ಬೆಂಗಳೂರು: ರಾಜ್ಯದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸದ್ಯಕ್ಕೆ ನಡೆಯುವುದು ಅನುಮಾನ ಎನ್ನಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮತ್ತೊಮ್ಮೆ ಭೇಟಿಯಾಗಿ ನಂತರ ತೀರ್ಮಾನ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿರುವುದು ಸಚಿವ ಸ್ಥಾನಾಂಕ್ಷಿಗಳ ಕಾಯುವಿಕೆ ಮುಂದುವರಿಯುವಂತೆ ಮಾಡಿದೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮತ್ತೊಮ್ಮೆ ದೆಹಲಿಗೆ ತೆರಳಿ ಅಮಿತ್ ಶಾ ರನ್ನು ಭೇಟಿಯಾಗಿ ನಿರ್ಧಾರ ಮಾಡುತ್ತೇನೆ. ಶಾ ಅವರೊಂದಿಗೆ ಮಾತನಾಡಿ ವಿಶೇಷ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಚರ್ಚೆಗಳು ಹೆಚ್ಚಾಗುತ್ತಿದೆ. ದಿನಕಳೆದಂತೆ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗುತ್ತಿದೆ. ಕೆಲವು ಸಚಿವರು, ಆಕಾಂಕ್ಷಿಗಳು ದೆಹಲಿಗೆ ಭೇಟಿ ನೀಡುತ್ತಿದ್ದು, ಸಂಪುಟ ಸಂಕಷ್ಟ ಮತ್ತಷ್ಟು ಹೆಚ್ಚುತ್ತಿದೆ.
ಇದನ್ನೂ ಓದಿ:ಸಂಪುಟ ಕಸರತ್ತಿನ “ಕುದಿಬಿಂದು”; ದಿಲ್ಲಿಗೆ ಸಚಿವರ ದೌಡು, ಸಂಸದರ ಸಭೆ ಕರೆದ ಸಿಎಂ ಬಿಎಸ್‌ವೈ
ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯುವ ಉದ್ದೇಶದಿಂದ ವಾರಗಳ ಹಿಂದೆ ದೆಹಲಿಗೆ ತೆರಳಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾಗಿದ್ದ ಸಿಎಂ ಬಿಎಸ್ ವೈ ಬರಿಗೈಯಲ್ಲಿ ಮರಳಿ ಬಂದಿದ್ದರು. ಎರಡು ಮೂರು ದಿನದಲ್ಲಿ ತೀರ್ಮಾನ ಹೇಳುವುದಾಗಿ ತಿಳಿಸಿದ್ದ ನಡ್ಡಾ ನಂತರ ಅಂತರ ಕಾಯ್ದುಕೊಂಡಿರುವುದು ಸಿಎಂ ಬಿಎಸ್ ವೈ ಗೆ ಸಂಕಷ್ಟ ಮತ್ತಷ್ಟು ಮುಂದುವರಿಯುವಂತೆ ಮಾಡಿದೆ.