ಬೆಂಗಳೂರು:ನಗರ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಖಾಲಿ ಇರುವ ಕ್ಷೇತ್ರಗಳ ಉಪ ಚುನಾವಣೆ ನಡೆದ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ 72 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಧ್ಯಕ್ಕೆ ದೆಹಲಿಗೆ ಹೋಗುತ್ತಿಲ್ಲ. ಎಐಸಿಸಿ ಅಧ್ಯಕ್ಷರು ಕರೆದಾಗ ದೆಹಲಿಗೆ ಹೋಗುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಮಹದಾಯಿ ನ್ಯಾಯಾಧೀಕರಣದ ತೀರ್ಪಿಗೆ ಪ್ರತಿಕ್ರಿಯಿಸಿರುವ ಅವರು, ಮಹದಾಯಿ ತೀರ್ಪಿನಿಂದ ಭಾಗಶಹ ಸಮಾಧಾನವಾಗಿದೆ. ನಾವು 36.5 ಟಿಎಂಸಿ ನೀರು ಕೇಳಿದ್ದೇವು. ಆದರೆ, 13.5 ಟಿಎಂಸಿ ನೀರು ಕೊಟ್ಟಿದ್ದಾರೆ. ಕುಡಿಯುವ ನೀರಿಗೆ 5.4 ಟಿಎಂಸಿ ನೀರು ಸಿಗಲಿದೆ. ಉಳಿದ ನೀರು ವಿದ್ಯುತ್ ಉತ್ಪಾದನೆಗೆ ಲಭಿಸಲಿದೆ. ಆ ನೀರೂ ಸಹ ವಿದ್ಯುತ್ ಉತ್ಪಾದನೆ ಬಳಿಕ ಗೋವಾಕ್ಕೆ ಹೋಗಲಿದೆ. ಅದರ ಉಪಯೋಗ ನಮಗೆ ಸಿಗುವುದಿಲ್ಲ ಎಂದು ಹೇಳಿದರು.
ಮಹದಾಯಿ ವಿವಾದದಲ್ಲಿ ನಮ್ಮ ಸರ್ಕಾರ ಐದು ವರ್ಷ ಕಾನೂನು ಹೋರಾಟ ಮಾಡಿತ್ತು. ನಮ್ಮ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದರು ಎಂದರು. ನಾವು ಸ್ವಾತಂತ್ರ್ಯ ಪಡೆದು ಬಹುದೂರ ಸಾಗಿ ಬಂದಿದ್ದೇವೆ. ಸಂವಿಧಾನದ ಆಶಯಗಳು ಇನ್ನೂ ಪೂರ್ಣವಾಗಿ ಈಡೇರಿಲ್ಲ. ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗುವಂತಾಗಬೇಕು ಎಂದು ಹೇಳಿದರು. ಇನ್ನು ಜಾತಿ ಸಮೀಕ್ಷೆ ವರದಿ ಬಿಡುಗಡೆ ಕುರಿತು ಕೇಳಿದ ಪ್ರಶ್ನೆಗೆ ಚುನಾವಣೆಯ ನಂತರ ನೋಡೋಣ ಎಂದರು.