Advertisement

ಮನೆ ಹಿಂದಿನ ಲೆಕ್ಕಾಚಾರ; ಸಣ್ಣಪುಟ್ಟ ಖರ್ಚು ಎಂದು ಧಾರಾಳವಾಗಿರು ವಂತಿಲ್ಲ

09:07 PM Feb 16, 2020 | Sriram |

ಮನೆ ಕಟ್ಟುವಾಗ, ಶುರುವಿನಲ್ಲಿ ಧಾರಾಳವಾಗಿದ್ದ ಹಣದ ಹರಿವು, ಸಾಮಾನ್ಯವಾಗಿ ಕೆಲಸಗಳೆಲ್ಲ ಮುಗಿಯುವ ಹೊತ್ತಿಗೆ ಬಿಗಿಯಾಗುತ್ತಾ ಹೋಗುತ್ತದೆ. ಇದೆಲ್ಲವೂ ಗೊತ್ತಿರುವ ವಿಚಾರವೇ. ಆದರೂ, ಎಲ್ಲ ವಿಷಯಗಳಲ್ಲೂ ಹಣ ಬಿಚ್ಚುವಾಗ ಒಂದಷ್ಟು ಲೆಕ್ಕಾಚಾರ ಅನುಸರಿಸಿದರೆ, ಮನೆ ಕಟ್ಟುವ ಕಾರ್ಯ ಒಂದಷ್ಟು ನಿರಾಳ ಆಗುವುದರಲ್ಲಿ ಸಂಶಯವಿಲ್ಲ!

Advertisement

ಜವಾಬ್ದಾರಿಯುತ ನಿರ್ವಹಣೆ, ಮನೆ ನಿರ್ಮಾಣಕ್ಕೆ ತಗುಲುವ ಖರ್ಚನ್ನು ಮಿತಿಯೊಳಗೆ ಇರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ನಮ್ಮಲ್ಲಿ ಲೆಕ್ಕಾಚಾರವನ್ನು ಅನುಸರಿಸುವುದು ಕಡಿಮೆ. ಗುತ್ತಿಗೆದಾರರಿಗೆ ಎಲ್ಲವನ್ನೂ ಸೇರಿಸಿ ಒಟ್ಟಾಗಿ ಕೊಟ್ಟರೆ, ಅವರು ಅವರ ಮನೆಯ ಖರ್ಚನ್ನೂ ಕಟ್ಟುವ ಖರ್ಚನ್ನೂ, ಸೇರಿಸಿಕೊಂಡು ಪದೇ ಪದೆ ಕಾಸು ಕೇಳಲು ತೊಡಗುತ್ತಾರೆ. ಅದೇ ರೀತಿಯಲ್ಲಿ, ಮನೆ ಕಟ್ಟುವಾಗ ಉಳಿಸಿದ್ದು, ಸಾಲ ತಂದದ್ದು ಎಲ್ಲ ಸೇರಿ ಸಾಕಷ್ಟು ಹಣ ಯಜಮಾನರ ಕೈಯಲ್ಲಿ ಇರುವುದರಿಂದ, ಒಂದಷ್ಟು ಹಣ ಇತರೆ ವಿಷಯಗಳಿಗೂ ಖರ್ಚಾಗಿ ಹೋಗುತ್ತದೆ.

ನೂರರಿಂದ ಲಕ್ಷದವರೆಗೂ ಲೆಕ್ಕಾಚಾರ
ಸಣ್ಣಪುಟ್ಟ ಖರ್ಚು ಎಂದು ನಾವು ನೂರರ ಲೆಕ್ಕದಲ್ಲಿ ಧಾರಾಳವಾಗಿರುವಂತೆಯೂ ಇಲ್ಲ. “ಹನಿಗೂಡಿದರೆ ಹಳ್ಳ’ದಂತೆಯೇ, ಹನಿಗಳು ನಿಲ್ಲದೆ ಹರಿದುಹೋದರೆ, ಹಳ್ಳದಲ್ಲಿ ನೀರೂ ನಿಲ್ಲುವುದಿಲ್ಲ! ಹಾಗಾಗಿ, ನಾವು ಮನೆ ಕಟ್ಟುವಾಗ ದೊಡ್ಡ ಮೊತ್ತದ ಖರ್ಚಿನ ಬಗ್ಗೆ ಕಾಳಜಿಯಿಂದ ಇರುವಂತೆಯೇ ಸಣ್ಣ ಪುಟ್ಟದರಲ್ಲೂ ಹುಷಾರಾಗಿ ಇರಬೇಕು. ಯಾವುದೂ ಸಣ್ಣದಲ್ಲ, ಯಾವ ಖರ್ಚನ್ನೂ ನಿರ್ಲಕ್ಷಿಸುವಂತೆಯೇ ಇಲ್ಲ. ಜೊತೆಗೆ, ಕೆಲಸದವರು, ಗುತ್ತಿಗೆದಾರರಿಗೂ “ಈ ಮನೆಯವರು ಎಲ್ಲದರಲ್ಲೂ ಲೆಕ್ಕಾಚಾರ ಮಾಡುತ್ತಾರೆ’ ಎಂಬ ಅಭಿಪ್ರಾಯ ಬಂದರೆ, ಅವರೂ ಹಣ ಪೋಲು ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಎಲ್ಲದಕ್ಕೂ ಲೆಕ್ಕ ಕೊಡಬೇಕು ಎಂದೇ ನಾವು ಮುಂಗಡವನ್ನೂ ನೀಡಬೇಕಾಗುತ್ತದೆ. ಒಮ್ಮೆ ಲೆಕ್ಕ ತಪ್ಪಿತೆಂದರೆ, ಮುಂದೆ ಬಿಗಿಗೊಳಿಸುವುದು ಕಷ್ಟ.

