Advertisement

ಮುಖ್ಯಮಂತ್ರಿ ವಿದೇಶ ಪ್ರವಾಸದ ಬಳಿಕ ಸಂಪುಟ ಸಿಹಿ

10:08 AM Jan 19, 2020 | sudhir |

– ವಿದೇಶ ಪ್ರವಾಸ ಮುಗಿಸಿ ದೆಹಲಿಗೆ ಬನ್ನಿ ಎಂದ ಅಮಿತ್‌ ಶಾ
– ಜ.27 ಅಥವಾ 28 ಕ್ಕೆ ಮಹೂರ್ತ ನಿಗದಿ ಸಾಧ್ಯತೆ?

Advertisement

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಇನ್ನಷ್ಟು ಮುಂದಕ್ಕೆ ಹೋಗುವುದು ಬಹುತೇಕ ಖಚಿತವಾಗಿದ್ದು, ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ವಿದೇಶ ಪ್ರವಾಸ ಮುಗಿಸಿಕೊಂಡು ಬಂದ ಮೇಲೆಯೇ ಈ ಸಂಬಂಧ ನಿರ್ಧಾರವಾಗಲಿದೆ.

ದಾವೋಸ್‌ ಪ್ರವಾಸ ಮುಗಿಸಿ, ದೆಹಲಿಗೆ ಬನ್ನಿ, ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸೋಣ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು, ಬಿಎಸ್‌ವೈಗೆ ಸೂಚನೆ ನೀಡಿದ್ದಾರೆ.

ರಾಜ್ಯಕ್ಕೆ ಆಗಮಿಸಿದ್ದ ಅಮಿತ್‌ ಶಾ ಜತೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ ಯಡಿಯೂರಪ್ಪ ಅವರು, ಸಂಪುಟ ವಿಸ್ತರಣೆ ಕುರಿತು ಪ್ರಸ್ತಾಪಿಸಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರ ಪೈಕಿ 11 ಮಂದಿಗೆ ಸಚಿವ ಸ್ಥಾನ ನೀಡಬೇಕಿದೆ. ಈಗಾಗಲೇ ತಡವಾಗಿದ್ದು ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಬೇಕಿದೆ ಎಂದು ಹೇಳಿದರು.

ಸಂಪುಟ ವಿಸ್ತರಣೆಗೆ ನಮ್ಮ ಆಕ್ಷೇಪಣೆಯೇನೂ ಇಲ್ಲ. ನೀವು ವಿದೇಶ ಪ್ರವಾಸ ಮುಗಿಸಿ ದೆಹಲಿಗೆ ಬನ್ನಿ ಜೆ.ಪಿ.ನಡ್ಡಾ, ಬಿ.ಎಲ್‌.ಸಂತೋಷ್‌ ಅವರ ಸಮ್ಮುಖದಲ್ಲಿ ಚರ್ಚಿಸಿ ಅಂತಿಮಗೊಳಿಸೋಣ ಎಂದು ತಿಳಿಸಿದರು ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ಬಹುತೇಕ ಜ.27 ಅಥವಾ 28 ರಂದು ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿದೆ.

Advertisement

ಈ ಮಧ್ಯೆ, ಉಪ ಮುಖ್ಯಮಂತ್ರಿ ವಿಚಾರವೂ ಪ್ರಸ್ತಾಪವಾಗಿ ನಾಲ್ವರು ಉಪ ಮುಖ್ಯಮಂತ್ರಿಗಳ ನೇಮಕಕ್ಕೆ ಅಮಿತ್‌ ಶಾ ಒಲವು ತೋರಿದರು. ಹಾಲಿ ಇರುವವರಲ್ಲಿ ಒಬ್ಬರನ್ನು ತೆಗೆದು ಹೊಸದಾಗಿ ಇಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆಯಾಯಿತು ತಿಳಿದುಬಂದಿದೆ.

ಶ್ರೀರಾಮುಲು ಹಾಗೂ ರಮೇಶ್‌ ಜಾರಕಿಹೊಳಿ ಉಪ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿರುವ ಬಗ್ಗೆಯೂ ಪ್ರಸ್ತಾಪವಾಯಿತು. ಉಪ ಮುಖ್ಯಮಂತ್ರಿ ಹುದ್ದೆ ಬೇಕಾ ಬೇಡವಾ ಎಂಬುದೂ ಸೇರಿದಂತೆ ಎಲ್ಲ ವಿಚಾರಗಳನ್ನು ಚರ್ಚಿಸಿ ಆ ನಂತರ ಎಲ್ಲವನ್ನೂ ತೀರ್ಮಾನ ಮಾಡೋಣ ಎಂದು ಅಮಿತ್‌ ಶಾ ಹೇಳಿದರು ಎನ್ನಲಾಗಿದೆ.

ಮಾತುಕತೆ ವೇಳೆಯಲ್ಲಿ ಆಡಳಿತ ವಿಚಾರಕ್ಕೆ ಸಂಬಂಧಿಸಿದಂತೆಯೂ ಅಮಿತ್‌ ಶಾ ಅವರು, ಸಿಎಂಗೆ ಕೆಲವೊಂದು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಹುಬ್ಬಳ್ಳಿಯಲ್ಲಿ ಸಿಎಎ ಪರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡ ನಂತರ ವಿದೇಶ ಪ್ರವಾಸ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ರಾತ್ರಿಯೇ ಬೆಂಗಳೂರಿಗೆ ವಾಪಸ್ಸಾದರು. ಅಮಿತ್‌ ಶಾ ಅವರ ಜತೆ ನಡೆದ ಮಾತುಕತೆಯ ವಿವರಗಳನ್ನು ಸಚಿವಾಕಾಂಕ್ಷಿಗಳಿಗೆ ತಿಳಿಸಿದರು.

ಅಮಿತ್‌ ಶಾ ಆಗಮನ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಸಂಬಂಧ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಾಸಕರು ಶನಿವಾರವೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.

ಈ ನಡುವೆ ಹುಬ್ಬಳ್ಳಿಯಲ್ಲಿ ಅಮಿತ್‌ ಶಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಸೇರಿದಂತೆ ಹಲವು ಬಿಜೆಪಿ ನಾಯಕರ ಜತೆ ಸಮಾಲೋಚನೆ ನಡೆಸಿದರು. ಸರ್ಕಾರದ ಆಡಳಿತ ವೈಖರಿ, ಸಿಎಎ ಪರ ಜಾಗೃತಿ ಮೂಡಿಸಲು ಪಕ್ಷದ ವತಿಯಿಂದ ಕೈಗೊಂಡಿರುವ ಕಾರ್ಯಕ್ರಮಗಳ ವಿವರಗಳನ್ನು ಪಡೆದರು ಎಂದು ಹೇಳಲಾಗಿದೆ.

ಅಮಿತ್‌ ಶಾ ಭೇಟಿ
ಹುಬ್ಬಳ್ಳಿಯಲ್ಲಿ ಸಿಎಎ ಪರ ಜಾಗೃತಿಯಲ್ಲಿ ಪಾಲ್ಗೊಂಡ ನಂತರ ಡೆನಿಸನ್‌ ಹೋಟೆಲ್‌ನಲ್ಲಿ ತಂಗಿದ್ದ ಅಮಿತ್‌ ಶಾ ಅವರನ್ನು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ಶಾಸಕರಾದ ಮಹೇಶ್‌ ಕುಮಟಳ್ಳಿ, ಶ್ರೀಮಂತ ಪಾಟೀಲ್‌, ಬಿ.ಸಿ.ಪಾಟೀಲ್‌ ಭೇಟಿ ಮಾಡಿ ಚರ್ಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next