Advertisement

ಖಾತೆ ಹಂಚಿಕೆ : ಗೆದ್ದ ಸಿದ್ದರಾಮಯ್ಯ

06:00 AM Dec 28, 2018 | |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಖಾತೆ ಹಂಚಿಕೆ ಬಿಕ್ಕಟ್ಟು ಶಮನವಾಗಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಗೃಹ ಖಾತೆಯನ್ನು ತಮ್ಮ ಆಪ್ತ ಎಂ.ಬಿ.ಪಾಟೀಲರಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಸರ್ಕಾರದಲ್ಲಿ ಪ್ರಭಾವಿಯಾಗಿರುವ ಡಿ.ಕೆ. ಶಿವಕುಮಾರ್‌ ಅವರ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನೂಕಸಿದುಕೊಂಡಿದ್ದು ತಮ್ಮ ಇನ್ನೊಬ್ಬ ಆಪ್ತ ಇ. ತುಕಾರಾಂ ಅವರಿಗೆ ಕೊಡಿಸಿದ್ದಾರೆ. ಈ ಮೂಲಕ ಪರಮೇಶ್ವರ ಮತ್ತು ಡಿ.ಕೆ. ಶಿವಕುಮಾರ್‌ ಶಕ್ತಿಯನ್ನು ಸಿದ್ದರಾಮಯ್ಯ ಕುಗ್ಗಿಸಿದ್ದು, ಕಾಂಗ್ರೆಸ್‌ನಲ್ಲಿ ಮತ್ತೆ ಸಿದ್ದರಾಮಯ್ಯ ಕೈ ಮೇಲಾದಂತಾಗಿದೆ.

Advertisement

ಗೃಹ ಖಾತೆ ಬಿಟ್ಟುಕೊಡಲು ಹಿಂದೇಟು ಹಾಕಿದ್ದ ಉಪ ಮುಖ್ಯಮಂತ್ರಿ ಪರಮೇಶ್ವರ್‌ಗೆ ಮುಖಭಂಗವಾದಂತಾಗಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಬದಲಿಯಾಗಿ ಸಿಕ್ಕಿದೆ. ನಿರೀಕ್ಷೆಯಂತೆ ಪರಮೇಶ್ವರ್‌ ಅವರನ್ನು ನಿಯಂತ್ರಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲಿನ ಪರಮೇಶ್ವರ್‌ ವ್ಯಾಮೋಹವೇ ಗೃಹ ಖಾತೆಯನ್ನು ಕಳೆದುಕೊಳ್ಳುವಂತಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ. ಉಪ ಮುಖ್ಯಮಂತ್ರಿಯಾಗಿ ಎರಡು ಖಾತೆ ನೀಡಲೇಬೇಕು ಎಂದು ಪರಮೇಶ್ವರ್‌ ಪಟ್ಟು ಹಿಡಿದಿದ್ದರು. ಆದರೆ, ಎರಡು ಪ್ರಮುಖ ಖಾತೆಗಳನ್ನು ಒಬ್ಬರೇ ಸಚಿವರಿಗೆ ನೀಡುವಂತಿಲ್ಲ ಎಂದು ಉತ್ತರ‌ ಕರ್ನಾಟಕ ಭಾಗದ ನಾಯಕರಾದ ಎಂ.ಬಿ.ಪಾಟೀಲ್‌, ಎಚ್‌.ಕೆ. ಪಾಟೀಲ್‌ ಹಾಗೂ ಸತೀಶ್‌ ಜಾರಕಿಹೊಳಿ ಒತ್ತಡ ಹೇರಿದ್ದರು ಎನ್ನಲಾಗಿದೆ. ಈ ಮೂಲಕ ಆ ಭಾಗದ ನಾಯಕರ ಬೇಡಿಕೆಗೆ ರಾಹುಲ್‌ ಗಾಂಧಿ ಮನ್ನಣೆ ನೀಡಿದಂತಾಗಿದೆ.

ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಎರಡು ಖಾತೆಗಳನ್ನೂ ಇಟ್ಟುಕೊಂಡು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯನ್ನು ಬಿಟ್ಟುಕೊಡಲು ಪರಮೇಶ್ವರ್‌ ನಿರ್ಧರಿಸಿದ್ದರು. ಎರಡು ಪ್ರಮುಖ ಖಾತೆಗಳಲ್ಲಿ ಯಾವುದಾದರೂ ಒಂದನ್ನು ಬಿಟ್ಟುಕೊಡಲೇಬೇಕು ಎಂಬ ಒತ್ತಡವನ್ನು ಸಿದ್ದರಾಮಯ್ಯ ಬುಧವಾರ ನಡೆದ ಸಭೆಯಲ್ಲಿ ಬಲವಾಗಿ ಪ್ರತಿಪಾದಿಸಿದ್ದರು ಎನ್ನಲಾಗಿತ್ತು. ಪರಮೇಶ್ವರ್‌ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಮೊದಲ ಆದ್ಯತೆ ನೀಡಿ, ಗೃಹ ಖಾತೆಯನ್ನೂ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದರು. ಆದರೆ, ಸಿದ್ದರಾಮಯ್ಯ ಅವರ ಪ್ರಭಾವದ ಮುಂದೆ ಪರಮೇಶ್ವರ್‌ ರಾಜಕೀಯ ಲೆಕ್ಕಾಚಾರ ವಿಫ‌ಲಗೊಂಡಂತಾಗಿದೆ.

ಗೃಹ ಖಾತೆಯ ಬದಲಿಗೆ ಪರಮೇಶ್ವರ್‌ಗೆ ಕೃಷ್ಣ ಬೈರೇಗೌಡ ಅವರ ಬಳಿ ಇದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ನೀಡಲಾಗಿದೆ. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯನ್ನು ನೂತನ ಸಚಿವ ರಹೀಂ ಖಾನ್‌ಗೆ ವಹಿಸಿಕೊಡಲಾಗಿದೆ.

Advertisement

ಅಲ್ಲದೇ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಇ. ತುಕಾರಾಂಗೆ ನೀಡಲಾಗಿದ್ದು, ಡಿ.ಕೆ.ಶಿವಕುಮಾರ್‌ ಅವರ ಅಧಿಕಾರಕ್ಕೂ ಕತ್ತರಿ ಹಾಕಿದಂತಾಗಿದೆ. ಈ ಮೂಲಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್‌ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಹತೋಟಿಯಲ್ಲಿಡಲು ನಡೆಸಿದ ಕಾರ್ಯತಂತ್ರ ಯಶಸ್ವಿಯಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರ ಹಿತ ಕಾಯುವ ಬದಲು ಪರೋಕ್ಷವಾಗಿ ಜೆಡಿಎಸ್‌ ನಾಯಕರ ಜೊತೆ ಹೊಂದಾಣಿಕೆಯ ಆಡಳಿತ ನಡೆಸುತ್ತಿದ್ದ ಆರೋಪವನ್ನು ಪರಮೇಶ್ವರ್‌ ಹಾಗೂ ಡಿ.ಕೆ.ಶಿವಕುಮಾರ್‌ ಎದುರಿಸುತ್ತಿದ್ದು, ಅವರನ್ನು ನಿಯಂತ್ರಿಸುವಲ್ಲಿ  ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಉಳಿದಂತೆ ಸತೀಶ್‌ ಜಾರಕಿಹೊಳಿ ಅವರಿಗೆ ಆರ್‌. ಶಂಕರ್‌ ಹೊಂದಿದ್ದ ಅರಣ್ಯ ಖಾತೆ ನೀಡಲಾಗಿದ್ದು, ಎಂ.ಟಿ.ಬಿ. ನಾಗರಾಜ್‌ಗೆ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಬಳಿ ಹೆಚ್ಚುವರಿಯಾಗಿದ್ದ  ವಸತಿ ಖಾತೆ ನೀಡಲಾಗಿದೆ. ಸಿ.ಎಸ್‌.ಶಿವಳ್ಳಿ ಅವರಿಗೆ ರಮೇಶ್‌ ಜಾರಕಿಹೊಳಿ ಅವರ ಬಳಿ ಇದ್ದ ಪೌರಾಡಳಿತ ಮತ್ತು ಬಂದರು ಖಾತೆ ನೀಡಲಾಗಿದ್ದು, ಪಿ.ಟಿ.ಪರಮೇಶ್ವರ್‌ ನಾಯ್ಕ ಅವರಿಗೆ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಹೆಚ್ಚುವರಿಯಾಗಿ ಹೊಂದಿದ್ದ ಐಟಿ ಬಿಟಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್‌ ಪಾಟೀಲ್‌ ಬಳಿ ಇದ್ದ ಮುಜರಾಯಿ ಖಾತೆಯನ್ನೂ ಪಿ.ಟಿ. ಪರಮೇಶ್ವರ್‌ ನಾಯ್ಕಗೆ ನೀಡಲಾಗಿದೆ. ಆರ್‌.ಬಿ. ತಿಮ್ಮಾಪುರ್‌ ಅವರಿಗೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಬಳಿ ಹೆಚ್ಚುವರಿಯಾಗಿದ್ದ ಕೌಶಲ್ಯಾಭಿವೃದ್ಧಿ ಖಾತೆ ವಹಿಸಲಾಗಿದೆ. 

