ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ನೇಮಕ ಈಗ ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಕರ್ ನೀಡುವುದಕ್ಕಾಗಿಯೇ ಈ ನೇಮಕ ನಡೆದಿದೆ ಎಂಬ ಮಾತು ಕೇಳಿ ಬಂದಿದೆ.
ಎಐಸಿಸಿಯಲ್ಲಿ ಸುದೀರ್ಘ ಕಾಲ ಕರ್ತವ್ಯ ನಿರ್ವಹಿಸಿರುವ ಹರಿಪ್ರಸಾದ್ ದಿಲ್ಲಿ ಅಂಗಣದಲ್ಲಿ ಪಳಗಿದ ರಾಜಕಾರಣಿ. ಕಾಂಗ್ರೆಸ್ ವರಿಷ್ಠರ ಜತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜತೆ ಸಮಾನ ಅಂತರ ಕಾಯ್ದುಕೊಂಡಿರುವ ಅವರು ಮೂಲ ಕಾಂಗ್ರೆಸ್ ತಟಸ್ಥ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ನಡೆ ಬಗ್ಗೆ ಸಾಕಷ್ಟು ಅಸಮಾಧಾನ ಹೊಂದಿರುವ ಹರಿಪ್ರಸಾದ್ ಪಕ್ಷದ ವೇದಿಕೆಯಲ್ಲಿ ಮಾತ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮೂಲ ಕಾಂಗ್ರೆಸಿಗರಾದ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ, ಎಚ್.ಕೆ.ಪಾಟೀಲ್, ಜಿ.ಸಿ.ಚಂದ್ರಶೇಖರ್ ಮೊದಲಾದವರ ಜತೆ ಆತ್ಮೀಯ ಸಂಬಂಧ ಹೊಂದಿರುವ ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ವಿದ್ಯಾರ್ಥಿ ಹೋರಾಟ ಕಾಲದಿಂದಲೂ ಸಂಪರ್ಕ ಹೊಂದಿದ್ದಾರೆ. ಸಿದ್ದರಾಮಯ್ಯ ವೇಗಕ್ಕೆ ತಡೆ ಹಾಕುವುದಕ್ಕಾಗಿ ಮೇಲ್ಮನೆಯಲ್ಲೂ ಹಿಂದುಳಿದ ವರ್ಗದ ನಾಯಕನಿಗೇ ಈಗ ರಾಜ್ಯ ಕಾಂಗ್ರೆಸ್ ನಾಯಕರೆಲ್ಲ ಸೇರಿ ಪಟ್ಟಕಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.
ಪ್ರತಿಪಕ್ಷ ನಾಯಕ ಸ್ಥಾನಕ್ಕೆ ತಮ್ಮ ಆಪ್ತ ವಲಯಕ್ಕೆ ಸೇರಿದ ಸಿ.ಎಂ.ಇಬ್ರಾಹಿಂ, ಗೋವಿಂದರಾಜ್ ಅಥವಾ ಪ್ರಕಾಶ್ ರಾಥೋಡ್ ಅವರನ್ನು ನೇಮಕ ಮಾಡುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಮಾತಿಗೆ ಈ ಬಾರಿ ಮನ್ನಣೆ ಸಿಕ್ಕಿಲ್ಲ.
ಸಿದ್ದರಾಮಯ್ಯಗೆ ಮೂಲ ಕಾಂಗ್ರೆಸ್ಸಿಗರೆಲ್ಲ ಸೇರಿ ವ್ಯೂಹ ರಚಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ. ಮೊನ್ನೆಯಷ್ಟೇ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲರನ್ನು ಎಐಸಿಸಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈಗ ಮೂಲ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ.