತ್ತಾರೆ. ಈಗ ಮಾಸಿಕ ಮರುಪಾವತಿ ಆರಂಭ.
ಇ.ಎಂ.ಐ ಎಂದರೆ ಈಕ್ವೇಟೆಡ್ ಮಂತ್ಲಿ ಇನ್‌ಸ್ಟಾಲ್‌ಮೆಂಟ್. ಅಂದರೆ ಇಡೀ ಸಾಲದ ಮೊತ್ತವನ್ನು ಮತ್ತು ಅದರ ಮೇಲೆ ಬರುವ ಪೂರ್ತಿ ಅವಧಿಯ ಬಡ್ಡಿಯನ್ನು ಒಟ್ಟು ಸೇರಿಸಿ ಅದನ್ನು ಸಮಾನ ಮಾಸಿಕ ಕಂತುಗಳಾಗಿ ಭಾಗಿಸುವುದು. ಇದರ ಗಣಿತಸೂತ್ರ ತುಸು ಕಠಿಣವಾಗಿದೆ ಆದರೆ ಯಾವುದೇ ಆನ್‌ಲೈನ್ ಕ್ಯಾಲಿಕುಲೇಟರ್ ಇದನ್ನು ಸುಲಭವಾಗಿ ಮಾಡಿಕೊಡುತ್ತದೆ. ಎಲ್ಲಾ ಬ್ಯಾಂಕುಗಳ ಜಾಲತಾಣಗಳಲ್ಲೂ ಈ ಲೆಕ್ಕಾಚಾರ ಸುಲಭ ಲಭ್ಯ. ಮೂಲ ಮೊತ್ತ, ಬಡ್ಡಿ ದರ ಹಾಗೂ ಪಾವತಿಯ ಅವಧಿಯನ್ನು ನೀಡಿದರೆ ಅದು ಇಎಂಐ ಕಂತುಗಳನ್ನು ಲೆಕ್ಕ ಹಾಕಿ ಕೊಡುತ್ತದೆ. ಇಎಂಐ ಲೆಕ್ಕಾಚಾರ ಒಂದು ಸಿದ್ಧ ಮಾದರಿ ಹಾಗೂ ಇದು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುವುದಿಲ್ಲ. ಯಾರು ಬೇಕಾದರೂ ಈ ಲೆಕ್ಕವನ್ನು ಪರಿಶೀಲಿಸಿ ನೋಡಬಹುದು; ಎಲ್ಲರಿಗೂ ಒಂದೇ ಅಂಕಿಅಂಶ ದೊರಕುತ್ತದೆ. ಹಲವರು ಅನವಶ್ಯಕ ಬ್ಯಾಂಕಿನವರ ಮೇಲೆ ಇಎಂಐ ಸರಿ ಇಲ್ಲ, ಮೋಸ ಮಾಡುತ್ತಾರೆ’ ಎಂಬ ಆರೋಪ ಹೊರಿಸುತ್ತಾರೆ. ಈ ಮೇಲಿರುವ ಟೇಬಲ್ ಪ್ರತಿ ವರ್ಷ ಯಾವ ರೀತಿ ಒಟ್ಟು ಇಎಂಐ ಲೆಕ್ಕ ಹಾಕಲಾಗುತ್ತದೆ ಎಂದು ತೋರಿಸುತ್ತದೆ. ಇಲ್ಲಿ ನಾವು ಇಎಂಐ ಕಂತು ಸಮಾನವಾಗಿ ಇರುವುದನ್ನು ಗಮನಿಸಬಹುದು. ಆದರೆ ಪ್ರತೀ ಇಎಂಐ ಕಂತಿನಲ್ಲಿ ಅಸಲು ಮತ್ತು ಬಡ್ಡಿಯ ಭಾಗ ಏರಿಳಿಯುವುದನ್ನು ಕಾಣಬಹುದು. ಮೊದ ಮೊದಲು ಬಡ್ಡಿಯ ಭಾಗ ಜಾಸ್ತಿಯಿದ್ದರೆ ಅಸಲು ಭಾಗ ಕಡಿಮೆಯಿರುತ್ತದೆ. ಆದರೆ ಕ್ರಮೇಣ ಅಸಲು ಭಾಗ ಜಾಸ್ತಿಯಾಗಿ ಬಡ್ಡಿಯ ಭಾಗ ಕಡಿಮೆಯಾಗುತ್ತದೆ. ಪ್ರತಿ ಮಾಸವೂ ಸಮಾನವಾದ ಪಾವತಿಯ ಹೊರೆ ಬರುವಂತೆ ಈ ಪದ್ಧತಿಯನ್ನು ಗ್ರಾಹಕರ ಹಿತದೃಷ್ಟಿಯಿಂದ ನಿಯೋಜಿಸಲಾಗಿದೆ. ಪ್ರತಿ ವರ್ಷವೂ ಬ್ಯಾಂಕು ತನ್ನ ಸಾಲಗಾರರಿಗೆ ಅಸಲು ಮತ್ತು ಬಡ್ಡಿ ಮೊತ್ತವನ್ನು ಪ್ರತ್ಯೇಕವಾಗಿ ತೋರಿಸಿ ತನ್ನ ಸ್ಟೇಟ್‌ಮೆಂಟ್ ನೀಡುತ್ತದೆ. ಇದು ಸೂಕ್ತ ರೀತಿಯಲ್ಲಿ ಆದಾಯ ತೆರಿಗೆಯ ಲಾಭ ಪಡೆಯುವುದರಲ್ಲಿ ಸಹಕಾರಿಯಾಗುತ್ತದೆ. ಕರ ವಿನಾಯತಿ: ಗೃಹ ಸಾಲದಂತೆಯೇ ವಿದ್ಯಾಸಾಲದಲ್ಲೂ ಆದಾಯ ಕರ ವಿನಾಯಿತಿ ಇದೆ. ಸೆಕ್ಷನ್ 80ಇ ಅನುಸಾರ ಒಬ್ಟಾತ ವಿದ್ಯಾ ಸಾಲದ ಮೇಲೆ ಕಟ್ಟುವ ಬಡ್ಡಿಯಂಶವನ್ನು ಯಾವುದೇ ಮಿತಿಯಿಲ್ಲದೆ ನೇರವಾಗಿ ಆ ವರ್ಷದ ಆದಾಯದಿಂದ ಕಳೆಯಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ತಮ್ಮ ಸ್ಲಾಬಾನುಸಾರ ಆದಾಯ ತೆರಿಗೆಯಲ್ಲಿ ರಿಯಾಯಿತಿ ದೊರಕೀತು. ಈ ರೀತಿ ಕರಲಾಭವನ್ನು ಒಟ್ಟು 8 ವರ್ಷಗಳ ಕಾಲ ಮಾತ್ರ ಪಡೆಯಬಹುದಾಗಿದೆ. ಸಾಲದ ಮರುಪಾವತಿ 8 ವರ್ಷಕ್ಕಿಂತ ಜಾಸ್ತಿಯಿದ್ದರೂ ಕರಲಾಭ ಕೇವಲ 8 ವರ್ಷಕ್ಕೆ ಮಾತ್ರ ಸೀಮಿತವಾಗಿದೆ ಎಂಬುದು ನೆನಪಿರಲಿ. ಬಡ್ಡಿಯ ಮೊತ್ತವನ್ನು ಆದಾಯದಿಂದ ನೇರವಾಗಿ ಕಳೆಯುವುದು ಅಂದರೆ, ಕರಾರ್ಹರಲ್ಲದವರಿಗೆ ಯಾವುದೇ ಕರಲಾಭ ಸಿಗಲಿಕ್ಕಿಲ್ಲ. ಆ ಬಳಿಕ ಶೇ.5, ಶೇ.20 ಹಾಗೂ ಶೇ.30 ತೆರಿಗೆ ಸ್ಲಾಬ್‌ನಲ್ಲಿರುವವರಿಗೆ ಅದೇ ಕ್ರಮಾನುಸಾರ ತೆರಿಗೆಯಲ್ಲಿ ಉಳಿತಾಯ ಸಿಗಬಹುದು. ಆದರೆ, ಇದರಲ್ಲಿ ಕಟ್ಟುವ ಅಸಲಿನ ಭಾಗಕ್ಕೆ ಯಾವುದೇ ಸೆಕ್ಷನಿನಲ್ಲಿ ಯಾವುದೇ ತೆರಿಗೆ ವಿನಾಯಿತಿ ಇರುವುದಿಲ್ಲ. ವಿನಾಯಿತಿ ಸಿಗುವುದು ಬಡ್ಡಿಗೆ ಮಾತ್ರ ಎಂಬುದು ನೆನಪಿರಲಿ. ಬ್ಯಾಂಕಿಗೆ ಮರುಪಾವತಿ ಮಾಡುವ ಇಎಂಐ ಮೊತ್ತ ಅಸಲು ಹಾಗೂ ಬಡ್ಡಿ ಎರಡನ್ನೂ ಹೊಂದಿರುತ್ತವೆ. ಇಎಂಐ ಕಂತಿನ ಅಸಲು ಮತ್ತು ಬಡ್ಡಿಯನ್ನು ಪ್ರತ್ಯೇಕವಾಗಿ ಬ್ಯಾಂಕು ತನ್ನ ಹೇಳಿಕೆಯಲ್ಲಿ ನಮೂದಿಸುತ್ತದೆ. ಅಲ್ಲದೆ ಈ ಸೌಲಭ್ಯವನ್ನು ಜನಪ್ರಿಯ ಸೆಕ್ಷನ್ 80ಸಿ ಜೊತೆ ಗೊಂದಲ ಮಾಡಿಕೊಳ್ಳಬೇಡಿ. (80ಸಿ ಯಲ್ಲಿ 1.5 ಲಕ್ಷದವರೆಗೆ ಹಲವು ಹೂಡಿಕೆಗಳಲ್ಲಿ ಹಾಕಿದ ಹಣವನ್ನು ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ. ಉದಾ, ಜೀವ ವಿಮೆ, ಪಿಪಿಎಫ್, ಇ.ಎಲ್.ಎಸ್.ಎಸ್,) ವಿದ್ಯಾ ಸಾಲದಲ್ಲಿ ಕಟ್ಟುವ ಬಡ್ಡಿಯ ಮೊತ್ತವನ್ನು ಯಾವುದೇ ಮಿತಿಯಿಲ್ಲದೆ ಆದಾಯದಿಂದ ನೇರವಾಗಿ ಕಳೆಯ ಬಹುದಾಗಿದೆ. ವಿದ್ಯಾ ಸಾಲದ 80ಇ, ಸೆಕ್ಷನ್ 80ಸಿ ಸೆಕ್ಷನ್ನಿಂದ ಸಂಪೂರ್ಣವಾಗಿ ಹೊರತಾಗಿದೆ. ಇವೆರಡೂ ಸೌಲಭ್ಯಗಳು ಬೇರೆ ಬೇರೆ ಹಾಗೂ ಇವೆರಡನ್ನೂ ಒಟ್ಟಿಗೇ ಪಡೆಯಬಹುದು. ಉದಾಹರಣೆಗಾಗಿ ಒಬ್ಟಾತ ರೂ. 10 ಲಕ್ಷ ವಿದ್ಯಾಸಾಲ ತೆಗೆದುಕೊಂಡನೆಂದು ಇಟ್ಟುಕೊಳ್ಳಿ. 