Advertisement

ಕೇಬಲ್‌ ಗುಂಡಿ: ಮುಗಿಯದ ಗೋಳು, ರಸ್ತೆಯೂ ಹಾಳು

11:08 PM Apr 29, 2019 | sudhir |

ಕುಂದಾಪುರ: ಒಂದೆಡೆ ರಸ್ತೆ ಕಾಮಗಾರಿ ಪ್ರಯುಕ್ತ ಫೋನ್‌ಗಳು ನಿಷ್ಕ್ರಿಯವಾಗಿದ್ದರೆ ಇನ್ನೊಂದೆಡೆ ಕೇಬಲ್‌ಗಾಗಿ ರಸ್ತೆಯೇ ದುರಸ್ತಿಯಾಗುತ್ತಿದೆ. ರಾಜ್ಯ ಹೆದ್ದಾರಿ ಬದಿ ಕೇಬಲ್‌ಗಾಗಿ ಗುಂಡಿ ತೋಡಿ ಕಿ.ಮೀ.ಗಟ್ಟಲೆ ರಸ್ತೆಯನ್ನು ಹಾಳುಗೆಡವಲಾಗಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆ 1.1 ಕೋ.ರೂ. ಪರಿಹಾರ ನೀಡುವಂತೆ ಸೂಚಿಸಿದೆ.

Advertisement

ಬ್ರಾಡ್‌ಬ್ಯಾಂಡ್‌ ಇಲ್ಲ
ಕೋಟೇಶ್ವರದಿಂದ ಹಾಲಾಡಿ ಮೂಲಕ ಶಿವಮೊಗ್ಗಕ್ಕೆ ಹೋಗುವ ರಾಜ್ಯ ಹೆದ್ದಾರಿಯ ಕಾಮಗಾರಿ ಬಿದ್ಕಲ್‌ಕಟ್ಟೆ ಸಮೀಪ ನಡೆಯುತ್ತಿದೆ. ಪರಿಣಾಮ ಈ ಭಾಗದ ಬಿಎಸ್‌ಎನ್‌ಎಲ್‌ ದೂರವಾಣಿಗಳು ಸ್ತಬ್ಧವಾಗಿ ತಿಂಗಳುಗಳೇ ಕಳೆದಿವೆ. ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಸಂಪರ್ಕ ಇಲ್ಲದ ಕಾರಣ ಜನ್ನಾಡಿಯಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ನ ವ್ಯವಹಾರ ಸೇರಿದಂತೆ ಅನೇಕರಿಗೆ ತೊಂದರೆಯಾಗಿದೆ. ಬಿಎಸ್‌ಎನ್‌ಎಲ್‌ನವರು ಒಂದು ಕಡೆ ದುರಸ್ತಿ ಮಾಡಿ ಹೋದಾಗ ಇನ್ನೊಂದು ಕಡೆ ಕೇಬಲ್‌ ತುಂಡಾಗುತ್ತಿದೆ. ಶಂಕರನಾರಾಯಣ ಹಾಗೂ ಹಾಲಾಡಿಯಲ್ಲಿ ವೃತ್ತ ನಿರ್ಮಾಣ ನಡೆಯುತ್ತಿದ್ದು ಅಲ್ಲಿ ಯೂ ಇದೇ ಸಮಸ್ಯೆ ಎದುರಾಗಿದೆ.

ರಸ್ತೆಯೇ ಹಾಳಾಗಿದೆ
ತಲ್ಲೂರು ಸಿದ್ದಾಪುರ ರಸ್ತೆ, ವಿರಾಜಪೇಟೆ ಬೈಂದೂರು ರಸ್ತೆ, ಸೌಡ ಸಿದ್ದಾಪುರ ರಸ್ತೆ, ತೀರ್ಥಹಳ್ಳಿ ಕುಂದಾಪುರ ರಸ್ತೆ, ಚಿತ್ತೂರು ಹೆಮ್ಮಕ್ಕಿಹಾರ, ಇಡೂರು ಸಮೀಪ ರಸ್ತೆ ಬದಿ ರಿಲಾಯನ್ಸ್‌ನವರು ಜಿಯೋ ದೂರವಾಣಿಯ ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಸುವ ಸಂದರ್ಭ ರಸ್ತೆಗೇ ಹಾನಿ ಮಾಡಿದ್ದಾರೆ.

ಅಸಲಿಗೆ ರಿಲಾಯನ್ಸ್‌ನವರು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದು ಕೇಬಲ್‌ ಗುಂಡಿ ತೆಗೆದಿದ್ದರೂ, ಇಲಾಖೆ ಹೇಳಿದ ನಿಯಮಗಳನ್ನು ಪಾಲಿಸಿಲ್ಲ. ರಸ್ತೆಯಿಂದ ದೂರದಲ್ಲಿ ಮಣ್ಣು ಅಗೆಯುವ ಬದಲು ರಸ್ತೆಯನ್ನೇ ಅಗೆದು ಹಾಳು ಮಾಡಿದ್ದಾರೆ. ಮೊದಲೇ ಇಕ್ಕಟ್ಟಿನ ಕಾಡು ಹಾದಿಯಲ್ಲಿ ತೆಗೆದ ಗುಂಡಿಯಿಂದಾಗಿ ಅದೆಷ್ಟೋ ಬೈಕ್‌ ಸವಾರರು, ವಾಹನ ಸವಾರರು ಗುಂಡಿಗೆ ಬಿದ್ದ ಘಟನೆಗಳೂ ನಡೆದಿದೆ.

