Advertisement
ಹದಿನೇಳು ಶಾಸಕರ ಹಂಗಿನಲ್ಲಿ ಸಿಎಂ ಯಡಿಯೂರಪ್ಪ: ಸತೀಶಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹದಿನೇಳು ಮಂದಿ ಶಾಸಕರ ಹಂಗಿನಲ್ಲಿದ್ದಾರೆ. ಅವರನ್ನು ಸಮಾಧಾನಪಡಿಸುವುದು ಅವರ ಮೊದಲ ಕೆಲಸ. ಹೀಗಾಗಿ ಮೂಲ ಬಿಜೆಪಿ ಶಾಸಕರು ಸಚಿವರಾಗಲು ಇನ್ನಷ್ಟು ದಿನ ಕಾಯಬೇಕು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಸಂಪುಟ ವಿಸ್ತರಣೆ ನಂತರ ಮತ್ತೆ ಭಿನ್ನಮತ ಸ್ಫೋಟಗೊಳ್ಳಲಿದೆ. ಮೂಲ ಬಿಜೆಪಿ ಶಾಸಕರು ತಮ್ಮ ಹಕ್ಕು ಪ್ರತಿಪಾದನೆ ಮಾಡುತ್ತಾರೆ. ಆಗ ತಾನಾಗೇ ಭಿನ್ನಮತ ಹೊರಗಡೆ ಬರುತ್ತದೆ ಎಂದರು.
Related Articles
ಹರಿಹರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿನಂತೆ ಸಂಪುಟ ವಿಸ್ತರಣೆ ವೇಳೆ ವಾಲ್ಮೀಕಿ ಸಮಾಜದವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದರು. ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಚುನಾವಣೆ ಸಂದರ್ಭ ಯಡಿಯೂರಪ್ಪ ವಾಲ್ಮೀಕಿ ಸಮಾಜ ದವರಿಗೆ ಡಿಸಿಎಂ ಸ್ಥಾನ ನೀಡುವುದಾಗಿ ಘೋಷಿಸಿದ್ದರು. ಈಗ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಿದೆ ಎಂದರು.
Advertisement
ವಾಲ್ಮೀಕಿ ಸಮಾಜದ ಶ್ರೀರಾಮುಲು ಹಾಗೂ ರಮೇಶ್ ಜಾರಕಿಹೊಳಿ ಡಿಸಿಎಂ ಸ್ಥಾನಕ್ಕೆ ಅರ್ಹರಾಗಿದ್ದು, ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಡಿಸಿಎಂ ಸ್ಥಾನ ನೀಡಲಿ. ಅದರ ಬಗ್ಗೆ ನಮ್ಮ ತಕರಾರು ಇಲ್ಲ ಎಂದ ಶ್ರೀಗಳು, ಈ ಕುರಿತು ಸಮಾಜದ ಜನರಲ್ಲೂ ದೊಡ್ಡ ನಿರೀಕ್ಷೆ ಇದ್ದು, ಅದನ್ನು ಬಿಎಸ್‌ವೈ ಹುಸಿಗೊಳಿಸಬಾರದು ಎಂದರು. ವಾಲ್ಮೀಕಿ ಸಮಾಜದವರಿಗೆ ಶೇ.7.5 ಮೀಸಲಾತಿ ನೀಡಬೇಕೆಂಬ ಬೇಡಿಕೆ ಇಟ್ಟಿದ್ದೇವೆ. ಆಯೋಗದ ವರದಿ ಬಂದ ನಂತರ ಈ ಕುರಿತು ನಿರ್ಣಯಿಸುವುದಾಗಿ ಬಿಎಸ್‌ವೈ ಹೇಳಿದ್ದಾರೆ. ಆ ಬಗ್ಗೆ ನಮ್ಮ ಒಪ್ಪಿಗೆಯೂ ಇದೆ. ಹಿಂದುಳಿದ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಿದೆ ಎಂದರು.
ವಾಲ್ಮೀಕಿ ಜಾತ್ರೆ: ಫೆ.8 ಮತ್ತು 9ರಂದು ಮಠದಲ್ಲಿ ಎರಡನೇ ವರ್ಷದ ಐತಿಹಾಸಿಕ ಮಹರ್ಷಿ ವಾಲ್ಮೀಕಿ ಜಾತ್ರೆ ನಡೆಯಲಿದೆ. ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ. ಸಿಎಂ, ಮಾಜಿ ಸಿಎಂ, ಕೇಂದ್ರ, ರಾಜ್ಯ ಸಚಿವರು, ನಾಡಿನ ವಿವಿಧ ಮಠಾ ಧೀಶರು, ಸಮಾಜದ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಾತ್ರೆ ಸಂಬಂಧ ಸಿದ್ಧತೆಗಳು ನಡೆಯುತ್ತಿವೆ ಎಂದರು.
