Advertisement

ಸಂಪುಟ ವಿಸ್ತರಣೆ ಮಾಹಿತಿ ಬಂದಿಲ್ಲ: ಕುಮಾರಸ್ವಾಮಿ

06:05 AM Jun 17, 2018 | Team Udayavani |

ಬೆಂಗಳೂರು: ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನನ್ನ
ಗಮನಕ್ಕೆ ಬಂದಿಲ್ಲ. ಕಾಂಗ್ರೆಸ್‌ ತೀರ್ಮಾನಗಳೇನು ಎಂಬುದು ನನಗೆ ಗೊತ್ತಿಲ್ಲ. ರಾಹುಲ್‌ ಗಾಂಧಿ ಅವರ ಸಮಯವನ್ನು ಕೇಳಿದ್ದೇನೆ. ಸಮಯ ಸಿಕ್ಕಿದರೆ ಈ ಬಗ್ಗೆ ಚರ್ಚೆ ಮಾಡಿ ಆ ಬಳಿಕ ಉಸ್ತರಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಶನಿವಾರ ದೆಹಲಿಯಲ್ಲಿ ಮಾತನಾಡಿದ ಅವರು, ನಾನು ರಾಷ್ಟ್ರೀಯ ಪಕ್ಷಗಳ ಜತೆ ಹೊಂದಾಣಿಕೆಯಿಂದ ಇದ್ದೇನೆ. ಮಾಧ್ಯಮಗಳಿಗೆ ನಾನು ಹೊಂದಾಣಿಕೆಯಾಗಿಲ್ಲ. ಮಂತ್ರಿ ಮಂಡಲ ಸೇರಿ ಹಲವು ಊಹಾಪೋಹ ಸುದ್ದಿಗಳು ಪ್ರಸಾರ ಆಗುತ್ತಿವೆ. ಅದರ ಬಗ್ಗೆ ಯಾವುದೇ ಚಿಂತೆ ಬೇಡ ಎಂದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌-ಎನ್‌ಸಿಪಿ ದೀರ್ಘ‌ಕಾಲ ಆಡಳಿತ ಮಾಡಿವೆ. ಅದೇ ರೀತಿ ಕರ್ನಾಟಕದ ಆಡಳಿತ ನಡೆಸಬೇಕು ಎಂಬುದು ಕಾಂಗ್ರೆಸ್‌ ಆಶಯ ಎಂದು ಹೇಳಿದರು.

ಗೌರಿ ಹತ್ಯೆ ಪ್ರಕರಣದಲ್ಲಿ ಶ್ರೀರಾಮಸೇನೆ ಭಾಗಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಅಧಿಕಾರಿಗಳು ತ್ವರಿತಗತಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಎಂದರು.

ರಾಜಕೀಯ ವಿದ್ಯಮಾನದ ಬಗ್ಗೆಯೂ ಚರ್ಚೆ: ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿರುವ ಕುಮಾರಸ್ವಾಮಿ ಅವರು, ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್‌, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ದೆಹಲಿಯ ಆಂಧ್ರಪ್ರದೇಶ ಭವನದಲ್ಲಿ ಭೇಟಿ ಮಾಡಿದ್ದ ಅವರು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಆಗಮಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಜತೆಗೆ ರಾತ್ರಿ ನಾಲ್ವರೂ ಮುಖ್ಯಮಂತ್ರಿಗಳು ಒಟ್ಟಿಗೆ ಊಟಕ್ಕೆ ಸೇರಿ ತೃತೀಯ ರಂಗ ಕುರಿತು ಚರ್ಚಿಸಿದರು ಎಂದು ಹೇಳಲಾಗಿದೆ.

Advertisement

ನಾಳೆ ಮೋದಿ ಭೇಟಿ: ಕುಮಾರಸ್ವಾಮಿಯವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಸೋಮವಾರ ಸಂಜೆ 4.30ಕ್ಕೆ ಪ್ರಧಾನಿಯವರನ್ನು ಭೇಟಿಯಾಗಲಿರುವ ಕುಮಾರಸ್ವಾಮಿ, ಸಾಲಮನ್ನಾ ಸೇರಿ ರೈತರ ಸಮಸ್ಯೆ ನಿವಾರಣೆಗೆ ಕೇಂದ್ರದ ನೆರವು ಕೋರುವ ಸಾಧ್ಯತೆಯಿದೆ. ಜತೆಗೆ, ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಟಾನ, ಅನುದಾನ ಹೆಚ್ಚಳ ಕುರಿತು ಪ್ರಸ್ತಾಪ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಇಂದು ನೀತಿ ಆಯೋಗದ ಸಭೆ
ಸಿಎಂ ಕುಮಾರಸ್ವಾಮಿ ಭಾನುವಾರ ದೆಹಲಿಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿದ್ದು, ದೇಶದ ಎಲ್ಲ ಮುಖ್ಯಮಂತ್ರಿಗಳು, ಹಣಕಾಸು ಸಚಿವರು ಪಾಲ್ಗೊಳ್ಳಲಿದ್ದಾರೆ. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದ ನಂತರ ಕುಮಾರಸ್ವಾಮಿ ಕೇಂದ್ರ ಮಟ್ಟದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು.

Advertisement

Udayavani is now on Telegram. Click here to join our channel and stay updated with the latest news.

Next