ಬೆಂಗಳೂರು: ದಿಲ್ಲಿ ಪ್ರವಾಸದಿಂದ ಸಿಎಂ-ಡಿಸಿಎಂ ಹಿಂದಿರುಗಿದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ಮುನ್ನೆಲೆಗೆ ಬಂದಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಈ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಎರಡು ದಿನಗಳ ಈ ಪ್ರವಾಸದಲ್ಲಿ ಹೈಕಮಾಂಡ್ ಇಂತಹ ಒಂದು ಸಂದೇಶ ರವಾನಿಸಿದೆ.
ಸಚಿವರ ಹೇಳಿಕೆಗಳು ಕೂಡ ಇದಕ್ಕೆ ಪೂರಕವಾಗಿವೆ. ಮೂರು ದಿನಗಳ ಹಿಂದಷ್ಟೇ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಚಿವ ಸಂಪುಟ ಪುನಾರಚನೆ ಆಗಬಹುದು ಎಂದಿದ್ದರು. ಇದರ ಬೆನ್ನಲ್ಲೇ ಗುರುವಾರ ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಡಾ| ಎಚ್.ಸಿ. ಮಹದೇವಪ್ಪ ಕೂಡ ಇಂಥದ್ದೇ ಸುಳಿವು ನೀಡಿದ್ದಾರೆ.
ಸ್ವತಃ ಸಿಎಂ ಕೂಡ ಸಚಿವ ಸಂಪುಟ ಪುನಾರಚನೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿಲ್ಲ. ಸದ್ಯಕ್ಕೆ ಆಲೋಚನೆ ಇಲ್ಲ. ಆದರೆ ನಮ್ಮದು ಹೈಕಮಾಂಡ್ ಪಕ್ಷವಾಗಿದ್ದರಿಂದ ಅಲ್ಲಿ ತೀರ್ಮಾನ ಆಗಲಿದೆ ಎಂದಿದ್ದರು. ಮತ್ತೂಂದೆಡೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಸಚಿವರ ತಲೆದಂಡ ಖಚಿತ ಎಂಬ ಎಚ್ಚರಿಕೆಯನ್ನು ಈ ಹಿಂದೆಯೇ ಹೈಕಮಾಂಡ್ ನೀಡಿತ್ತು. ಸಾರ್ವತ್ರಿಕ ಚುನಾವಣೆ ಫಲಿತಾಂಶಕ್ಕೆ ನಾಲ್ಕು ದಿನಗಳು ಮಾತ್ರ ಬಾಕಿ ಇವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನಾರಚನೆ ಚರ್ಚೆಗೆ ರೆಕ್ಕೆ-ಪುಕ್ಕಗಳು ಬಂದಿವೆ.
ಸರಕಾರಕ್ಕೆ ಈಚೆಗಷ್ಟೇ ಒಂದು ವರ್ಷ ತುಂಬಿದೆ. ಈ ಅವಧಿಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆಯುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಯಶಸ್ವಿಯೂ ಆಗಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂ. ಸುರಿಯಲಾಗಿದೆ. ಸುಮಾರು ಒಂದೂವರೆ ಕೋಟಿ ಕುಟುಂಬಗಳು ಇದರ ಲಾಭ ಪಡೆಯುತ್ತಿವೆ. ಈ ಸಕಾರಾತ್ಮಕ ಅಂಶಗಳ ನಡುವೆಯೂ ಜಿಲ್ಲಾ ಉಸ್ತುವಾರಿ ಸಚಿವರ ಒತ್ತಡದ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಮಂಡ್ಯದ ನಾಗಮಂಗಲ ಕೆಎಸ್ಸಾರ್ಟಿಸಿ ಡಿಪೋದ ಚಾಲಕ ಮತ್ತು ನಿರ್ವಾಹಕ ಜಗದೀಶ್ ಆತ್ಮಹತ್ಯೆಗೆ ಯತ್ನ, ಈಚೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಸಹಿತ ಹಲವು ಅಂಶಗಳು ಸರ್ಕಾರಕ್ಕೆ ಮುಜುಗರ ಉಂಟುಮಾಡಿವೆ.
