ವಿಜಯಪುರ: ಬೆಂಗಳೂರಿನಲ್ಲಿ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಲಿಂಕ್ ಬಳ್ಳಾರಿವರೆಗೆ ಮಾತ್ರವಲ್ಲ, ಇದರ ಜಾಲ ಬಹಳ ದೊಡ್ಡದಿದೆ. ಎನ್.ಐ.ಎ. ತನಿಖೆಯಲ್ಲಿ ಎಲ್ಲ ಬಯಲಾಗಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಶುಕ್ರವಾರ ನಗರದಲ್ಲಿ ನವೀಕೃತ ಲಿಂಗದಗುಡಿ ಲೋಕಾರ್ಪಣೆ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಅಭದ್ರತೆ, ಅಸುರಕ್ಷತೆ ಸೃಷ್ಟಿಸುವ ಸಂಚಿನ ಭಾಗವಿದು. ಪಾಕಿಸ್ತಾನದ ಐ.ಎಸ್.ಐ ನಂಟಿದೆ. 2047 ಕ್ಕೆ ಭಾರತನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ ಇಂಥ ಕೃತ್ಯಗಳ ಮೂಲಕ ಸಂಚಿನಿಂದ ಕೆಲಸ ಮಾಡಿದ್ದಾರೆ ಎಂದು ಹರಿಹಾಯ್ದರು.
ಕರ್ನಾಟಕ ರಾಜ್ಯದಲ್ಲಿ ಇಂಥ ಘಟನೆಗಳು ನಡೆಯುವಂತಾಗಲು ರಾಜ್ಯ ಸರ್ಕಾರದ ಮುಸ್ಲಿಂ ತುಷ್ಟಿಕರಣ ನೀತಿಯೇ ಪ್ರಮುಖ ಕಾರಣ. ರಾಜ್ಯದಲ್ಲಿ ಮುಸ್ಲಿಮರನ್ನು ಸಂತೈಸುವ ಮಾಡುತ್ತಿರುವುದರಿಂದ ಇಂಥ ಕೃತ್ಯವೆಸಗಲು ಅವರಿಗೆ ಮತ್ತಷ್ಟು ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಕಿಡಿಕಾರಿದರು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ಹಿನ್ನೆಲೆ ಹಾಗೂ ನಂಟು ರಾಜ್ಯಸಭೆ ನೂತನ ಸದಸ್ಯ ನಾಸಿರ್ ಹುಸೇನ್ ವರೆಗೂ ಹೋಗಬಹುದು ಎಂಬ ಅನುಮಾನವಿದೆ. ದೇಶ ವಿರೋಧಿ ಘೋಷಣೆ ಕೂಗಿದ ವ್ಯಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜೊತೆಗೆ ನಂಟು ಹೊಂದಿದ್ದಾರೆ. ಪಾಕ್ ಪರ ಘೋಷಣೆ ಕೂಗಿದ ವಿಚಾರದಲ್ಲಿ ನಾಸಿರ್ ಹುಸೇನ್ ಪಾತ್ರವೂ ಇದೆ. ಕಾರಣ ನಾಶೀರ್ ಗೆ ರಾಜ್ಯಸಭಾ ಸದಸ್ಯತ್ವದ ಪ್ರಮಾಣ ವಚನ ಬೋಧಿಸದಂತೆ ನಿವೃತ್ತ ಐಎಎಸ್ ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ರಾಜ್ಯಸಭೆ ಅಧ್ಯಕ್ಷರಾದ ಉಪ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಇಡೀ ಪ್ರಕರಣದ ಪ್ರಕರಣದ ತನಿಖೆ ಮುಗಿಯುವ ವರೆಗೂ ನಾಸಿರ್ ಗೆ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ನೀಡಬಾರದು. ಇದಕ್ಕೆ ನನ್ನ ಸಹಮತವೂ ಇದೆ. ನಾನು ಸಹ ಈ ಕುರಿತು ಉಪ ರಾಷ್ಟ್ರಪತಿಗಳಿಗೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.