Advertisement

ಕುಂದಗೋಳ “ಕೈ’ವಶಕ್ಕೆ ಬೂತ್‌ ಮಟ್ಟದ ಜಾತಿ ಲೆಕ್ಕ

11:22 PM May 01, 2019 | Lakshmi GovindaRaj |

ಬೆಂಗಳೂರು: ಕುಂದಗೋಳ ವಿಧಾನಸಭೆಯ ಉಪ ಚುನಾವಣೆಯನ್ನು ಶತಾಯ ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್‌ ನಾಯಕರು, ಕ್ಷೇತ್ರದಲ್ಲಿ ಗ್ರಾಮ ಪಂಚಾಯತಿಯ ಬೂತ್‌ ಮಟ್ಟದಲ್ಲಿ ಸಚಿವರಾದಿಯಾಗಿ ಜಾತಿ ಲೆಕ್ಕಾಚಾರದಲ್ಲಿ ಮತದಾರರನ್ನು ಸೆಳೆಯಲು ಯೋಜನೆ ರೂಪಿಸಿದ್ದಾರೆ.

Advertisement

ಕ್ಷೇತ್ರದಲ್ಲಿನ ಪ್ರತಿ ಗ್ರಾಮ ಪಂಚಾಯತಿ ಹಾಗೂ ಗ್ರಾಮಗಳಲ್ಲಿನ ಬೂತ್‌ ಮಟ್ಟದಲ್ಲಿ ಜಾತಿ ಲೆಕ್ಕಾಚಾರವನ್ನು ನೀಡುವಂತೆ ಪಕ್ಷದ ಉಸ್ತುವಾರಿ ಕಾರ್ಯದರ್ಶಿ ಮಾಣಿಕ್ಯಂ ಠಾಕೂರ್‌, ಕುಂದಗೋಳ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಕ್ಷೇತ್ರದಲ್ಲಿ ಉಸ್ತುವಾರಿಯನ್ನಾಗಿ ಇಬ್ಬರು ಹಿರಿಯ ಸಚಿವರು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ್‌, ರಾಜ್ಯ ಉಸ್ತುವಾರಿ ಕಾರ್ಯದರ್ಶಿ ಮಾಣಿಕ್ಯಂ ಠಾಕೂರ್‌, ಜೊತೆಗೆ ಮಾಜಿ ಸಚಿವರಾದ ವಿನಯ್‌ ಕುಲಕರ್ಣಿ, ಸಂತೋಷ್‌ ಲಾಡ್‌ ಅವರನ್ನು ನೇಮಿಸಲಾಗಿದೆ. ಉಸ್ತುವಾರಿ ಸಂಯೋಜಕರಾಗಿ ಐವರು ಕೆಪಿಸಿಸಿ ಪದಾಧಿಕಾರಿಗಳನ್ನು ನೇಮಿಸಲಾಗಿದೆ.

ಇವರ ಹೊರತಾಗಿ ಪ್ರತಿ ಜಿಲ್ಲಾ ಪಂಚಾಯತಿಗೆ ಒಬ್ಬರು ಸಚಿವರು, ಇಬ್ಬರು ಶಾಸಕರು ಹಾಗೂ ಒಬ್ಬರು ಪಕ್ಷದ ಪದಾಧಿಕಾರಿಯನ್ನು ನೇಮಿಸಲು ನಿರ್ಧರಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕುಂದಗೋಳ ಹಾಗೂ ಛಬ್ಬಿ ಬ್ಲಾಕ್‌ ಕಾಂಗ್ರೆಸ್‌ ಘಟಕಗಳಿದ್ದು,

ಎರಡೂ ಬ್ಲಾಕ್‌ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಯ ಬೂತ್‌ ಮಟ್ಟದಲ್ಲಿ ಯಾವ ಜಾತಿಯ ಜನರು ಎಷ್ಟು ಪ್ರಮಾಣದಲ್ಲಿದ್ದಾರೆ, ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಯಾವ ಸಮುದಾಯದ ಜನರಿದ್ದಾರೆ ಎನ್ನುವುದನ್ನು ಅಂಕಿ-ಅಂಶ ಸಮೇತ ಮಾಹಿತಿ ಕಲೆ ಹಾಕಲು ಸೂಚಿಲಾಗಿದೆ.

Advertisement

ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಆರು ಜಿಲ್ಲಾ ಪಂಚಾಯತಿಗಳಿದ್ದು, 40 ಗ್ರಾಮ ಪಂಚಾಯತಿಗಳು, 87 ಗ್ರಾಮಗಳು ಹಾಗೂ 214 ಬೂತ್‌ಗಳಿವೆ. ಕ್ಷೇತ್ರದಲ್ಲಿ ಒಟ್ಟು 1,89,281 ಮತದಾರರಿದ್ದು, 29,000 ಕುಟುಂಬಗಳಿವೆ.

ಅವುಗಳಲ್ಲಿ ಕ್ಷೇತ್ರದ ಪ್ರತಿಯೊಂದು ಸಮುದಾಯದ ಜಾತಿ ಲೆಕ್ಕ ಹಾಕಿಕೊಂಡಿದ್ದು, ಪಂಚಮಸಾಲಿ ಸಮುದಾಯ 52,477, ಅಲ್ಪಸಂಖ್ಯಾತರು-36,679, ಕುರುಬರು-34,407, ಪರಿಶಿಷ್ಟ ಪಂಗಡ-16,899, ಪರಿಶಿಷ್ಠ ಜಾತಿ-14,608, ಸಾದರು-14,227, ಗಾಣಿಗೇರ್‌-12,084, ಇತರ ಸಮುದಾಯದವರು 7900 ಮತದಾರರಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿ.ಎಸ್‌.ಶಿವಳ್ಳಿಯವರು ಅತಿ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದರಿಂದ ಪ್ರತಿ ಮನೆಯ ಪ್ರತಿ ಮತವನ್ನೂ ಗಂಭೀರವಾಗಿ ಪರಿಗಣಿಸಿ ಪಕ್ಷದ ಅಭ್ಯರ್ಥಿಗೆ ಹಾಕಿಸಲು ಜಾತಿ ಲೆಕ್ಕವನ್ನೇ ಪ್ರಮುಖವಾಗಿ ಕಾಂಗ್ರೆಸ್‌ ನಾಯಕರು ನಂಬಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next