ಮತ್ತೂಂದೆಡೆ ಸಚಿವರಿಗೆ ಲೋಕಸಭಾ ಚುನಾವಣೆ ಕಣಕ್ಕಿಳಿಯುವಂತೆ ಸೂಚಿಸಿದಾಗ ಹಿಂದೇಟು ಹಾಕಿದ್ದಲ್ಲದೆ, ತಮ್ಮ ಮಕ್ಕಳು ಮತ್ತು ಸಂಬಂಧಿಕರಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿಕೊಂಡು ಬರುವ ವಾಗ್ಧಾನ ನೀಡಿದ್ದಾರೆ. ಒಂದು ವೇಳೆ ವ್ಯತಿರಿಕ್ತ ಫಲಿತಾಂಶ ಬಂದರೆ ತಲೆದಂಡಕ್ಕೆ ಸಜ್ಜಾಗುವಂತೆ ಹೈಕಮಾಂಡ್ ಆಗಲೇ ಸ್ಪಷ್ಟ ಸೂಚನೆ ನೀಡಿತ್ತು. ಫಲಿತಾಂಶಕ್ಕೆ ಸಂಬಂಧಿಸಿದ ಇದುವರೆಗಿನ ಲೆಕ್ಕಾಚಾರಗಳು ಪಕ್ಷಕ್ಕೆ ಪೂರಕವಾಗಿಯೇ ಇವೆ. ಆದರೆ ಅಂದುಕೊಂಡಂತೆ ಫಲಿತಾಂಶ ಬಂದರೂ ಸಚಿವರ ಪ್ರದರ್ಶನ ಹೇಗಿದೆ ಎಂಬ ವಿಶ್ಲೇಷಣೆಯೂ ನಡೆಯಲಿದೆ.
ಇವುಗಳ ಜತೆಗೆ ಸಚಿವ ಸಂಪುಟದಲ್ಲಿ ಕೆಲವರು ನಿರೀಕ್ಷಿತ ಮಟ್ಟದಲ್ಲಿ ಸಕ್ರಿಯವಾಗಿಲ್ಲ. ಅಂತಹವರಿಗೆ ಕೊಕ್, ಲೋಕಸಭಾ ಚುನಾವಣೆಯಲ್ಲಿ ಕೈಹಿಡಿದ ಸಮುದಾಯಗಳ ಪ್ರತಿನಿಧಿಗಳಿಗೆ ಮಣೆ ಹಾಕುವುದು, ಪ್ರದೇಶವಾರು ಮತ್ತು ಸಮುದಾಯ, ಸಿಎಂ-ಡಿಸಿಎಂ ಬಣಗಳ ಲೆಕ್ಕಾಚಾರ ಒಳಗೊಂಡಂತೆ ಹಲವು ಅಂಶಗಳ ಆಧಾರದಲ್ಲಿ ಸಚಿವ ಸಂಪುಟವನ್ನು ಸಮತೋಲನ ಮಾಡುವ ಚಿಂತನೆ ಇದೆ. ಆದರೆ ಇದೆಲ್ಲವೂ ಫಲಿತಾಂಶವನ್ನು ಅವಲಂಬಿಸಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಜೂನ್ 4ರತ್ತ ನೆಟ್ಟಿದೆ.
ಹೈಕಮಾಂಡ್ ಬಯಸಿದರೆ ಸಂಪುಟ ಪುನಾರಚನೆ ಸಹಿತ ಎಲ್ಲವೂ ಆಗುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ.
– ಎಂ.ಬಿ. ಪಾಟೀಲ್, ಕೈಗಾರಿಕೆ ಸಚಿವ
ಎಲ್ಲರಿಗೂ ಮುಕ್ತ ಅವಕಾಶಗಳಿವೆ. ಸಂಪುಟ ಪುನಾರಚನೆ ಸಹಿತ ಎಲ್ಲವನ್ನೂ ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ.
-ಡಾ| ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