ಬೆಂಗಳೂರು: ಮೇ 10 ರಂದು ರಾಜ್ಯ ಸಚಿವ ಸಂಪುಟ ಪುನಾರಚನೆ ಸಾಧ್ಯತೆ ಬಗ್ಗೆ ಮಾಹಿತಿ ಲಭಿಸುತ್ತಿದ್ದು, ಮೂವರು ಡಿಸಿಎಂ ಸೃಷ್ಟಿಯಾಗಲಿದೆ. ಜತೆಗೆ ಇನ್ನು ಕೆಲವೇ ತಿಂಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕವಾಗಲಿದೆ.
ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಒಕ್ಕಲಿಗ, ಹಿಂದುಳಿದ, ಪರಿಶಿಷ್ಟ ಜಾತಿ/ ಪಂಗಡದ ಪ್ರಭಾವಿ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಹೊಸಬರ ನೇಮಕ ಸಾಧ್ಯತೆ ಇದೆ. ಅಲ್ಲಿಯೂ ಕೂಡಾ ಒಕ್ಕಲಿಗ ಅಥವಾ ಹಿಂದುಳಿದ ವರ್ಗದ ಮುಖಂಡರಿಗೆ ಅವಕಾಶ ಲಭಿಸಲಿದೆ ಎಂದು ಹೇಳಲಾಗುತ್ತಿದೆ.
ಒಕ್ಕಲಿಗ ಕೋಟಾದಿಂದ ಡಾ.ಅಶ್ವತ್ಥನಾರಾಯಣ ಅಥವಾ ಆರ್.ಅಶೋಕ, ಹಿಂದುಳಿದ ವರ್ಗದ ಕೋಟಾದಿಂದ ವಿ.ಸುನೀಲ್ ಕುಮಾರ್, ಪರಿಶಿಷ್ಟ ಜಾತಿ, ಪಂಗಡದ ಕೋಟಾದಲ್ಲಿ ಬಿ.ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಒಲಿಯಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:‘ಸಿಎಂ ಬದಲಾವಣೆ ಇಲ್ಲ’; ಅತೃಪ್ತ ಬಣದ ನಿರೀಕ್ಷೆ ಹುಸಿಗೊಳಿಸಿದ ಅಮಿತ್ ಶಾ ‘ಲಂಚ್ ಪೇ ಚರ್ಚಾ’
ಅದೇ ರೀತಿ ಅರವಿಂದ ಬೆಲ್ಲದ್, ಸಿ.ಪಿ.ಯೋಗೇಶ್ವರ, ಅರವಿಂದ ಲಿಂಬಾವಳಿ, ಬಿ.ವೈ.ವಿಜಯೇಂದ್ರ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಮೂವರು ವಲಸಿಗ ಸಚಿವರು ಸಂಪುಟದಿಂದ ಹೊರ ಬೀಳುವುದು ದೃಢಪಟ್ಟಿದೆ.