ನವದೆಹಲಿ: ಸಂಸದರ ಸಂಬಳ ಹೆಚ್ಚಳಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ನಿರ್ಧಾರದಿಂದಾಗಿ ಕ್ಷೇತ್ರ ಭತ್ಯೆ, ಪೀಠೊಪಕರಣ ಭತ್ಯೆ ಮತ್ತು ಸಂವಹನ ವೆಚ್ಚ ಗಮನಾರ್ಹವಾಗಿ ಏರಿಕೆಯಾಗಲಿದೆ ಎನ್ನಲಾಗಿದೆ. ಕ್ಷೇತ್ರ ಭತ್ಯೆಯನ್ನು 45 ಸಾವಿರ ರೂ.ನಿಂದ 60 ಸಾವಿರ ರೂ.ಗೆ ಏರಿಸಲು ಸಂಸದೀಯ ವ್ಯವಹಾರಗಳ ಸಚಿವಾಲಯ ಪ್ರಸ್ತಾಪಿಸಿದೆ. ಅಲ್ಲದೆ ಒಂದು ಬಾರಿ ನೀಡಲಾಗುವ ಪೀಠೊಪಕರಣ ಭತ್ಯೆಯನ್ನು 75 ಸಾವಿರ ರೂ.ನಿಂದ ಒಂದು ಲಕ್ಷಕ್ಕೆ ಏರಿಸಲೂ ಪ್ರಸ್ತಾಪಿಸಲಾಗಿದೆ. ಬಜೆಟ್‌ನಲ್ಲಿ ಸಂಸದರ ಸಂಬಳ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿದ್ದ ವಿತ್ತ ಸಚಿವ ಅರುಣ ಜೇಟ್ಲಿ, ಪ್ರತಿ ಐದು ವರ್ಷಗಳಿಗೊಮ್ಮೆ ವೇತನ ಪರಿಷ್ಕರಿಸಲು ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗುತ್ತದೆ. ಹಣದುಬ್ಬರಕ್ಕೆ ಅನುಗುನವಾಗಿ ಇವರ ಭತ್ಯೆ ಮತ್ತು ವೇತನ ಪರಿಷ್ಕರಿಸಲಾಗುತ್ತದೆ ಎಂದಿದ್ದರು. ಸದ್ಯ ಸಂಸದರು ಇತರ ಭತ್ಯೆಗಳನ್ನು ಹೊರತುಪಡಿಸಿ 50 ಸಾವಿರ ರೂ. ಸಂಬಳ ಪಡೆಯುತ್ತಿದ್ದು, ಇದನ್ನು 1 ಲಕ್ಷಕ್ಕೆ ಏರಿಸುವ ಪ್ರಸ್ತಾವನೆಗೂ ಅನುಮತಿ ನೀಡಲಾಗಿದೆ.