ನೂತನ ಸಚಿವರಿಗೆ ಖಾತೆಗಳ ವಿವರ
ಎಂ.ಬಿ.ಪಾಟೀಲ್‌-ಗೃಹ 
ಸತೀಶ್‌ ಜಾರಕಿಹೊಳಿ-ಅರಣ್ಯ 
ಇ. ತುಕಾರಾಂ-ವೈದ್ಯಕೀಯ ಶಿಕ್ಷಣ
ಎಂ.ಟಿ.ಬಿ. ನಾಗರಾಜ್‌-ವಸತಿ
ರಹೀಂಖಾನ್‌-ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ.
ಪಿ.ಟಿ.ಪರಮೇಶ್ವರ್‌ ನಾಯ್ಕ-ಐಟಿ ಬಿಟಿ, ಮುಜರಾಯಿ. 
ಸಿ.ಎಸ್‌.ಶಿವಳ್ಳಿ-ಪೌರಾಡಳಿತ ಮತ್ತು ಬಂದರು ಖಾತೆ. 
ಆರ್‌.ಬಿ. ತಿಮ್ಮಾಪುರ-ಕೌಶಾಲ್ಯಾಭಿವೃದ್ಧಿ ಮತ್ತು ತರಬೇತಿ ಇಲಾಖೆ. 

ಹೆಚ್ಚುವರಿ ಖಾತೆ ಕಳೆದುಕೊಂಡವರು
ಜಿ. ಪರಮೇಶ್ವರ- ಗೃಹ, ಯುವಜನ ಸೇವೆ ಮತ್ತು ಕ್ರೀಡೆ
ಡಿ.ಕೆ. ಶಿವಕುಮಾರ್‌- ವೈದ್ಯಕೀಯ ಶಿಕ್ಷಣ
ಯು.ಟಿ. ಖಾದರ್‌- ವಸತಿ ಖಾತೆ
ಕೃಷ್ಣಬೈರೇಗೌಡ- ಕಾನೂನು ಮತ್ತು ಸಂಸದೀಯ ವ್ಯವಹಾರ
ಆರ್‌.ವಿ. ದೇಶಪಾಂಡೆ- ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ
ಕೆ.ಜೆ. ಜಾರ್ಜ್‌- ಐಟಿ, ಬಿಟಿ
ರಾಜಶೇಖರ ಪಾಟೀಲ್‌- ಮುಜರಾಯಿ

Advertisement

Udayavani is now on Telegram. Click here to join our channel and stay updated with the latest news.

Next