Advertisement

ಚತುರ್ಮುಖೀ ಸಂಪುಟ! ನಾಲ್ವರ ಸುತ್ತ ಗಿರಕಿ ಹೊಡೆಯುತ್ತಿರುವ ಪುನಾರಚನೆ ಸಂಕಟ

01:10 AM Nov 22, 2020 | sudhir |

ಬೆಂಗಳೂರು: ಮುಖ್ಯಮಂತ್ರಿ ಬಿಎಸ್‌ವೈ ವರಿಷ್ಠರನ್ನು ಭೇಟಿಯಾಗಿ 3 ದಿನ ಕಳೆದರೂ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ವಿಚಾರವಾಗಿ ವರಿಷ್ಠರಿಂದ ಯಾವುದೇ ಸೂಚನೆ ಬಂದಿಲ್ಲ. ಇತ್ತ ಆಕಾಂಕ್ಷಿಗಳು ಸಚಿವಗಿರಿಗಾಗಿ ನಾಯಕರ ದುಂಬಾಲು ಬೀಳುವುದು ಮುಂದುವರಿದಿದೆ. ದಿಲ್ಲಿ ವರಿಷ್ಠರ ಮೇಲೆ ಒತ್ತಡ ಹೇರುವ ಪ್ರಯತ್ನಗಳೂ ಸದ್ದಿಲ್ಲದೆ ಸಾಗಿವೆ.

Advertisement

ಶನಿವಾರ ಸಚಿವ ರಮೇಶ್‌ ಜಾರಕಿಹೊಳಿ ಸುತ್ತ ರಾಜಕೀಯ ವಿದ್ಯಮಾನಗಳು ನಡೆದಿದ್ದವು. ರಮೇಶ್‌ ಶುಕ್ರ
ವಾರ ದಿಲ್ಲಿಯಲ್ಲಿ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿ ಯಾಗಿದ್ದರು. ಬಳಿಕ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಭೇಟಿಯಾಗಿ ಚರ್ಚಿಸಿದ್ದು ಕುತೂಹಲ ಮೂಡಿಸಿತ್ತು.

ಬಿಎಸ್‌ವೈ ವರಿಷ್ಠರತ್ತ ಬೆಟ್ಟು ಮಾಡಿದ್ದಾರೆ. ವರಿಷ್ಠರನ್ನು ಭೇಟಿಯಾಗಿ ಬಂದಿರುವ ರಮೇಶ್‌, ಸರಕಾರ ರಚನೆಗೆ ನೆರವಾದ ಎಲ್ಲರಿಗೂ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಹೇಳುವ ಮೂಲಕ ತಾನು ವಲಸಿಗರು ಮತ್ತು ಯೋಗೇಶ್ವರ್‌ ಪರ ಲಾಬಿ ನಡೆಸಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಮತ್ತೂಂದೆಡೆ ಮೂಲ ಬಿಜೆಪಿಗರು ಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ಲಾಬಿ ನಡೆಸಿದ್ದಾರೆ. ಸದ್ಯ ರಮೇಶ್‌ ಜಾರಕಿಹೊಳಿ, ಯಡಿಯೂರಪ್ಪ, ನಳಿನ್‌ ಮತ್ತು ಎಂ.ಪಿ. ರೇಣುಕಾಚಾರ್ಯ ಸುತ್ತ ಸಂಪುಟ ವಿಸ್ತರಣೆ “ಲಾಬಿ’ ಸುತ್ತುತ್ತಿದೆ.

ರಮೇಶ್‌ ಜಾರಕಿಹೊಳಿ
ಸಂಪುಟ ಬೆಳವಣಿಗೆಯಲ್ಲಿ ಸಚಿವ ರಮೇಶ್‌ ಜಾರಕಿಹೊಳಿ ಕೇಂದ್ರ ಬಿಂದುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಜತೆ ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂಬ ಪಟ್ಟು ಮುಂದುವರಿಸಿರುವ ಅವರು, ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿಯಾಗಿ ಕುತೂಹಲ ಹೆಚ್ಚಿಸಿದ್ದಾರೆ. ಯೋಗೇಶ್ವರ್‌ಗೆ ಸ್ಥಾನ ನೀಡಬೇಕೆನ್ನುವುದು ರಮೇಶ್‌ ಒತ್ತಡ. ಆದರೆ ಇದನ್ನು ರೇಣುಕಾಚಾರ್ಯ, ರಾಜು ಗೌಡ ಬಣ ಒಪ್ಪದೆ, ಸೋತಿರುವವರಿಗೆ ಅಧಿಕಾರ ಕೊಡಬಾರದೆಂದು ಆಗ್ರಹಿಸಿದೆ.