ಅನುಮತಿ ಉಲ್ಲಂಘನೆ
ರಿಲಾಯನ್ಸ್‌ಗೆ ಅನುಮತಿ ನೀಡಿದಾಗ ಹಾಕಿದ ಶರತ್ತುಗಳನ್ನು ಕಂಪನಿ ಕೆಲಸಗಾರರು ಉಲ್ಲಂ ಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಅವರ ಸಮಕ್ಷದಲ್ಲಿ ಕೆಲಸ ನಿರ್ವಹಿಸಬೇಕಿದ್ದ ಕಾರ್ಮಿಕರು ಮನ ಬಂದಂತೆ ಅಗೆದು ಡಾಮರು ಕಿತ್ತು ಹಾಕಿದ್ದಾರೆ. ಮಣ್ಣನ್ನು ರಸ್ತೆಯ ಮೇಲೆಯೇ ಹಾಕಿ ವಾಹನ ಓಡಾಟಕ್ಕೆ ಅಡ್ಡಿಯಾಗುವಂತೆ ಮಾಡಿದ್ದಾರೆ.
ರಸ್ತೆಯಲ್ಲೇ ಚೇಂಬರ್‌ಪಿಟ್‌ ಹಾಗೂ ಸಿಮೆಂಟ್‌ ಕಂಬಗಳನ್ನು ಕೆಲವೆಡೆ ಅಳವಡಿಸಿ ಅಪಘಾತಕ್ಕೆ ನೇರ ಆಹ್ವಾನ ನೀಡಿದ್ದಾರೆ. ಕೆಲವೆಡೆ ರಸ್ತೆಯನ್ನೇ ಅಗೆದು ಹೊಂಡ ತೋಡಿ ಕೇಬಲ್‌ ಹಾಕಿದ್ದಾರೆ.

Advertisement

ದೂರು
ರಸ್ತೆಯನ್ನು ಹಾಳು ಮಾಡಿದ ಕುರಿತು ಸಾರ್ವಜನಿಕರು ಸಾಕಷ್ಟು ಬಾರಿ ಇಲಾಖೆಗೆ ದೂರು ನೀಡಿದ್ದಾರೆ. ಕೆಲವು ಬಾರಿ ಕಂಪನಿಯ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿ ಯಂತ್ರಗಳನ್ನೇ ಇಲಾಖೆ ಮುಟ್ಟುಗೋಲು ಹಾಕಿ ಎಚ್ಚರಿಕೆ ನೀಡಿತ್ತು. ಆದರೆ ಕಂಪನಿಯವರು ಕ್ಯಾರೇ ಅನ್ನದೇ ಕೆಲಸ ಮುಂದುವರಿಸಿ ಇನ್ನಷ್ಟು ಹಾನಿ ಮಾಡಿದ್ದರು.

ಕೆಲಸ ನಿಲ್ಲಿಸಿದ ಇಲಾಖೆ
ಇಲಾಖೆ ವಿಧಿಸಿದ ಶರತ್ತು ಉಲ್ಲಂ ಸಿದ ಕಾರಣ ಜಿಯೋ ಕೇಬಲ್‌ ಅಳವಡಿಕೆಗೆ ಇಲಾಖೆ ತಡೆ ನೀಡಿದೆ. ಈ ಮೊದಲು 2018ರ ಮೇ 25 ಹಾಗೂ ಮೇ 31ರಂದು ನೋಟಿಸ್‌ ಮಾಡಲಾಗಿತ್ತು. ಆದರೆ ಕಂಪನಿ ಸೂಕ್ತವಾಗಿ ಸ್ಪಂದಿಸದ ಕಾರಣ ಈ ವರ್ಷ ಮಾ.28ರಂದು ಓಎಫ್ಸಿ ಕೇಬಲ್‌ ಅಳವಡಿಕೆಗೆ ನೀಡಿದ ಅನುಮತಿ ರದ್ದುಮಾಡಿ ಪತ್ರ ಕಳುಹಿಸಿದೆ. ರಸ್ತೆ ಮರು ನಿರ್ಮಾಣದ ಬಾಬ್ತು 1.1 ಕೋ.ರೂ. ಖರ್ಚನ್ನು ನೀಡುವಂತೆ ಅದರಲ್ಲಿ ಸೂಚಿಸಲಾಗಿದೆ.

ನೋಟಿಸ್‌ ನೀಡಲಾಗಿದೆ
ರಿಲಯನ್ಸ್‌ನವರು ಇಲಾಖಾ ಶರತ್ತು ಉಲ್ಲಂ ಸಿದ ಕಾರಣ ಅವರ ಅನುಮತಿ ರದ್ದತಿಗೆ ಮೇಲಧಿಕಾರಿಗಳಿಗೆ ಬರೆಯಲಾಗಿದೆ. ರಸ್ತೆ ಹಾಳು ಮಾಡಿದ ಕಾರಣ ದಂಡ ವಿಧಿಸುವಂತೆ ಕೇಳಲಾಗಿದೆ.
-ಹರ್ಷವರ್ಧನ್‌, ಸಹಾಯಕ ಎಂಜಿನಿಯರ್‌, ಲೋ.ಇ. ಕುಂದಾಪುರ

ದೂರವಾಣಿಯಿಲ್ಲ
ರಸ್ತೆ ನಿರ್ಮಾಣದಿಂದಾಗಿ ಬಿಎಸ್‌ಎನ್‌ಎಲ್‌ ಕೇಬಲ್‌ ಬ್ರಾಡ್‌ಬ್ಯಾಂಡ್‌ ಇಲ್ಲದೇ ವ್ಯವಹಾರಕ್ಕೆ ಸಮಸ್ಯೆಯಾಗಿದೆ.
-ಜಿ. ಎಂ. ಶೆಣೈ, ಜನ್ನಾಡಿ

Advertisement

Udayavani is now on Telegram. Click here to join our channel and stay updated with the latest news.

Next