Advertisement

ಗೋ ನೀತಿಗೆ ಸಂಪುಟ ಅಸ್ತು , ರೈತರ ಮನೆ ಬಾಗಿಲಿಗೆ ಮೇವು

08:29 AM Nov 02, 2019 | Sriram |

ಬೆಂಗಳೂರು: ರಾಜ್ಯದ ಎಲ್ಲ ತಾಲೂಕುಗಳಲ್ಲಿ ಗೋ ಶಾಲೆ ಮತ್ತು ಮೇವು ಬ್ಯಾಂಕ್‌ ಸ್ಥಾಪನೆ ಹಾಗೂ ನಿರ್ವಹಣೆಗಾಗಿ ಪ್ರತ್ಯೇಕ ಗೋ ನೀತಿ ಜಾರಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Advertisement

ಹೈಕೋರ್ಟ್‌ ಸೂಚನೆ ಮೇರೆಗೆ ನೂತನ ನೀತಿ ಜಾರಿಯಾಗಲಿದ್ದು ರೈತರ ಮನೆ ಬಾಗಿಲಿಗೆ ದಿನಕ್ಕೆ ಕನಿಷ್ಠ 5 ಕೆಜಿಯಂತೆ ನಿಗದಿತ ಪ್ರಮಾಣದ ಮೇವನ್ನು ಕಾರ್ಡ್‌ ಮೂಲಕ ತಲುಪಿಸುವುದು ಇದರ ಉದ್ದೇಶ.

ಸಂಪುಟ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಗೋಶಾಲೆ ಮತ್ತು ಮೇವು ಬ್ಯಾಂಕ್‌ ಸ್ಥಾಪನೆಯಾದ ಅನಂತರ ಅದರ ನಿರ್ವಹಣೆ ಹೇಗೆ ಮಾಡಬೇಕು, ಯಾರು ಮಾಡಬೇಕು, ಅವರ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳೇನು ಎಂಬುದನ್ನು ನೀತಿಯು ಒಳಗೊಂಡಿರುತ್ತದೆ ಎಂದು ತಿಳಿಸಿದರು.

2ನೇ ಜತೆ ಸಮವಸ್ತ್ರ
1 ರಿಂದ 8 ನೇ ತರಗತಿವರೆಗೆ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಎರಡನೇ ಜತೆ ಸಮವಸ್ತ್ರ ನೀಡುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ. 37 ಲಕ್ಷ ವಿದ್ಯಾರ್ಥಿಗಳಿಗೆ ತಲಾ 250 ರೂ. ವೆಚ್ಚದಲ್ಲಿ ಸಮವಸ್ತ್ರ ಪೂರೈಕೆಗೆ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳಿಗೆ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌, ಟೈ, ಬೆಲ್ಟ್ ನೀಡಲು 11.77 ಕೋ. ರೂ.ಗಳನ್ನು ವ್ಯಯಿಸಲು ಹಾಗೂ ಸರಕಾರಿ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರಗಳ ಎಸ್‌ಸಿ-ಎಸ್‌ಟಿ ಅಭ್ಯರ್ಥಿಗಳಿಗೆ ಟೂಲ್‌ಕಿಟ್‌ ವಿತರಿಸಲು 7.86 ಕೋ. ರೂ. ಮಂಜೂರಾತಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

Advertisement

ಜಲಾನಯನ ಅಭಿವೃದ್ಧಿ
ರಾಜ್ಯದ 100 ತಾಲೂಕುಗಳಲ್ಲಿ ಜಲಾನಯನ ಅಭಿವೃದ್ಧಿ ಯೋಜನೆ ರೂಪಿಸಲು ಸಂಪುಟ ಒಪ್ಪಿಗೆ ನೀಡಿದೆ. ಅಂತರ್ಜಲ ವೃದ್ಧಿ, ಜಲ ಮರುಪೂರಣ, ಅರಣ್ಯ ಬೆಳೆಸುವುದು, ಭೂ ರಹಿತರಿಗೆ ಹಸು, ಕುರಿ, ಕೋಳಿ ವಿತರಣೆ ಈ ಯೋಜನೆ ಒಳಗೊಂಡಿರುತ್ತದೆ ಎಂದು ತಿಳಿಸಿದರು.

ಕರ್ನಾಟಕ ವಸತಿ ಮಂಡಳಿಯ ಭೂ ಸ್ವಾಧೀನ ನೀತಿಗೆ ಕೆಲವು ತಿದ್ದುಪಡಿಗಳನ್ನು ತರಲಾಗಿದ್ದು, ಭೂಮಿ ನೀಡುವವರಿಂದ 50-50, 45-55 ಮತ್ತು 60-40 ಆಧಾರದಲ್ಲಿ ಪಡೆಯುವುದು ಸಹಿತ ಹಲವು ಅಂಶಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next