ಲೆಕ್ಕಾಚಾರದಿಂದ ಉಳಿತಾಯ
ಮನೆ ಶುರುವಿನಲ್ಲಿ ಇರುವ ಬೆಲೆ ಸುಮಾರು ಆರು ತಿಂಗಳುಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಾವು ಇದರ ಬಗ್ಗೆ ಲೆಕ್ಕ ಇಟ್ಟು, ಬೆಲೆ ಮಾತಾಡುವಾಗ, ಶುರುವಿನಲ್ಲಿ ಕೊಟ್ಟ ಬೆಲೆಗೇ ವಸ್ತುಗಳನ್ನು ಕೊನೆಯತನಕ ಕೊಡಬೇಕು ಎಂದು ಮಾತಾಡಿಕೊಳ್ಳುವುದು ಉತ್ತಮ. ಆಗ, ಕೆಲ ಮುಖ್ಯವಸ್ತುಗಳ ಬೆಲೆಯಲ್ಲಾದರೂ ನಮಗೆ ನಿಖರವಾದ ಖರ್ಚು ವೆಚ್ಚದ ಲೆಕ್ಕಾಚಾರ ಗೊತ್ತಾಗುತ್ತದೆ. ಸಾಮಾನ್ಯವಾಗಿ ಇಂಧನದ ಬೆಲೆ- ಪೆಟ್ರೋಲ್‌, ಡೀಸೆಲ್‌, ಕಲ್ಲಿದ್ದಲು ಬೆಲೆ ಏರಿಕೆ ಆದರೆ, ಇಟ್ಟಿಗೆ, ಸಿಮೆಂಟ್‌, ಸ್ಟೀಲ್‌ ಜೊತೆ ಬಹುತೇಕ ಎಲ್ಲ ವಸ್ತುಗಳ ಬೆಲೆಯೂ ಏರುತ್ತದೆ. ಬೆಲೆ ಏರಿಕೆ ಸ್ವಲ್ಪ ಆಗಿದ್ದರೆ, ಸರಬರಾಜು ಮಾಡುವವರು ಹೇಗೋ “ಹಳೆ’ ಬೆಲೆಯಲ್ಲೇ ವಸ್ತುಗಳನ್ನು ಸರಬರಾಜು ಮಾಡಬಹುದು. ಆದರೆ, ತೀರಾ ಹೆಚ್ಚಿದ್ದರೆ, ಅನಿವಾರ್ಯವಾಗಿ ಹೆಚ್ಚು ಬೆಲೆ ತೆರೆಬೇಕಾಗುತ್ತದೆ. ನಾವು ಲೆಕ್ಕಾಚಾರ ಇಡುತ್ತಿಲ್ಲ ಎಂಬುದು ಗೊತ್ತಾದರೆ, ಸರಬರಾಜು ಮಾಡುವವರು, ತಮಗಿಷ್ಟ ಬಂದಂತೆ ಬೆಲೆ ಏರಿಸುವುದುಂಟು, ನಾವು ನೂರು ರೂಪಾಯಿ ಹೆಚ್ಚಿಗೆ ಕೇಳಿದರೂ ವಿಚಾರಣೆ ನಡೆಸುತ್ತೇವೆ ಎಂಬುದು ಗೊತ್ತಾದರೆ, ಆಗ ಅವರು ನಮಗೆ ಹೇಳಿಯೇ ಬೆಲೆ ಏರಿಸಲು ನೋಡುತ್ತಾರೆ. ಆಗ, ನಮಗೂ ಚೌಕಾಸಿ ಮಾಡಲು ಅವಕಾಶ ಸಿಗುತ್ತದೆ.

