ಬೆಂಗಳೂರು: ಎಸಿಬಿ ರದ್ದು ಹಾಗೂ ಲೋಕಾಯುಕ್ತ ಬಲವರ್ಧನೆಗೆ ಸಂಬಂಧ ಪಟ್ಟಂತೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಕಾನೂನು ಇಲಾಖೆ ಹಾಗೂ ಸರಕಾರದ ಅಡ್ವೊಕೇಟ್ ಜನರಲ್ ಅವರ ನೇತೃತ್ವದಲ್ಲಿ ತೀರ್ಪಿನ ಅಧ್ಯಯನ ಮಾಡಲು ಸಮಿತಿ ರಚನೆ ಮಾಡಲಾಗಿದೆ.
ಎಸಿಬಿ ರದ್ದು ಮಾಡುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲೂ ಹೇಳಿರುವುದರಿಂದ ಈ ತೀರ್ಪು ಸರಕಾರವನ್ನು ಅಡಗತ್ತರಿಗೆ ಸಿಲುಕಿಸಿದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಲಾಗಿದೆ.
ಅಧ್ಯಯನದ ಬಳಿಕವೇ ಯಾವ ನಿರ್ಧಾರ ಎಂಬುದನ್ನು ತಿಳಿಸುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಇಬ್ಬರೂ ತಿಳಿಸಿದ್ದಾರೆ.
ಇದನ್ನೂ ಓದಿ:ನೇಮಕಾತಿಗಳ ಅಕ್ರಮ ಪರೀಕ್ಷೆ: ತ್ವರಿತ ನ್ಯಾಯಾಲಯ ಸ್ಥಾಪನೆಗೆ ಕಾಂಗ್ರೆಸ್ ಆಗ್ರಹ
ತೀರ್ಪಿನ ಬಗ್ಗೆ ತಕ್ಷಣ ಏನನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ. 260 ಪುಟಗಳ ಬೃಹತ್ ತೀರ್ಪು ಇದಾಗಿದೆ. ಜತೆಗೆ ಕಾನೂನು ಹಾಗೂ ನಿಯಮಾವಳಿಗಳಿಗೆ ಸಂಬಂಧಪಟ್ಟ ಅನೇಕ ವಿಚಾರಗಳು ಅಡಕವಾಗಿದೆ. ಹೀಗಾಗಿ ಅಧ್ಯಯನ ಅತ್ಯಗತ್ಯ ಎಂದು ಹೇಳಿದರು.
ಹೊಸದಾಗಿ ಲೋಕಾಯುಕ್ತ ಕಾಯಿದೆ ತಿದ್ದುಪಡಿ ಮಾಡಬೇಕೋ ಅಥವಾ ಹಿಂದೆ ಇದ್ದ ಸ್ಥಿತಿಯಲ್ಲೇ ಒಪ್ಪಿಕೊಳ್ಳಬೇಕೋ ಎಂಬುದನ್ನು ಮುಂದೆ ನಿರ್ಧರಿಸುತ್ತೇವೆ ಎಂದು ತಿಳಿಸಿದರು.