Advertisement

ಅತೃಪ್ತರಿಗೆ ನಿಗಮ, ಮಂಡಳಿ : ಇಂದು ಬೆಳಗ್ಗೆಯೇ ನೂತನ ಸಚಿವರಿಗೆ ಖಾತೆ ಹಂಚಿಕೆ

10:03 AM Feb 11, 2020 | sudhir |

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಅಂತಿಮಗೊಳಿಸಿದಂತಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಮೂಲ ಬಿಜೆಪಿಯ ಹಿರಿಯ ಶಾಸಕರಿಗೆ ರಾಜ್ಯ ಬಜೆಟ್‌ ಅಧಿವೇಶನದ ಅನಂತರ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಂತೃಪ್ತಿ ಪಡಿಸುವ ಭರವಸೆ ನೀಡಿದ್ದಾರೆ.

Advertisement

ಈಗಾಗಲೇ ಕೆಲವು ಸಚಿವಾಕಾಂಕ್ಷಿಗಳೊಂದಿಗೆ ಬಿಎ ಸ್‌ವೈ ಮಾತುಕತೆ ನಡೆಸಿದ್ದಾರೆ. ಜತೆಗೆ ವಲಸಿಗ ಶಾಸಕ ಮಹೇಶ್‌ ಕುಮಟಳ್ಳಿ, ಉಪಚುನಾವಣೆಯಲ್ಲಿ ಪರಾಭವಗೊಂಡ ಎಂ.ಟಿ.ಬಿ. ನಾಗರಾಜ್‌ ಅವರಿಗೂ ಪ್ರಮುಖ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ಶಿಕಾರಿಪುರದಲ್ಲಿ ಮಾತನಾಡಿರುವ ಯಡಿಯೂರಪ್ಪ, ಸರಕಾರದಲ್ಲಿ ಯಾವುದೇ ಗೊಂದಲ, ಗುಂಪುಗಾರಿಕೆ ಇಲ್ಲ. ಬಜೆಟ್‌ ಬಳಿಕ ನಿಗಮ ಮಂಡಳಿಗೆ ನೇಮಕ ಮಾಡಲಾಗುವುದು. ನೂತನ ಸಚಿವರಿಗೆ ಸೋಮವಾರ ಬೆಳಗ್ಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯತಂತ್ರ
ಸಂಪುಟ ವಿಸ್ತರಣೆ ಅನಂತರ ಎದುರಾಗಬಹುದಾದ ಅಸಮಾಧಾನವನ್ನು ಉಪಶಮನಗೊಳಿಸಬೇಕೆಂಬ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳಿಗೆ ಪ್ರಮುಖ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಜತೆಗೆ ಸದ್ಯದಲ್ಲೇ ಎದುರಾಗುವ ವಿಧಾನಮಂಡಲ ಜಂಟಿ ಅಧಿವೇಶನ ಹಾಗೂ ಬಜೆಟ್‌ ಅಧಿವೇಶನದಲ್ಲಿ ಪಕ್ಷದ ಹಿರಿಯ ಶಾಸಕರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಕಾರ್ಯತಂತ್ರವನ್ನು ಯಡಿಯೂರಪ್ಪ ರೂಪಿಸಿದ್ದಾರೆ.

ಉಪಚುನಾವಣೆಯಲ್ಲಿ ಗೆದ್ದ ವಲಸಿಗರಿಗೆ ಸಚಿವ ಸ್ಥಾನ ನೀಡಲಾಗುವುದು ಎಂಬ ಮಾತಿನಂತೆ ಗೆದ್ದ 11 ಮಂದಿ ಪೈಕಿ 10 ಮಂದಿಯನ್ನು ಸಚಿವರನ್ನಾಗಿ ಮಾಡುವಲ್ಲಿ ಯಡಿಯೂರಪ್ಪ ಅವರು ಯಶಸ್ವಿಯಾಗಿದ್ದಾರೆ. ಆದರೆ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ವಲಸಿಗರನ್ನಷ್ಟೇ ಸಚಿವರನ್ನಾಗಿ ಮಾಡಿರುವುದಕ್ಕೆ ಸಚಿವಾಕಾಂಕ್ಷಿ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಸೃಷ್ಟಿಯಾಗಿದೆ. ಅವರನ್ನೂ ಬಿಎಸ್‌ವೈ ಸಮಾಧಾನ ಮಾಡುವ ಯತ್ನ ನಡೆಸಿದ್ದಾರೆ.

ಅಧಿವೇಶನದ ಬಳಿಕ ಸ್ಥಾನಮಾನ
ಜಾತಿ, ಜಿಲ್ಲಾ ಪ್ರಾತಿನಿಧ್ಯದ ಅವಗಣನೆ ಜತೆಗೆ ಹಿರಿತನ, ಸಂಘಟನಾ ಹಿನ್ನೆಲೆ, ಅನುಭವವನ್ನೂ ಗಣನೆಗೆ ತೆಗೆದುಕೊಳ್ಳದೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಬೇಸರಗೊಂಡಿರುವ ಹಿರಿಯ ಶಾಸಕರಿಗೆ ಉತ್ತಮ ಸ್ಥಾನ ಮಾನ ನೀಡಲು ಯಡಿಯೂರಪ್ಪ ಗಂಭೀರ ಚಿಂತನೆ ನಡೆಸಿದ್ದಾರೆ.

Advertisement

ಸೂಚನೆ ಪಾಲನೆಗೂ ಒತ್ತು
ಸಂಪುಟ ವಿಸ್ತರಣೆ ಬಳಿಕ ಅಪಸ್ವರ, ಅಸಮಾಧಾನ ತಲೆದೋರಿದರೆ ಅದನ್ನು ತಮ್ಮ ಹಂತದಲ್ಲೇ ಬಗೆ ಹರಿಸಿ ಕೊಳ್ಳಬೇಕು ಎಂದು ವರಿಷ್ಠರು ಸೂಚಿಸಿದ್ದರು. ಹೀಗಾಗಿ ಯಡಿಯೂರಪ್ಪ ಅವರು ಎರಡನೇ ಹಂತದ ವಿಸ್ತರಣೆ ವೇಳೆ ತಮ್ಮ ಆಪ್ತ ಶಾಸಕರಾದ ಉಮೇಶ್‌ ಕತ್ತಿ, ಲಿಂಬಾವಳಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಚಿಂತನೆಯಲ್ಲಿದ್ದರೂ ಕೊನೆಯ ಘಳಿಗೆಯಲ್ಲಿ ವಲಸಿಗ ಶಾಸಕರನ್ನಷ್ಟೇ ಸಚಿವರನ್ನಾಗಿ ಮಾಡಿ ಕೊಟ್ಟ ಮಾತು ಉಳಿಸಿಕೊಂಡಿದ್ದರು.

ಖಾತೆ ಹಂಚಿಕೆ ಇಂದು
ನೂತನ ಸಚಿವರಿಗೆ ಶನಿವಾರ ಖಾತೆ ಹಂಚಿಕೆ ಮಾಡುವುದಾಗಿ ಯಡಿಯೂರಪ್ಪ ಅವರು ಹೇಳಿದ್ದರು. ಆದರೆ ನಾನಾ ಒತ್ತಡ, ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಶನಿವಾರ ಖಾತೆ ಹಂಚಿಕೆ ಸಾಧ್ಯವಾಗಿರಲಿಲ್ಲ. ಈಗ ನೂತನ ಸಚಿವರಿಗೆ ಖಾತೆಗಳನ್ನು ಅಂತಿಮಗೊಳಿಸಿರುವ ಮುಖ್ಯಮಂತ್ರಿಗಳು ಸೋಮವಾರ ಖಾತೆ ವಿವರವನ್ನು ರಾಜ ಭವನಕ್ಕೆ ರವಾನಿಸುವ ಸಾಧ್ಯತೆ ಇದೆ. ಬಳಿಕ ರಾಜ್ಯಪಾಲರು ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಫೆ. 17ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನೂತನ ಸಚಿವರು ತಮ್ಮ ಖಾತೆಗಳ ಬಗ್ಗೆ ಅರಿತುಗೊಂಡು ಸದನಕ್ಕೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲ ವಾಗುವಂತೆ ಸೋಮವಾರವೇ ಖಾತೆ ಹಂಚಿಕೆ ಮಾಡುವ ಸಾಧ್ಯತೆ ಇದೆ.

ಮಹೇಶ್‌ ಕುಮಟಳ್ಳಿಗೆ ಗೃಹಮಂಡಳಿ?
ಉಪಚುನಾವಣೆಯಲ್ಲಿ ಗೆದ್ದರೂ ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡಿದ್ದ ಮಹೇಶ್‌ ಕುಮಟಳ್ಳಿ ಅವರನ್ನು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಇದೆ. ಇತ್ತೀಚೆಗೆ ಸಚಿವ ರಮೇಶ್‌ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಮಹೇಶ್‌ ಕುಮಟಳ್ಳಿ ಅವರು ಯಡಿಯೂರಪ್ಪ ಅವರನ್ನು ಭೇಟಿ ಯಾಗಿ ಚರ್ಚಿಸಿದ್ದರು. ಈ ವೇಳೆ ಯಡಿಯೂರಪ್ಪ ಅವರು ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಜತೆಗೆ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮತ್ತೂಬ್ಬ ಸಚಿವಾಕಾಂಕ್ಷಿಯಾಗಿರುವ ಎಂ.ಟಿ.ಬಿ. ನಾಗರಾಜ್‌ ಅವರನ್ನು ಮುಂದಿನ ಜೂನ್‌ ಹೊತ್ತಿಗೆ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಬಳಿಕ ಅವರಿಗೆ ಬೆಂಗಳೂರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಯಡಿಯೂರಪ್ಪ ಚಿಂತಿಸಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next