ನೇರವಾಗಿ ಹಣ ಕೊಡಿ
ಮನೆ ಕಟ್ಟುವಾಗ ಹಣವನ್ನು ಖರ್ಚು ಮಾಡಬೇಕಾದ್ದು ಅನಿವಾರ್ಯ. ಆದರೆ, ಅದನ್ನು ಹೇಗೆ ಮತ್ತು ಯಾರಿಗೆ ಕೊಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಅದನ್ನು ಸರಿಯಾಗಿ ಮಾಡಿದರೆ, ಮನೆ ಕೆಲಸ ಶೀಘ್ರವಾಗಿ ಮುಗಿಯುವುದರ ಜೊತೆಗೆ, ನಿರ್ವಹಣೆಯೂ ಉತ್ತಮವಾಗಿ ಮೂಡಿ ಬರುತ್ತದೆ. ತಲೆ ನೋವುಗಳು ಕಡಿಮೆಯಾಗುತ್ತವೆ. ಹಣವನ್ನು ಆದಷ್ಟೂ ನೇರವಾಗಿ, ಕೆಲಸಕ್ಕೆ ಸಂಬಂಧಿಸಿದ ಆಯಾ ವ್ಯಕ್ತಿಗಳಿಗೇ ಕೊಡಿ. ಕೆಲವೊಮ್ಮೆ, ನಾವು ಒಬ್ಬರಿಗೆ ಕೊಟ್ಟು, ಅವರು ತಲುಪಿಸಬೇಕಾದವರಿಗೆ ಕೊಡದೇ ಇದ್ದರೆ, ನಮಗೆ ಅನಗತ್ಯವಾಗಿ ಮುಜುಗರ ಆಗಬಹುದು. ಇನ್ನು ಕೆಲವೊಮ್ಮೆ ಒಂದರ್ಧ ಗಂಟೆ ಕಾದು ನಂತರ ಹಣ ಪಾವತಿ ಮಾಡಬೇಕು ಎಂದುಕೊಳ್ಳಿ. ಅಂಥ ಸಮಯದಲ್ಲಿ ಕಾಯುವ ಸಮಯವನ್ನು ಉಳಿಸಲು ಬೇರೆ ಯಾರದೋ ಕೈಯಲ್ಲಿ ಹಣ ಕೊಟ್ಟರೆ, ಅಥವಾ ಅದನ್ನೇ ಅಭ್ಯಾಸ ಮಾಡಿಕೊಂಡರೆ, ತೊಂದರೆಗೆ ಸಿಲುಕುವ ಸಾಧ್ಯತೆ ಇರುತ್ತದೆ.

Advertisement

ಕೆಲಸಗಾರರ ಸಂಬಳ ತಡವಾಗದಿರಲಿ
ಮನೆ ನಿರ್ಮಾಣದ ಕೆಲಸ ಎಂದಮೇಲೆ, ಅಲ್ಲಿ ಎಂದರೆ ಹತ್ತಾರು ಕುಶಲಕರ್ಮಿಗಳು ಕಾರ್ಯ ನಿರ್ವಹಿಸುತ್ತಾರೆ. ಅವರವರ ಲೆಕ್ಕಾಚಾರ ಅವರವರಿಗೇ ತಿಳಿಯಬೇಕು, ಕೆಲವೊಮ್ಮೆ ಸಂಕೀರ್ಣವಾಗಿಯೂ ಇರುತ್ತದೆ. ನಾವು ಎಲ್ಲದರಲ್ಲೂ ತಲೆ ತೂರಿಸಲು ಆಗದಿದ್ದರೂ, ಎಲ್ಲರಿಗೂ ಸಂದಬೇಕಾದ ಹಣ ಸೇರಿದೆಯೇ? ಎಂದು ಕೇಳಿ ತಿಳಿದುಕೊಳ್ಳುವುದು ಉತ್ತಮ. ಕೆಲವೊಮ್ಮೆ ನಮ್ಮ ನಿವೇಶನದಲ್ಲಿ ನೀಡಿದ ಹಣ, ಮತ್ತೂಂದು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಬಾಕಿ ಉಳಿಸಿಕೊಂಡ ಹಣದ ಬದಲಿಗೆ ವ್ಯಯವಾಗಿ, ನಮ್ಮ ಕಾರ್ಮಿಕರಿಗೆ ದೊರಕದೇ ಹೋಗಬಹುದು. ಒಂದು ವಾರ ಇದು ತೊಂದರೆ ಕೊಡದಿದ್ದರೂ ನಂತರ ನಮ್ಮಲ್ಲಿ ಕೆಲಸ ಮಾಡುವವರು ಗುಸುಗುಸು ಶುರು ಮಾಡಬಹುದು “ಹಣ ಸರಿಯಾಗಿ ಕೊಡದಿದ್ದರೆ ಹೇಗೆ’ ಎಂದು. ಎಂಥವರಿಗಾದರೂ, ಕಾಲಕಾಲಕ್ಕೆ ಹಣ ಕೊಟ್ಟೂ ಕಾರ್ಮಿಕರಿಗೆ ಸಂದಾಯ ಆಗದಿದ್ದರೆ, ಬೇಸರ ಆಗುವುದು ಖಂಡಿತ. ಆದುದರಿಂದ ಸ್ವಲ್ಪ ಮುಜುಗರ ಅನ್ನಿಸಿದರೂ, ಗುತ್ತಿಗೆದಾರರಿಗೆ, ಹಣವನ್ನು “ರೋಲಿಂಗ್‌ ಮಾಡದೆ’ ನಮ್ಮ ನಿವೇಶನದಲ್ಲಿ ಕಾರ್ಯ ನಿರ್ವಹಿಸುವವರಿಗೆ ತಡವಾಗದ ರೀತಿಯಲ್ಲಿ ಹಣ ನೀಡಬೇಕೆಂದೂ, ಬಾಕಿ ಉಳಿಸಿಕೊಳ್ಳಬಾರದೆಂದೂ ಶುರುವಿನಲ್ಲೇ ತಾಕೀತು ಮಾಡಬೇಕು.

