ಬೆಂಗಳೂರು:ನೀರಾವರಿ ಯೋಜನೆಯ ಕಾಮಗಾರಿಯೊಂದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಡುವೆ ಸಚಿವ ಸಂಪುಟ ಸಭೆಯಲ್ಲಿ ಮಾತಿನ ಚಕಮಕಿ ನಡೆದ ಪ್ರಸಂಗ ನಡೆಯಿತು.
ಸಂಪುಟದಲ್ಲಿ ಚರ್ಚೆಗೆ ಸಿದ್ಧಪಡಿಸಿದ್ದ ಪಟ್ಟಿಯಲ್ಲಿ ಇರದ ಅರಕಲಗೂಡು ಕ್ಷೇತ್ರದ ನೀರಾವರಿ ಯೋಜನೆಗೆ ಸಂಬಂಧಿಸಿದ ವಿಷಯ ಎಚ್.ಡಿ.ರೇವಣ್ಣ ಇದ್ದಕ್ಕಿದ್ದಂತೆ ಪ್ರಸ್ತಾಪಿಸಿ ಒಪ್ಪಿಗೆ ನೀಡುವಂತೆ ಕೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್, ಆ ರೀತಿಯ ಕಾಮಗಾರಿಗಳು ಇನ್ನೂ ಹಲವರ ಕ್ಷೇತ್ರದ್ದು ಬಾಕಿ ಇದೆ. ಎಲ್ಲವನ್ನೂ ಒಟ್ಟಿಗೆ ಸೇರಿಸಿ ಸಂಪುಟದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯೋಣ ಈಗ ಬೇಡ ಎಂದು ಹೇಳಿದರು.
ಇದಕ್ಕೆ ಒಪ್ಪದ ಎಚ್.ಡಿ.ರೇವಣ್ಣ ಇದೇ ಸಭೆಯಲ್ಲಿ ಒಪ್ಪಿಗೆ ಕೊಡಬೇಕು ಎಂದು ಹಠ ಹಿಡಿದರು. ಈ ಸಂದರ್ಭದಲ್ಲಿ ರೇವಣ್ಣ ಹಾಗೂ ಶಿವಕುಮಾರ್ ನಡುವೆ ಸಣ್ಣ ಮಾತಿನ ಚಕಮಕಿಯೂ ಆಯಿತು.
ಇದರ ನಡುವೆ ಕಾಂಗ್ರೆಸ್‌ನ ಸಚಿವರು ಶಿವಕುಮಾರ ಪರ ನಿಂತು, ಆತುರ ಯಾಕೆ. ನಮ್ಮ ಕ್ಷೇತ್ರಗಳದ್ದೂ ಇದೆ. ಎಲ್ಲವನ್ನೂ ಒಟ್ಟಿಗೆ ತನ್ನಿ. ಇಲ್ಲವಾದರೆ ನಮ್ಮದಕ್ಕೂ ಒಪ್ಪಿಗೆ ನೀಡಿ ಎಂದು ಹೇಳಿದರು.
ಕೊನೆಗೆ ಈ ವಿಚಾರದಲ್ಲಿ ಗೊಂದಲ ಉಂಟಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇ ಸಭೆಯಲ್ಲಿ ಬೇಡ. ಎಲ್ಲವೂ ಒಟ್ಟಿಗೆ ಬರಲಿ ಎಂದು ಇತಿಶ್ರೀ ಹಾಡಿದರು ಎಂದು ಮೂಲಗಳು ತಿಳಿಸಿವೆ.