Advertisement

ಸೋಮವಾರ ಸಂಪುಟ ವಿಸ್ತರಣೆ? ಅಮಿತ್‌ ಶಾ, ನಡ್ಡಾ ಒಪ್ಪಿಗೆ ಪಡೆಯುವಲ್ಲಿ ಬಿಎಸ್‌ವೈ ಯಶಸ್ವಿ

10:10 AM Feb 02, 2020 | Team Udayavani |

ಬೆಂಗಳೂರು: ಅಂತೂ ಇಂತೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ದಿಲ್ಲಿ ಭೇಟಿ ಫ‌ಲಪ್ರದವಾಗಿದೆ. ಉಪಚುನಾವಣೆ ಅನಂತರ ಪ್ರತಿದಿನವೂ ಸದ್ದು ಮಾಡುತ್ತಿದ್ದ “ಸಂಪುಟ ವಿಸ್ತರಣೆ’ಗಾಗಿ ದಿಲ್ಲಿ ವರಿಷ್ಠರಿಂದ ಒಪ್ಪಿಗೆ ಪಡೆದಿರುವ ಬಿಎಸ್‌ವೈ, ನಗುಮೊಗದಲ್ಲೇ ಇನ್ನು 3 ದಿನಗಳಲ್ಲಿ ಹೊಸ ಸಚಿವರ ಪ್ರಮಾಣ ವಚನ ಖಚಿತ ಎಂಬ ಸಂದೇಶ ರವಾನಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಸೋಮವಾರವೇ ಸಂಪುಟ ವಿಸ್ತರಣೆ ನಡೆಯುವುದು ಖಚಿತ.

Advertisement

ಮೂಲಗಳ ಪ್ರಕಾರ, ಉಪಚುನಾವಣೆಯಲ್ಲಿ ಗೆದ್ದ 10 ಶಾಸಕರು ಮತ್ತು ಮೂವರು ಮೂಲ
ಬಿಜೆಪಿಗರು ಸಚಿವರಾಗುವುದು ಪಕ್ಕಾ ಆಗಿದೆ ಎಂದೇ ಹೇಳಲಾಗುತ್ತಿದೆ. ಸಂಪುಟ ವಿಸ್ತರಣೆಗಾಗಿ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ಎರಡು ದಿನಗಳಿಂದ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದ ಬಿಎಸ್‌ವೈ, ಶುಕ್ರವಾರ ಸಂಜೆ ವೇಳೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮೊದಲೇ ನಿರ್ಧರಿಸಿದಂತೆ ಶುಕ್ರವಾರ ಮಧ್ಯಾಹ್ನ ಅಮಿತ್‌ ಶಾ ಅವರನ್ನು ಭೇಟಿ ಮಾಡಬೇಕಿತ್ತು. ಆದರೆ ಅವರ ಭೇಟಿಗೆ ಅವಕಾಶ ಸಿಕ್ಕಿದ್ದು ಸಂಜೆ ವೇಳೆಗೆ.

ಬಿಎಸ್‌ವೈ ಮೊಗದಲ್ಲಿ ಸಂತಸ
ನಡ್ಡಾ ಮತ್ತು ಶಾ ಭೇಟಿ ಬಳಿಕ ಹೊರಬಂದ ಬಿಎಸ್‌ವೈ ನಗುಮೊಗದಲ್ಲೇ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ್ದು ವಿಶೇಷ. ಜತೆಗೆ ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಖುಷಿಯಿಂದಲೇ ಹೇಳಿದ ಅವರ ಮಾತಿನಲ್ಲಿ ಮಾತುಕತೆ ಫ‌ಲಪ್ರದವಾಗಿದೆ ಎಂಬ ಸಂದೇಶ ಸಾರುವಂತಿತ್ತು. ಶನಿವಾರ ಕೆಲವರ ಮನವೊಲಿಸಿ ಬಳಿಕ ಆ ಬಗ್ಗೆ ವರಿಷ್ಠರಿಗೂ ಮಾಹಿತಿ ನೀಡಿ ಸೋಮವಾರ ಸಂಪುಟ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೊಸದಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಿಲ್ಲ ಎಂದು ಯಡಿಯೂರಪ್ಪ ಪುನರುಚ್ಚರಿಸಿದ್ದು, ಆ ಹುದ್ದೆ ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗಾದಂತಿದೆ.

ವರಿಷ್ಠರ ಭೇಟಿ ಬಳಿಕ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅಮಿತ್‌ ಶಾ ಹಾಗೂ ಜೆ.ಪಿ. ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದ್ದು, ನಮ್ಮ ಸಲಹೆಗಳನ್ನೆಲ್ಲ ಬಹುತೇಕ ಒಪ್ಪಿದ್ದಾರೆ. ಸಂಪುಟ ವಿಸ್ತರಣೆಯನ್ನು ಯಾವಾಗ ಬೇಕಾದರೂ ಕೈಗೊಳ್ಳಬಹುದಾಗಿದ್ದು, ಶನಿವಾರ ಈ ಕುರಿತು ಕೆಲವರೊಂದಿಗೆ ಚರ್ಚಿಸಿ ಮನವೊಲಿಸಬೇಕಿದೆ. ಅನಂತರ ಮತ್ತೂಮ್ಮೆ ವರಿಷ್ಠರೊಂದಿಗೆ ಸಮಾಲೋಚಿಸಿ ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.