ಶುರುವಿನಲ್ಲಿ ಹಣ ಬಿಗಿ ಮಾಡಿ
ಗಿಡಗಳಿಗೆ ಹೆಚ್ಚು ನೀರು ಹಾಕಿದರೆ, ಬೇರುಗಳು ಕೊಳೆಯುವ ಸಾಧ್ಯತೆ ಇರುತ್ತದೆ, ಹಾಗೆಯೇ ಕಡಿಮೆ ಆದರೂ ಬಾಡುತ್ತದೆ. ಅದೇ ರೀತಿಯಲ್ಲಿ ಮನೆ ಕಟ್ಟುವಾಗಲೂ ಕಾರ್ಮಿಕರು ಬೇರೆ ಕಡೆ ಹೋಗದಂತೆಯೂ, ಹೆಚ್ಚು ಕೊಟ್ಟು, ದುಬಾರಿ ಆಗದಂತೆಯೂ ಹಣವನ್ನು ನಿರ್ವಹಿಸುವುದು ಅತ್ಯಗತ್ಯ. ಮನೆಗೆ ಉಪಯೋಗಿಸುವ ವಸ್ತುಗಳ ತಯಾರಿಯಲ್ಲಿ ಬಹುತೇಕವು ಅತಿ ಹೆಚ್ಚು ಕಾರ್ಮಿಕರ ಶ್ರಮವನ್ನು ಬೇಡುತ್ತವೆ. ಮರಳನ್ನು ಲೋಡ್‌ ಮಾಡುವುದು, ನಿವೇಶನದಲ್ಲಿ ಲಾರಿಯಿಂದ ಕೆಳಗೆ ತಳ್ಳುವುದೇ ದೊಡ್ಡ ಕಾರ್ಯ ಆಗಿಬಿಡುತ್ತದೆ. ಹಾಗಾಗಿ ಸರಬರಾಜು ಮಾಡುವವರು ಒಂದಷ್ಟು ಮುಂಗಡವನ್ನೂ ಕೇಳಬಹುದು. ಅವರೇ ಹಣ ಹೂಡಿದರೆ, ಬೆಲೆ ಸ್ವಲ್ಪ ದುಬಾರಿ ಆಗಬಹುದು. ನಮಗೆ ಚೆನ್ನಾಗಿ ಪರಿಚಯವಿದ್ದರೆ, ಒಂದಷ್ಟು ಹಣವನ್ನು ಕೊಟ್ಟು ಅಗ್ಗದ ದರದಲ್ಲಿ ಪಡೆಯಲು ಪ್ರಯತ್ನಿಸಬಹುದು. ಶುರುವಿನಲ್ಲಿ ಹೆಚ್ಚು ಹಣ ನೀಡಿ ಪ್ರಯೋಗ ಮಾಡುವುದಕ್ಕಿಂತ, ಹಂತಹಂತವಾಗಿ ನಂಬಿಕೆ ಬಂದ ನಂತರ, ನೋಡಿಕೊಂಡು ಮುಂಗಡ ಕೊಟ್ಟು, ಬೆಲೆಯಲ್ಲಿ ಚೌಕಾಸಿ ಮಾಡಬಹುದು.

– ಆರ್ಕಿಟೆಕ್ಟ್ ಕೆ. ಜಯರಾಮ್‌

ಹೆಚ್ಚಿನ ಮಾಹಿತಿಗೆ: 9844132826

Advertisement

Udayavani is now on Telegram. Click here to join our channel and stay updated with the latest news.

Next