Advertisement
ರವಿವಾರ ಸಂಜೆ ವರಿಷ್ಠರಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಬೊಮ್ಮಾಯಿ ದಿಲ್ಲಿಗೆ ತೆರಳಿದರು. ನೂತನ ಸಚಿವ ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಕುರಿತು ಅವರು ನಡ್ಡಾ ಜತೆ ಚರ್ಚಿಸಲಿದ್ದಾರೆ.
Related Articles
Advertisement
ಡಿಸಿಎಂ ಹುದ್ದೆಗೆ ಕಸರತ್ತು : ಹಿರಿತನ, ಜಾತಿ ಆಧಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಹಿರಿಯ ಸಚಿವರು ನಿರಂತರ ಪ್ರಯತ್ನ ನಡೆಸಿದ್ದಾರೆ. ಆರ್. ಅಶೋಕ್ ಮತ್ತು ಕೆ.ಎಸ್. ಈಶ್ವರಪ್ಪ ಮತ್ತೆ ಡಿಸಿಎಂ ಆಗಲು ಕಸರತ್ತು ನಡೆಸಿದ್ದಾರೆ. ವರಿಷ್ಠರು ತಮ್ಮನ್ನು ಡಿಸಿಎಂ ಸ್ಥಾನಕ್ಕೆ ಪರಿಗಣಿಸುತ್ತಾರೆ ಎಂಬ ವಿಶ್ವಾಸದಲ್ಲಿ ಬಿ. ಶ್ರೀರಾಮುಲು ಇದ್ದಾರೆ.
ಯತ್ನಾಳ್, ಅರವಿಂದ ಬೆಲ್ಲದ ಕೂಡ ಡಿಸಿಎಂ ಸ್ಥಾನಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ. ದಲಿತ ಕೋಟಾದಡಿ ಗೋವಿಂದ ಕಾರಜೋಳ ಅಥವಾ ಅರವಿಂದ ಲಿಂಬಾವಳಿ ಅವರಲ್ಲಿ ಒಬ್ಬರನ್ನು ಪರಿಗಣಿಸಲಾಗುತ್ತದೆ ಎನ್ನಲಾಗುತ್ತಿದೆ.
ಲಕ್ಷ್ಮಣ ಸವದಿ ಮತ್ತು ಡಾ| ಅಶ್ವತ್ಥನಾರಾಯಣ ಕೂಡ ಲಾಬಿಯಲ್ಲಿ ಹಿಂದೆ ಬಿದ್ದಿಲ್ಲ. ಸಿ.ಟಿ. ರವಿ ಅವರ ಹೆಸರು ಕೂಡ ಡಿಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ.
ಬಿಎಸ್‌ವೈ ಜತೆ ಚರ್ಚೆ :
ಸಿಎಂ ಬೊಮ್ಮಾಯಿ ಅವರು ರವಿವಾರ ಬೆಳಗ್ಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾದ ವಲಸಿಗ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ವಲಸಿಗರಲ್ಲಿ ಆರೋಪ ಹೊತ್ತಿರುವವರನ್ನು ಸಚಿವ ಸಂಪುಟದಿಂದ ದೂರ ಇರಿಸಬೇಕೆಂದು ಆರೆಸ್ಸೆಸ್ ಸೂಚನೆ ನೀಡಿದೆ ಎನ್ನಲಾಗಿದ್ದು, ಇದೂ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಬಿಎಸ್‌ವೈ ಅವರು ವಲಸಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಆಕಾಂಕ್ಷಿಗಳಿಂದ ಸಿಎಂ ಭೇಟಿ :
ಸಚಿವ ಸಂಪುಟ ರಚನೆಯ ಲಾಬಿ ನಡೆದಿರುವ ಹೊತ್ತಿನಲ್ಲೇ ವಿ. ಸೋಮಣ್ಣ, ಬಿ.ಸಿ. ಪಾಟೀಲ್, ಮುರುಗೇಶ್ ನಿರಾಣಿ, ಆರ್. ಶಂಕರ್, ಶಾಸಕರಾದ ಶಿವನಗೌಡ ನಾಯಕ್, ಮಹೇಶ್ ಕುಮಠಳ್ಳಿ, ಎಂ.ವಿ. ವೀರಭದ್ರಯ್ಯ ಅವರು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಚಿವ ಸಂಪುಟದಲ್ಲಿ ತಮಗೂ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಬೊಮ್ಮಾಯಿ ಯಾರಿಗೂ ಸ್ಪಷ್ಟ ಭರವಸೆ ನೀಡಿಲ್ಲ ಎಂದು ತಿಳಿದುಬಂದಿದೆ.
ಸಂಕಷ್ಟ ಬಂದರೆ ನೆರವು: ದೇವೇಗೌಡ :
ಬಿಜೆಪಿ ಸರಕಾರಕ್ಕೆ ಸಂಕಷ್ಟ ಎದುರಾದರೆ ಬೆಂಬಲ ನೀಡುತ್ತೇನೆ. ಮಧ್ಯಾಂತರ ಚುನಾವಣೆಗೆ ಹೋಗುವ ಆಸೆ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬೊಮ್ಮಾಯಿ ತಮ್ಮನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಗೌಡರು, ಬಿಜೆಪಿಯು ಬಿಎಸ್‌ವೈ ಅವರಿಗೆ 2 ವರ್ಷ ಅವಕಾಶ ಕೊಟ್ಟಿದೆ. ಈಗ ಬಸವರಾಜ ಬೊಮ್ಮಾಯಿ ಅವರಿಗೆ ಸ್ಥಾನ ನೀಡಿದೆ. ಎಸ್.ಆರ್. ಬೊಮ್ಮಾಯಿ ನನ್ನ ಜತೆ ರಾಜಕಾರಣ ಮಾಡಿದವರು. ಅವರ ಪುತ್ರ ಈಗ ಸಿಎಂ ಆಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಸಲಹೆ ಕೇಳಿದರೆ ಕೊಡುತ್ತೇನೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸುವೆ. ಅವರ ಸೂಚನೆಯಂತೆ ಶೀಘ್ರವೇ ಸಂಪುಟ ರಚನೆ ಆಗಲಿದೆ.– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ ಅವರು ನನಗೆ ಆತ್ಮೀಯ ಸ್ನೇಹಿತರು. ರಾಜಕಾರಣ ಬೇರೆ, ವೈಯಕ್ತಿಕ ವಿಶ್ವಾಸ ಬೇರೆ. ದೇವೇಗೌಡರ ಆಶೀರ್ವಾದ ಪಡೆದಿದ್ದಾರೆ. ನೂತನ ಮುಖ್ಯಮಂತ್ರಿಯವರು ಕೊರೊನಾ 3ನೇ ಅಲೆ ತಡೆಗಟ್ಟಿ ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸಲಿ. – ಎಚ್.ಡಿ. ರೇವಣ್ಣ, ಜೆಡಿಎಸ್ ನಾಯಕ