ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಗೆ ಪೂರಕವಾಗುವ ನಿಟ್ಟಿನಲ್ಲಿ ಬರುವ ಆಗಸ್ಟ್ ಮೊದಲ ವಾರದಲ್ಲಿ ಕಲಬುರಗಿ ಯಲ್ಲಿ ಸಚಿವ ಸಂಪುಟದ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಚಿವರು, ಕಲಬುರಗಿ ಯಲ್ಲಿ ಸಚಿವ ಸಂಪುಟ ಸಭೆ ನಡೆಸುವ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಿ ದಿನಾಂಕ ಅಂತೀಮಗೊಳಿಸಲಾಗುವುದು ಎಂದರು.
ಕಲಬುರಗಿಯಲ್ಲಿ ಬಹಳ ವರ್ಷ ಗಳ ನಂತರ ಸಚಿವ ಸಂಪುಟ ಸಭೆ ನಡೆಯುತ್ತಿರುವುದರಿಂದ ಆಯಾ ಇಲಾಖೆಯವರು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯುವ ಕಾಮಗಾರಿಗಳ ಪಟ್ಟಿ ಸಿದ್ದಪಡಿಸಿ ಕಳುಹಿಸಿ ಕೊಡಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಭಾಗದ ಅಭಿವೃದ್ಧಿ ಗೆ ಸಂಬಂಧಿಸಿದಂತೆ ಸಚಿವ ಸಂಪುಟ ಮುಂದಿರುವ ಕಾಮಗಾರಿಗಳ ಮಾಹಿತಿ ಸಹ ಗಮನಕ್ಕೆ ತನ್ನಿ ಎಂದು ಸಚಿವ ನಿರಾಣಿ ಅಧಿಕಾರಿಗಳಿಗೆ ತಿಳಿಯಪಡಿಸಿದರು.
ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಎನ್ಇಕೆಆರ್ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಡಾ. ಅಜಯಸಿಂಗ್, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಸೇರಿದಂತೆ ಮುಂತಾದವರಿದ್ದರು.