Advertisement

ಪಟ್ಟಿ ಸಿದ್ಧ ; ಸಮ್ಮತಿ ಬಾಕಿ ! ಉಪಚುನಾವಣೆಯಲ್ಲಿ ಗೆದ್ದ 11 ಮಂದಿಗೂ ಸಚಿವ ಸ್ಥಾನ?

09:50 AM Jan 21, 2020 | sudhir |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಶನಿವಾರ ಚರ್ಚಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಇತ್ತೀಚೆಗಿನ ಉಪ ಚುನಾವಣೆಯಲ್ಲಿ ಜಯಿಸಿರುವ 11 ಮಂದಿಗೂ ಸಚಿವ ಸ್ಥಾನ ನೀಡುವ ಅನಿವಾರ್ಯತೆಯನ್ನು ಮನ ಗಾಣಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

ಮುಖ್ಯಮಂತ್ರಿಗಳು ಅಮಿತ್‌ ಶಾ ಜತೆ ಅರ್ಧ ಗಂಟೆ ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸಿದ್ದು, ದಾವೋಸ್‌ ಪ್ರವಾಸದಿಂದ ಹಿಂದಿರುಗಿದ ಬಳಿಕ ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುವು
ದಾಗಿ ಹೇಳಿದ್ದಾರೆ. ಈಗಾಗಲೇ ಸಂಭವನೀಯ ಸಚಿವರ ಪಟ್ಟಿಯನ್ನು ಶಾ ಅವರಿಗೆ ಸಲ್ಲಿಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿದ್ದು, ಪಕ್ಷದ ವರಿಷ್ಠರ ಸಮ್ಮತಿ ದೊರೆತ ಬಳಿಕ ಅಂದರೆ, ಮಾಸಾಂತ್ಯಕ್ಕೆ ಸಂಪುಟ ವಿಸ್ತರಣೆಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ಉಪಚುನಾವಣೆಯಲ್ಲಿ ಸ್ಪರ್ಧಿಸಿ ಅನರ್ಹ ಗೊಂಡಿದ್ದ ಶಾಸಕರ ಪೈಕಿ 11 ಮಂದಿ ಗೆದ್ದಿದ್ದು, ಎಲ್ಲರಿಗೂ ಸಚಿವ ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜತೆಗೆ ಮೂಲ ಬಿಜೆಪಿ ಶಾಸಕರಲ್ಲಿ ಒಂದಿಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯೂ ಇದೆ.

ಈ ಮಧ್ಯೆ, ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ರಾಗಿ ಜೆ.ಪಿ.ನಡ್ಡಾ ಅವರು ಸೋಮವಾರ ಇಲ್ಲವೇ ಬುಧವಾರ ಆಯ್ಕೆಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ನೂತನ ಅಧ್ಯಕ್ಷರ ನೇಮಕವಾದರೆ ಯಡಿಯೂರಪ್ಪ ಅವರು ದಾವೋಸ್‌ ಪ್ರವಾಸ ದಿಂದ ಹಿಂದಿರುಗಿದ ಬಳಿಕ (ಜ.24) ದಿಲ್ಲಿಗೆ ತೆರಳಿ ಶುಭಾಶಯ ಕೋರಿ ಅನಂತರವಷ್ಟೇ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯಬೇಕಾಗಬಹುದು. ಈ ಪ್ರಕ್ರಿಯೆ ಮಾಸಾಂತ್ಯದೊಳಗೆ ಮುಗಿದರೆ ಶೀಘ್ರ ಸಂಪುಟ ವಿಸ್ತರಣೆಯಾಗಬಹುದು. ಇಲ್ಲದಿದ್ದರೆ ಫೆ. 10ರ ಬಳಿಕ ವಿಸ್ತರಣೆಯಾಗಬಹುದು ಎನ್ನಲಾಗಿದೆ.

ಸಂಭಾವ್ಯರ ಪಟ್ಟಿ ಸಲ್ಲಿಕೆ
ವಿಶೇಷ ವಿಮಾನದಲ್ಲಿ ಒಟ್ಟಿಗೆ ಹುಬ್ಬಳ್ಳಿಗೆ ತೆರಳಿದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಕುರಿತು ಶಾ ಅವರ ಜತೆ ಚರ್ಚಿಸಿದ್ದಾರೆ. ಸದ್ಯ 17 ಸಚಿವರಷ್ಟೇ ಇದ್ದು, ಪ್ರಮುಖ ಖಾತೆಗಳನ್ನು ಹೆಚ್ಚುವರಿಯಾಗಿ ಹಾಲಿ ಸಚಿವರಿಗೆ ವಹಿಸಲಾಗಿದೆ. ಸಂಪುಟ ವಿಸ್ತರಣೆ ಅನಿವಾರ್ಯವಾಗಿದ್ದು, ತ್ವರಿತ ವಾಗಿ ಖಾತೆ ಹಂಚಿಕೆ ಮಾಡಿ ಆಡಳಿತಕ್ಕೆ ಇನ್ನಷ್ಟು ಚುರುಕು ಮುಟ್ಟಿಸಬೇಕಿದೆ ಎಂದು ಯಡಿಯೂರಪ್ಪ ಅವರು ಸಂಭಾವ್ಯ ಸಚಿವರ ಪಟ್ಟಿಯನ್ನು ಅಮಿತ್‌ ಶಾ ಅವರಿಗೆ ಸಲ್ಲಿಸಿದ್ದಾರೆ. ಜತೆಗೆ ಮೂಲ ಬಿಜೆಪಿಗರ ಪೈಕಿ ಹಲವರು ಸಚಿವ ಸ್ಥಾನಕ್ಕೆ ಮನವಿ ಮಾಡಿರುವ ಬಗ್ಗೆಯೂ ಪ್ರಸ್ತಾವಿಸಿದ್ದಾರೆ. ಈ ಬಗ್ಗೆ ಪರಿಶೀಲಿಸುವುದಾಗಿ ಅಮಿತ್‌ ಶಾ ಹೇಳಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

Advertisement

ಮುಖ್ಯಮಂತ್ರಿಗಳು ಸಲ್ಲಿಸಿದ್ದಾರೆ ಎನ್ನಲಾದ ಸಂಭಾವ್ಯರ ಪಟ್ಟಿಯಲ್ಲಿ ಯಾರ ಹೆಸರಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್‌ ತಕರಾರು ಇಲ್ಲ ಎಂಬ ಮಾಹಿತಿಯಿದ್ದು, ಇದೇ ಮಾತನ್ನು ಯಡಿಯೂರಪ್ಪ ಅವರು ಹಲವು ಬಾರಿ ಪುನರುಚ್ಚರಿಸಿದ್ದಾರೆ.

ಅದರಂತೆ ನಡೆದರೆ ಉಪಚುನಾವಣೆಯಲ್ಲಿ ಜಯ ಗಳಿಸಿದ 11 ಮಂದಿಗೂ ಸಚಿವಗಿರಿ ಒಲಿಯುವ ಸಾಧ್ಯತೆ ಹೆಚ್ಚು. 11 ಶಾಸಕರ ಜತೆಗೆ ಮೂಲ ಬಿಜೆಪಿ ಶಾಸಕರು ಇಲ್ಲವೇ ಉಪಚುನಾವಣೆಗೆ ಸ್ಪರ್ಧಿಸದ ಆರ್‌. ಶಂಕರ್‌ ಅವರನ್ನು ಸಚಿವರನ್ನಾಗಿ ಮಾಡುವ ಬಗ್ಗೆ ಪ್ರಸ್ತಾವಿಸಿರಬಹುದು ಎಂಬ ಮಾತುಗಳು ಕೇಳಿಬಂದಿವೆ.