ಕೊಟ್ಟ ಮಾತು ಉಳಿಸಿಕೊಳ್ಳುವ ಕಸರತ್ತು
ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಯಡಿಯೂರಪ್ಪ ಹಲವು ಬಾರಿ ಹೇಳಿದ್ದರು. ಆ ಮೂಲಕ ಪರಾಜಿತರಿಗೆ ಸಚಿವಗಿರಿ ಇಲ್ಲ ಎಂಬ ಸಂದೇಶ ಸಾರಿದ್ದರು. ಅದನ್ನು ಪುಷ್ಟೀಕರಿಸುವಂತೆ ಉಪ ಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ 10 ಮಂದಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಯಡಿಯೂರಪ್ಪ ಬಹುತೇಕ ಯಶಸ್ವಿಯಾಗಿದ್ದಾರೆ. ಮೊದಲ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು, ಬಳಿಕ ಒಂದೂವರೆ ವರ್ಷದಲ್ಲೇ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದು ಬಂದಿರುವ ಮಹೇಶ್‌ ಕುಮಟಳ್ಳಿ, ಶ್ರೀಮಂತ ಪಾಟೀಲ್‌ ಅವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ. ತಮಗೆ ವರಿಷ್ಠರು ಸಚಿವ ಸ್ಥಾನ ನೀಡುತ್ತಾರೆ, ಪ್ರಮುಖ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನ ಕೊಡುತ್ತಾರೋ ಎಂದು ಮಹೇಶ್‌ ಕುಮಟಳ್ಳಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.

Advertisement

ಮೂಲ ಬಿಜೆಪಿಗರಿಗೂ ಮಣೆ
ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಂದವರಿಗೆ ಸಚಿವ ಸ್ಥಾನ ನೀಡುವ ಜತೆಗೆ ಮೂಲ ಬಿಜೆಪಿಗರಿಗೂ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಸಂಪುಟದಲ್ಲಿ ಸಮತೋಲನ ಕಾಯ್ದುಕೊಳ್ಳುವ ಕಸರತ್ತನ್ನು ಯಡಿಯೂರಪ್ಪ ಅವರು ಮಾಡಿದಂತಿದೆ.

ಕುತೂಹಲ ಮೂಡಿಸಿದ ಪುತ್ರರ ಪಾತ್ರ
ಸಾಮಾನ್ಯವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವರಿಷ್ಠರನ್ನು ಭೇಟಿಯಾಗುವಾಗ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ| ಸಿ.ಎನ್‌. ಅಶ್ವತ್ಥ ನಾರಾಯಣ ಇಲ್ಲವೇ ಹಿರಿಯ ಸಚಿವರಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಜತೆಯಲ್ಲಿರುತ್ತಿದ್ದರು. ಆದರೆ ಶುಕ್ರವಾರ ಅಮಿತ್‌ ಶಾ, ಜೆ.ಪಿ. ನಡ್ಡಾ ಅವರ ಭೇಟಿ ವೇಳೆ ಯಡಿಯೂರಪ್ಪ ಅವರ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಇದ್ದುದು ಚರ್ಚೆಗೆ ಗ್ರಾಸವಾಗಿದೆ. ರಾಘವೇಂದ್ರ, ವಿಜಯೇಂದ್ರ ಅವರು ಸೌಹಾರ್ದಯುತವಾಗಿ ಭೇಟಿಯಾಗಿ ಅನಂತರ ಹೊರಗೆ ಬಂದಿರಬಹುದು. ಬಳಿಕ ಉಳಿದ ಹಿರಿಯ ನಾಯಕರು ಚರ್ಚೆ ನಡೆಸಿರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

ಅಸಮಾಧಾನ ಶಮನ ಬಿಎಸ್‌ವೈ ಹೆಗಲಿಗೆ
ಸಂಪುಟ ವಿಸ್ತರಣೆ ಸಂಬಂಧದ ಎಲ್ಲ ಮನವಿಗೆ ಬಹುತೇಕ ಅಸ್ತು ಎಂದಿರುವ ಬಿಜೆಪಿ ವರಿಷ್ಠರು ವಿಸ್ತರಣೆ ಅನಂತರ ಅಸಮಾಧಾನ, ಬೇಸರ, ಭಿನ್ನಮತ ತಲೆದೋರಿದರೆ ಅದನ್ನು ಉಪಶಮನಗೊಳಿಸುವ ಜವಾಬ್ದಾರಿಯನ್ನೂ ಬಿಎಸ್‌ವೈಗೆ ವಹಿಸಿದ್ದಾರೆ.

ಜೆ.ಪಿ.ನಡ್ಡಾ ಮತ್ತು ಅಮಿತ್‌ ಶಾ ಅವರು ಶುಕ್ರವಾರ ಯಡಿಯೂರಪ್ಪ ಅವರು ಪ್ರಸ್ತಾವಿಸಿದ ವಿಚಾರಗಳಿಗೆ ಬಹುತೇಕ ಸಮ್ಮತಿ ಸೂಚಿಸಿದ್ದಾರೆ. ಅಗತ್ಯ ಬಿದ್ದರೆ ಉಪಚುನಾವಣೆಯಲ್ಲಿ ಗೆದ್ದ ಎಲ್ಲ 11 ಶಾಸಕರಿಗೂ ಸಚಿವ ಸ್ಥಾನ ನೀಡಲು ಅಭ್ಯಂತರವಿಲ್ಲ. ಸಾಧ್ಯವಾದರೆ ಕೆಲವರ ಮನವೊಲಿಸಿ ಮೂಲ ಬಿಜೆಪಿಗರಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಿ. ಆದರೆ ಸಂಪುಟ ವಿಸ್ತರಣೆ ಬಳಿಕ ಯಾವುದೇ ರೀತಿಯ ಅಸಮಾಧಾನ, ಅಪಸ್ವರ ಕೇಳಿಬಂದರೂ ಅದನ್ನು ತಾವೇ ನಿಭಾಯಿಸಬೇಕು. ಈ ಬೆಳವಣಿಗೆಗಳು ಪಕ್ಷ ಹಾಗೂ ಸರಕಾರದ ಆಡಳಿತಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next