ಬೆಂಗಳರೂರು: ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಕಗ್ಗಂಟು ಶಮನಗೊಳಿಸಿ ಗೊಂದಲಗಳಿಗೆ ತೆರೆ ಹಾಡಲು ಕೇಂದ್ರ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಇದೇ ಶನಿವಾರ ಅಥವಾ ಭಾನುವಾರ ಸಂಪುಟ ವಿಸ್ತರಣೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಸಂಪುಟ ವಿಸ್ತರಣೆ ವಿಳಂಬವಾದರೆ ಕಾಂಗ್ರೆಸ್ ಪಕ್ಷ ಮತ್ತು ಸಮ್ಮಿಶ್ರ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಹೀಗಾಗಿ ಕೂಡಲೇ ಸಂಪುಟ ವಿಸ್ತರಿಸಬೇಕು ಎಂದು ಕೇಂದ್ರ ಕಾಂಗ್ರೆಸ್ ನಾಯಕರು ದಿನಾಂಕ ನಿಗದಿ ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಟ್ಟು ಹಿಡಿದಿದ್ದ ಹಣಕಾಸು ಖಾತೆಯನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ಹಿರಿಯ ಕಾಂಗ್ರೆಸ್ ನಾಯಕರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕೇಂದ್ರ ನಾಯಕರ ಸೂಚನೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
ಕೇಂದ್ರ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಅವರು ರಾಜ್ಯ ನಾಯಕರು ಸ್ಥಾನ ಹಂಚಿಕೆ ಬಿಕ್ಕಟ್ಟು ಬಗೆಹರಿಸಿ ಶೀಘ್ರ ಸಂಪುಟ ವಿಸ್ತರಿಸುವಂತೆ ತಾಕೀತು ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಲ್ಲಿಕಾರ್ಜುನ ಖರ್ಗೆ ಅವರೂ ಸಂಪುಟ ವಿಸ್ತರಣೆ ಗೊಂದಲ ಬಗೆ ಹರಿಸುವಂತೆ ರಾಜ್ಯದ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಅಸಮಾಧಾನ
ಸಂಪುಟ ವಿಸ್ತರಣೆ ಬಿಕ್ಕಟ್ಟು ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಪ್ತರ ಬಳಿ ಅಸಮಾಧಾನ ಹೊರ ಹಾಕಿದ್ದು, ಕಾಂಗ್ರೆಸ್ ವಿರುದ್ಧ ಗರಂ ಆಗಿರುವುದಾಗಿ ವರದಿಯಾಗಿದೆ.
ಮೊದಲು ಬೇಷರತ್ ಬೆಂಬಲ ನೀಡಿ ಈಗ ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿರುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಅಸಮಧಾನ ತೋರಿದ್ದಾರೆ ಎಂದು ತಿಳಿದು ಬಂದಿದೆ.