ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ರಾಜ್ಯದಲ್ಲಿ ಸಚಿವಾಕಾಂಕ್ಷಿಗಳು ಮತ್ತೆ ಸಂಪುಟ ಪುನಾರಚನೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ, ರಾಜ್ಯದಲ್ಲಿ ವಿಧಾನ ಮಂಡಲ ಅಧಿವೇಶನ ಹಾಗೂ ಹೊಸ ಸರ್ಕಾರ ರಚನೆಯಲ್ಲಿ ಹೈಕಮಾಂಡ್ ನಾಯಕರು ಸಕ್ರೀಯರಾಗಿರುವುದರಿಂದ ಯುಗಾದಿವರೆಗೂ ಸಂಪುಟ ಪುನಾರಚನೆ ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪಂಚರಾಜ್ಯಗಳ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಸಂಪುಟ ಪುನಾರಚನೆ ಮಾಡುವ ಬಗ್ಗೆ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪಂಚರಾಜ್ಯಗಳ ಚುನಾವಣೆ ಮುಗಿರಯುವವರೆಗೂ ಯಾವುದೇ ರಾಜಕೀಯ ತೀರ್ಮಾಣಗಳನ್ನು ತೆಗೆದುಕೊಳ್ಳದಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿತ್ತು ಎನ್ನಲಾಗಿದ್ದು, ಅದೇ ಕಾರಣಕ್ಕೆ ರಾಜ್ಯದಲ್ಲಿ ಸಂಪುಟ ಪುನಾರಚನೆ ಮುಂದೂಡಲಾಗಿತ್ತು.
ಆದರೆ, ಈಗ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವುದರಿಂದ ರಾಜ್ಯದಲ್ಲಿ ಮುಂದಿನ ವರ್ಷದ ಚುನಾವಣೆಗೆ ಯುವಕರ ಸಕ್ರೀಯ ಸಂಪುಟ ರಚನೆ ಮಾಡಬೇಕೆಂಬ ಬೇಡಿಕೆ ಸಚಿವಾಕಾಂಕ್ಷಿ ಶಾಸಕರಿಂದ ಕೇಳಿ ಬರುತ್ತಿದ್ದು, ಆದಷ್ಟು ಬೇಗ ಸಂಪುಟ ಪುನಾರಚನೆ ಮಾಡಬೇಕೆಂದು ರಾಜ್ಯ ನಾಯಕರ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ.
ಇದನ್ನೂ ಓದಿ:ಗೋವಾ: ಸೋಮವಾರ ಸದನವನ್ನು ವಿಸರ್ಜಿಸಲು ನಿರ್ಧರಿಸಿದ ಸಾವಂತ್
ಆದರೆ, ರಾಜ್ಯದಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದು, ಮಾರ್ಚ್ 30 ವರೆಗೂ ನಡೆಯಲಿದೆ. ಅಲ್ಲದೇ ಪಂಚರಾಜ್ಯಗಳ ಚುನಾವಣೆಯಲ್ಲಿ ಜಯಗಳಿಸಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ನೇಮಕ, ನೂತನ ಸಚಿವ ಸಂಪುಟ ರಚನೆ ಕಾರ್ಯದಲ್ಲಿಯೇ ಬಿಜೆಪಿ ಹೈಕಮಾಂಡ್ ಗಮನ ಹರಿಸುವುದರಿಂದ ಏಪ್ರಿಲ್‌ವರೆಗೂ ಸಂಪುಟ ಪುನಾರಚನೆ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಎಂಬ ಮಾಹಿತಿ ಬಿಜೆಪಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ, ಅಧಿವೇಶನ ಮುಗಿಯುವವರೆಗೂ ದೆಹಲಿಗೆ ತೆರಳುವುದು ಅನುಮಾನ ಎನ್ನಲಾಗಿದ್ದು, ಸಂಪುಟ ಸರ್ಕಸ್ ಏನೇ ಇದ್ದರೂ, ಯುಗಾದಿ ನಂತರವೇ ನಡೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಂಪುಟ ಪುನಾರಚನೆ ಆಗಬೇಕು ಎನ್ನುವುದು ಬಹುತೇಕ ಶಾಸಕರ ಅಭಿಪ್ರಾಯವಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪುನಾರಚನೆ ಆಗಬೇಕೆನ್ನುವುದು ಬೇಡಿಕೆ. ಅದು ಭಿನ್ನಮತವಲ್ಲ.
-ಎಂ.ಪಿ. ರೇಣುಕಾಚಾರ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ.