ಬೆಂಗಳೂರು: ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿ ವಾರ ಸಮೀಪಿಸುತ್ತಿದ್ದರೂ ಬಿಜೆಪಿ ವರಿಷ್ಠರಿಂದ ಯಾವುದೇ ಮಾಹಿತಿ ಬಾರದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಸಂಬಂಧ ಅನಿಶ್ಚಿತತೆ ಮುಂದುವರಿದಿದೆ.
ಉಪ ಚುನಾವಣ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಎರಡು – ಮೂರು ದಿನಗಳಲ್ಲಿ ವರಿಷ್ಠರನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಿ ಬಳಿಕ ದಿಲ್ಲಿಗೆ ತೆರಳುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ ಈವರೆಗೆ ವರಿಷ್ಠರಿಂದ ಯಾವುದೇ ಮಾಹಿತಿ, ಸಂದೇಶ ಬಾರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ದಿಲ್ಲಿ ಪ್ರವಾಸ ಇನ್ನೂ ನಿಗದಿಯಾಗಿಲ್ಲ.
ದೀಪಾವಳಿ ಬಳಿಕ ಸಿಎಂ ದಿಲ್ಲಿಗೆ ತೆರಳಲಿದ್ದಾರೆಂಬ ಮಾತುಗಳಿವೆ. ಆದರೆ ಬಿಹಾರದಲ್ಲಿ ಬಿಜೆಪಿ ಸರಕಾರ ರಚನೆ ಬಳಿಕವಷ್ಟೇ ವರಿಷ್ಠರು ರಾಜ್ಯ ಸಂಪುಟ ಸರ್ಜರಿ ಸಂಬಂಧ ಸಿಎಂ ಜತೆಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ. ಈ ನಡುವೆ ಮಸ್ಕಿ, ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾದರೆ ಸಂಪುಟ ಸರ್ಜರಿ ಇನ್ನಷ್ಟು ವಿಳಂಬವಾಗಲಿದೆ.
ಆಕಾಂಕ್ಷಿಗಳಲ್ಲೂ ಗೊಂದಲ
ಸಂಪುಟಕ್ಕೆ ಸರ್ಜರಿಯ ಸುಳಿವು ಸಿಗುತ್ತಿದ್ದಂತೆ ಸಚಿವಾಕಾಂಕ್ಷಿಗಳು ಸಿಎಂ ಅವರನ್ನು ಭೇಟಿಯಾಗಿ ಸ್ಥಾನಮಾನಕ್ಕಾಗಿ ಮನವಿ ಮಾಡಲಾರಂಭಿಸಿದ್ದರು. ಇನ್ನು ಕೆಲವರು ನಾನಾ ರೀತಿಯಲ್ಲಿ ಒತ್ತಡ ಹೇರಲು ಮುಂದಾಗಿದ್ದರು. ಈ ನಡುವೆ ಕೆಲವು ಬಿಜೆಪಿ ಶಾಸಕರ ಗುಂಪು ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನಿಸಬಾರದು ಎಂಬುದಾಗಿ ಸಚಿವ ಜಾರಕಿಹೊಳಿ ಅವರಲ್ಲಿ ಒತ್ತಡ ಹೇರಿತ್ತು.
ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ನಾನಾ ರೀತಿಯ ತಂತ್ರ, ಲಾಬಿಯ ಮೊರೆ ಹೋದ ಆಕಾಂಕ್ಷಿಗಳು ದಿಲ್ಲಿ ಮಟ್ಟದಲ್ಲೂ ಒತ್ತಡ ಹೇರುವ ಪ್ರಯತ್ನ ನಡೆಸಲು ಚಿಂತಿಸಿದ್ದರು. ಆದರೆ ಬಿಹಾರ ಸರಕಾರ ರಚನೆಯಲ್ಲಿ ರಾಷ್ಟ್ರೀಯ ನಾಯಕರು ಸಕ್ರಿಯರಾಗಿದ್ದರೆ, 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಂಘಟನ ಪ್ರವಾಸದ ತಯಾರಿಯಲ್ಲಿದ್ದು, ದಿಲ್ಲಿ ಪ್ರವಾಸ ಕೈಗೊಳ್ಳಬೇಕೇ, ಬೇಡವೇ ಎಂಬ ಗೊಂದಲ ಆಕಾಂಕ್ಷಿಗಳದು.