4 ವರ್ಷದ ಕಲಿಕೆಯ ಬಳಿಕ ಆತನ ಮರುಪಾವತಿ ಒಟ್ಟು 10 ವರ್ಷಗಳ ಇಎಂಐ ಮೂಲಕ ನಡೆಯುತ್ತದೆ ಎಂದಿಟ್ಟುಕೊಳ್ಳಿ. ಆತನ ಲೋನ್ ಖಾತೆ, ಇಎಂಐ ಮತ್ತು ಕರ ವಿನಾಯತಿಯ ಲಾಭ ಈ ಕೆಳಗಿನ ಟೇಬಲ್‌ನಲ್ಲಿ ಕೊಡಲಾಗಿದೆ. ಇಲ್ಲಿ ಆದಾಯ ತೆರಿಗೆ ಸ್ಲಾಬ್ ಅನುಸಾರ ಶೇ.5, ಶೇ.20 ಅಥವಾ ಶೇ.30 ಲೆಕ್ಕದಲ್ಲಿ ಉಳಿತಾಯವಾಗುತ್ತದೆ. ಯಾರಿಗೆ ಕರವಿನಾಯತಿ?: ಕರನೀತಿಯ ಪ್ರಕಾರ ಯಾರು ಈ ವಿನಾಯಿತಿಯನ್ನು ಪಡಕೊಳ್ಳಬಹುದು ಎಂಬುದಕ್ಕೆ ಅದರದ್ದೇ ಆದ ವ್ಯಾಖ್ಯೆ ಇದೆ. ಕರ ನೀತಿ ಪ್ರಕಾರ ಯಾರ ಹೆಸರಿನಲ್ಲಿ ಸಾಲವಿದೆಯೋ ಆ ವ್ಯಕ್ತಿ ಮಾತ್ರ ಆದಾಯ ಕರ ವಿನಾಯಿತಿಯನ್ನು ಪಡಕೊಳ್ಳಬಹುದು. ಆದರೆ ಬ್ಯಾಂಕುಗಳ ಕಾನೂನು ಪ್ರಕಾರ ಒಬ್ಬ ವ್ಯಕ್ತಿ ತನ್ನ, ತನ್ನ ಪತ್ನಿ/ಪತಿ ಅಥವ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾತ್ರ ಸಾಲ ಪಡೆಯಬಹುದಾಗಿದೆ. ಅಂದರೆ, ವಿದ್ಯಾಸಾಲವನ್ನು ವಿದ್ಯಾರ್ಥಿಯೂ ಪಡೆಯಬಹುದು, ಆತನ ಹೆತ್ತವರೂ ಪಡೆಯಬಹುದು. ಆದರೂ, ತೆರಿಗೆಯ ಲಾಭವನ್ನು ನೋಡಿಕೊಂಡು ವಿದ್ಯಾರ್ಥಿ ಹಾಗೂ ಹೆತ್ತವರೊಳಗೆ ಮನೆಯಲ್ಲಿ ಯಾರಿಗೆ ಭವಿಷ್ಯತ್ತಿನಲ್ಲಿ ಆದಾಯ ವಿನಾಯಿತಿಯ ಅಗತ್ಯ ಬೀಳುವುದೋ ಆತನೇ ಸಾಲಕ್ಕೆ ಅರ್ಜಿ ಹಾಕುವುದು ಉತ್ತಮ. ಇದರ ಅರಿವಿಲ್ಲದೆ ಆ ಸಮಯಕ್ಕೆ ತೋಚಿದಂತೆ ಅರ್ಜಿ ಹಾಕಿ ಬಳಿಕ ಅಗತ್ಯವಿದ್ದವರಿಗೆ ತೆರಿಗೆ ವಿನಾಯಿತಿ ಸಿಗದೆ ತೊಂದರೆಗೀಡಾದವರು ಹಲವರಿದ್ದಾರೆ. ಹೆತ್ತವರ ಹೆಸರಿನಲ್ಲಿ ಮಕ್ಕಳಿಗಾಗಿ ಸಾಲ ಪಡಕೊಂಡರೆ ಮರುಪಾವತಿಯ ಸಮಯದಲ್ಲಿ ಹೆತ್ತವರಿಗೆ ಮಾತ್ರವೇ ಆದಾಯ ತೆರಿಗೆಯ ಲಾಭ ಸಿಕ್ಕೀತು.