ಯಡಿಯೂರಪ್ಪ ದಾವೋಸ್‌ ಪ್ರವಾಸ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರು, ಅಧಿಕಾರಿಗಳ ತಂಡದೊಂದಿಗೆ ರವಿವಾರ ದಾವೋಸ್‌ನತ್ತ ಪ್ರಯಾಣ ಬೆಳೆಸಿದರು.

ಸ್ವಿಟ್ಸರ್ಲೆಂಡ್‌ನ‌ ದಾವೋಸ್‌ನಲ್ಲಿ ಜ.21ರಿಂದ 24ರ ವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಯಡಿಯೂರಪ್ಪ ನೇತೃತ್ವ ದಲ್ಲಿ ಸಚಿವ ಜಗದೀಶ ಶೆಟ್ಟರ್‌, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವ ಕುಮಾರ್‌, ರಾಜಕೀಯ ಸಲಹೆಗಾರ ಮರಮ್ಕಲ್‌ ಸಹಿತ ಅಧಿಕಾರಿಗಳ ತಂಡ ರವಿವಾರ ಬೆಳಗ್ಗೆ ಪ್ರಯಾಣ ಬೆಳೆಸಿತು.

ಪ್ರವಾಸಕ್ಕೂ ಮುನ್ನ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ದಾವೋಸ್‌ ಪ್ರವಾಸ ಕೈಗೊಂಡಿದ್ದು, ಸುಮಾರು 35 ಪ್ರತಿಷ್ಠಿತ ಉದ್ಯಮಿ ಗಳೊಂದಿಗೆ ಸಂವಾದ ನಡೆಸಲಾಗುವುದು. ದೇಶದ ಕೆಲವೆಡೆ ಆರ್ಥಿಕ ಹಿಂಜರಿಕೆ ಸ್ಥಿತಿಯಂತೆ ಕಂಡುಬಂದಿದ್ದರೂ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ರಾಜ್ಯದಲ್ಲಿ ಹೂಡಿಕೆಗೆ ಪೂರಕ ವಾತಾ ವರಣವಿದ್ದು, ಈ ಬಗ್ಗೆ ಉದ್ಯಮಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು. ಇದರಿಂದ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುವ ಸಾಧ್ಯತೆಯಿದ್ದು, ಹೆಚ್ಚು ಉದ್ಯೋಗಗಳು ಸೃಷ್ಟಿ ಯಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಶನಿವಾರ ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ನಡೆಸಿದ್ದೇನೆ. ನಾನು ಯಾವ ಭರವಸೆ ನೀಡಿದ್ದೇನೋ ಅದನ್ನು ಪೂರೈಸುತ್ತೇನೆ. ದಾವೋಸ್‌ ಪ್ರವಾಸದಿಂದ ಹಿಂದಿರುಗಿದ ಬಳಿಕ ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು.
– ಬಿ.ಎಸ್‌. ಯಡಿಯೂರಪ್ಪ , ಮುಖ್ಯಮಂತ್ರಿ

ಪುನಾರಚನೆ ಆದೀತೇ?
ಸಂಪುಟ ವಿಸ್ತರಣೆ ಪ್ರಕ್ರಿಯೆ ಜತೆಗೆ ಸಂಪುಟ ಪುನಾರಚನೆ ಸಾಧ್ಯಾಸಾಧ್ಯತೆ ಬಗ್ಗೆಯೂ ಪಕ್ಷದಲ್ಲಿ ಚರ್ಚೆ ನಡೆದಿದೆ. ಕೆಲವು ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಅದೇ ಸಮುದಾಯದವರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವುದು. ಇಲ್ಲವೇ ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರಿಗೂ ಸಚಿವ ಸ್ಥಾನ ನೀಡುವ ಬದಲಿಗೆ ಒಂದಿಬ್ಬರು ಕಿರಿಯ ಶಾಸಕರಿಗೆ ಪ್ರಭಾವಿ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡಿ ಸಂಪುಟದಲ್ಲಿ ಸಮತೋಲನ ಸಾಧಿಸುವ ಪ್ರಯತ್ನ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next