Advertisement

ಸಿಎಂ ಯಡಿಯೂರಪ್ಪ
ಯಡಿಯೂರಪ್ಪ ತನ್ನ ಸಂಪುಟದಲ್ಲಿ ವಲಸಿಗರು, ಮೂಲ ಬಿಜೆಪಿಯ ಇನ್ನಷ್ಟು ಮಂದಿಗೆ ಸ್ಥಾನ ಕಲ್ಪಿಸಿ ಮಾತು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ವರಿಷ್ಠರ ಸೂಚನೆ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ ಅವರ ಆಪ್ತ ಬಳಗದಲ್ಲಿ ಇರುವವರು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಅವರನ್ನು ಭೇಟಿಯಾಗಿ ಕೆಲವು ಹಾಲಿ ಸಚಿವರನ್ನು ಕೈಬಿಡಬೇಕು ಎಂಬುದಾಗಿ 40ಕ್ಕೂ ಹೆಚ್ಚು ಶಾಸಕರ ಒತ್ತಾಯವಿದೆ ಎಂಬ ಮಾಹಿತಿ ರವಾನಿಸಿದ್ದಾರೆ. ಇನ್ನೊಂದೆಡೆ ಇದೇ ತಂಡ ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದೆ.

ಎಂ.ಪಿ. ರೇಣುಕಾಚಾರ್ಯ
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಇಡೀ ಬೆಳವಣಿಗೆಯಲ್ಲಿ ನೂತನ ಪಾತ್ರ ವಹಿಸುವಂತೆ ಕಾಣಿಸುತ್ತಿದೆ. ಆರಂಭದಲ್ಲಿ ಸಿಎಂ ಅವರನ್ನು ಭೇಟಿಯಾಗಿ, ತಮ್ಮ ಬೇಡಿಕೆಯನ್ನು ಮುಂದಿಟ್ಟಿರುವ ರೇಣುಕಾಚಾರ್ಯ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಅವರನ್ನು ಭೇಟಿಯಾಗಿ ಸಿಎಂ ಪರವಾದ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗಿದೆ. ಶನಿವಾರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಇವರು ಮಾತುಕತೆ ನಡೆಸಿರುವುದು ಕೌತುಕಕ್ಕೆ ಕಾರಣವಾಗಿದೆ.

ನಳಿನ್‌ ಕುಮಾರ್‌ ಕಟೀಲು
ಸಂಪುಟ ಸರ್ಜರಿ ಸಿಎಂ ಪರಮಾಧಿಕಾರ ವಾದರೂ ಸಚಿವಾಕಾಂಕ್ಷಿಗಳು ನಳಿನ್‌ ಅವರನ್ನು ಭೇಟಿಯಾಗಿ ಸ್ಥಾನಮಾನಕ್ಕಾಗಿ ಮನವಿ ಮಾಡುತ್ತಿದ್ದಾರೆ. ಆ ಮೂಲಕ ರಾಜ್ಯಾಧ್ಯಕ್ಷರು ಸರಕಾರದ ನಿರ್ಧಾರಗಳಲ್ಲೂ ಮಹತ್ವದ ಪಾತ್ರ ವಹಿಸುತ್ತಿರುವುದು ಸ್ಪಷ್ಟವಾಗಿದೆ. ಈವರೆಗೆ ಸಚಿವ ಸ್ಥಾನಕ್ಕಾಗಿ ಸಿಎಂ ಬೆನ್ನು ಬೀಳುತ್ತಿದ್ದ ಎಂ.ಪಿ. ಕುಮಾರಸ್ವಾಮಿ ಅವರು ನಳಿನ್‌ ಅವರಲ್ಲಿ ಮನವಿ ಮಾಡಿದ್ದಾರೆ. ರಾಜ್ಯಾಧ್ಯಕ್ಷರಿದ್ದ ಮಂಗಳೂರಿಗೇ ತೆರಳಿ ಮನವಿ ಮಾಡಿರುವುದು ನಳಿನ್‌ ಪ್ರಭಾವಳಿಯನ್ನು ತೋರಿಸುವಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next