ತಾಳ್ಮೆ ವಹಿಸಿದರೆ ಶಂಕರ್‌ಗೂ ಅವಕಾಶಬಳ್ಳಾರಿ: ಮಾಜಿ ಸಚಿವ ಆರ್.ಶಂಕರ್ ಅವರನ್ನು ಬಿಜೆಪಿ ವರಿಷ್ಠರು ಕೈಬಿಡಲ್ಲ. ಮುಂದೆಯೂ ಅವರಿಗೆ ಅವಕಾಶ ಇದ್ದೇ ಇರುತ್ತದೆ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಲಕ್ಷ್ಮಣ ಸವದಿ ಅವರಿಗೆ ಎಂಎಲ್‌ಸಿ ನೀಡಿದರೂ, ಮಾಜಿ ಸಚಿವ ಆರ್.ಶಂಕರ್ ಅವರನ್ನು ಕೈಬಿಡಲ್ಲ. ಮುಂದೆ ಯೂ ಯಾವುದಾದರೂ ಒಂದು ಅವಕಾಶ ಅವರಿಗೆ ಇದ್ದೇ ಇರುತ್ತದೆ. ಸ್ವಲ್ಪ ತಾಳ್ಮೆಯಿಂದ ಇರಬೇಕು. ಪಕ್ಷದ ರಾಜ್ಯ ಮುಖಂಡರು ಈ ಬಗ್ಗೆ ಆಲೋಚನೆ ಮಾಡಿ ಅವಕಾಶ ಕಲ್ಪಿಸುತ್ತಾರೆ ಎಂದರು. ಹಣೆ ಬರಹದಂತೆ ಆಗುತ್ತೆ: ತಾವು ಸಚಿವ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದ ರಾಜ್ಯ ಮುಖಂಡರಿಗೆ ಈಗಿರುವ ತಲೆನೋವೇ ಸಾಕು. ಅದರಲ್ಲಿ ನಾನೇಕೆ ಮಧ್ಯೆ ಪ್ರವೇಶಿಸಬೇಕು? ನಾನು ಎರಡನೇ ಬಾರಿ ಶಾಸಕನಾಗಿ ಆಯ್ಕೆ ಯಾಗಿದ್ದೇನೆ. ಕೆಲವರಂತೆ ಮೂರ್‍ನಾಲ್ಕು ಬಾರಿ ಶಾಸಕನಾಗಿ ಆಯ್ಕೆ ಯಾಗಿಲ್ಲ. ಮನಸ್ಸಿದ್ದರೆ ಮಾರ್ಗ. ಭಗವಂತ ಹಣೆಬರಹದಲ್ಲಿ ಏನು ಬರೆದಿದ್ದಾನೋ ಅದರಂತೆ ಆಗಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವಲ್ಲಿ ಮಾಜಿ ಸಚಿವರಾದ ಎಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ. ನಾಗರಾಜ್ ಅವರ ತ್ಯಾಗ ದೊಡ್ಡದು. ಅವರ ತ್ಯಾಗವನ್ನು ಸಿಎಂ ಯಡಿಯೂರಪ್ಪ ಅವರು ಮರೆಯುವುದಿಲ್ಲ.
-ವಿ.ಸೋಮಣ್ಣ, ವಸತಿ ಸಚಿವ ಜನಪ್ರತಿನಿಧಿಗಳಿಗೆ ಅಧಿಕಾರದ ಆಸೆ ಹೆಚ್ಚಾಗಿರುವುದನ್ನು ಕಾಣುತ್ತಿದ್ದೇವೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮುಂದೆ ದಾವಣಗೆರೆ, ಚಿತ್ರದುರ್ಗ, ಬೆಂಗಳೂರು..ಹೀಗೆ ಒಂದೊಂದು ಜಿಲ್ಲೆಗೆ ಒಬ್ಬೊಬ್ಬ ಮುಖ್ಯಮಂತ್ರಿ ಮಾಡಿ ಎಂದು ಒತ್ತಡ ಹಾಕುವ ದಿನಗಳು ಸಹ ಬರಬಹುದು.
-ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡುವ ಬಗ್ಗೆ ಏನನ್ನೂ ಹೇಳಲ್ಲ. ಹಾಗೆಯೇ ಯಾರಿಗೂ ಮುಜುಗರಪಡಿಸಲೂ ಹೋಗುವುದಿಲ್ಲ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನವನ್ನು ಕಾದು ನೋಡುತ್ತೇನೆ.
-ಶ್ರೀರಾಮುಲು, ಆರೋಗ್ಯ ಸಚಿವ