Advertisement

ಹೈಕಮಾಂಡ್‌ ಅಂಗಳಕ್ಕೆ ಸಂಪುಟ ಸರ್ಕಸ್‌

02:31 AM Jun 01, 2019 | Sriram |

ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲಿನಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಮೈತ್ರಿ ಸರಕಾರವನ್ನು ಉಳಿಸಿಕೊಳ್ಳಲು ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವ ಕಸರತ್ತು ಈಗ ಕಾಂಗ್ರೆಸ್‌ ಹೈಕಮಾಂಡ್‌ ಅಂಗಳ ತಲುಪಿದೆ.

Advertisement

ಬೆಂಗಳೂರಿನಲ್ಲಿ ಸತತ ಎರಡು ದಿನ ನಿರಂತರ ಸಭೆಗಳನ್ನು ನಡೆಸಿ ಶಾಸಕರು, ಸಚಿವರು ಮತ್ತು ಹಿರಿಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಎಲ್ಲರ ಅಭಿಪ್ರಾಯವನ್ನು ಹೈಕಮಾಂಡ್‌ ಗಮನಕ್ಕೆ ತಂದು ಅವರ ಸೂಚನೆಯ ಮೇರೆಗೆ ಮುಂದುವರಿಯಲು ನಿರ್ಧರಿಸಿದ್ದಾರೆ.

ಶುಕ್ರವಾರ ದಿಲ್ಲಿಗೆ ತೆರಳಿರುವ ಕೆ.ಸಿ. ವೇಣುಗೋಪಾಲ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜ್ಯದ ಮೈತ್ರಿ ಸರಕಾರದ ಬಗ್ಗೆ ಪಕ್ಷದ ಶಾಸಕರು ಮತ್ತು ಹಿರಿಯ ನಾಯಕರಲ್ಲಿ ಇರುವ ಅಭಿಪ್ರಾಯವನ್ನು ವಿವರಿಸಿ, ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ಪುನಾರಚನೆಗಿಂತ ಸಂಪುಟ ವಿಸ್ತರಣೆಗೆ ಹೆಚ್ಚಿನ ಒಲವು ವ್ಯಕ್ತವಾಗಿರುವ ಬಗ್ಗೆ ವಿವರಿಸುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಮೂಲಗಳ ಪ್ರಕಾರ ಸದ್ಯಕ್ಕೆ ಸಂಪುಟ ವಿಸ್ತರಣೆಗೆ ಮಾತ್ರ ಹೈಕಮಾಂಡ್‌ ಕೂಡ ಒಲವು ವ್ಯಕ್ತಪಡಿಸುವ ಸಾಧ್ಯತೆ ಇದ್ದು, ಜೂನ್‌ ಮೊದಲ ವಾರದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ. ಇಬ್ಬರು ಪಕ್ಷೇತರು ಮತ್ತು ಹಿರೆಕೆರೂರು ಶಾಸಕ ಬಿ.ಸಿ. ಪಾಟೀಲ್ ಅಥವಾ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆ ಇದೆ.

ಜೂ. 5ರ ಬಳಿಕ ರಂಗು?
ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಮೈತ್ರಿ ಉಳಿಸಲು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೂ ಅತೃಪ್ತಿ, ಅಸಮಾಧಾನದಿಂದ ಬೇಸರಗೊಂಡಿರುವ ನಾಯಕರ ಮುಂದಿನ ನಡೆ ಆಧರಿಸಿ ರಾಜಕೀಯ ಹೆಜ್ಜೆ ಇಡಲು ಬಿಜೆಪಿ ಸಿದ್ಧತೆ ನಡೆಸಿದೆ. ಜೂ. 5ರಂದು ಬಿಜೆಪಿ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರ ಸಭೆ ಆಯೋಜನೆ ಯಾಗಿದ್ದು, ಆ ಬಳಿಕ ರಾಜಕಾರಣ ರಂಗೇರುವ ಸಾಧ್ಯತೆ ಇದೆ. ಅದುವರೆಗೆ ಹೆಚ್ಚಿನ ಚಟುವಟಿಕೆ ನಡೆಯುವ ಸಾಧ್ಯತೆ ಕಡಿಮೆ.

Advertisement

ಪಕ್ಷೇತರರ ನಡೆ ಮೇಲೂ ನಿಗಾ
ಮೈತ್ರಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದು ಬಿಜೆಪಿ ಬೆಂಬಲಿಸಿದ್ದ ಪಕ್ಷೇತರ ಶಾಸಕರಾದ ಎನ್‌.ನಾಗೇಶ್‌, ಆರ್‌.ಶಂಕರ್‌ ಅವರನ್ನು ಸಂಪರ್ಕಿಸಿರುವ ಕಾಂಗ್ರೆಸ್‌ ನಾಯಕರು ಮೈತ್ರಿ ಸರಕಾರವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸಚಿವ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ನಾಗೇಶ್‌ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿದ್ದರು. ಬಳಿಕ ನಾಗೇಶ್‌, ಶಂಕರ್‌ ಅವರು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಾಗಾಗಿ ಪಕ್ಷೇತರ ಶಾಸಕರ ನಡೆಯ ಮೇಲೆ ಬಿಜೆಪಿ ನಿಗಾ ವಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next