Advertisement
ವಿಧಾನಸಭೆಯ ಬುಧವಾರದ ಕಲಾಪದ ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ತಮ್ಮ ಆಪ್ತರೊಂದಿಗೆ ದಿಲ್ಲಿಗೆ ಪ್ರಯಾಣ ಬೆಳೆಸಿದರು. ಕಳೆದ ಶನಿವಾರ ಸಿಎಂ, ಡಿಸಿಎಂ ಜತೆಗೆ ಒಟ್ಟು 28 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ ಸಂಭವನೀಯ ಸಚಿವರ ಪಟ್ಟಿ ಸಿದ್ಧಪಡಿಸುವಲ್ಲಿ ನಡೆದ ಕಸರತ್ತಿನಲ್ಲಿ ಒಮ್ಮತ ಮೂಡದ ಕಾರಣ ಕೊನೆ ಗಳಿಗೆಯಲ್ಲಿ 8 ಮಂದಿಯಷ್ಟೇ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯ ವಾಯಿತು. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಮತ್ತೆ ದಿಲ್ಲಿಯ ಹೈಕಮಾಂಡ್ ಅಂಗಳಕ್ಕೆ ಹೋಗಿದೆ.
ಸಚಿವರ ಪಟ್ಟಿ ಸಿದ್ಧಪಡಿಸುವಲ್ಲಿಯೇ ಸಮಸ್ಯೆ ಎದುರಾಗಿದೆ. ಹೈಕಮಾಂಡ್ ಒಂದು ಪಟ್ಟಿ ಸಿದ್ಧಪಡಿಸಿಕೊಂಡಿದ್ದರೆ, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಪ್ರತ್ಯೇಕವಾಗಿ ತಮ್ಮದೇ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದ್ದಾರೆ. ಹೀಗಾಗಿ ಮೂರು ಪಟ್ಟಿ ತಾಳೆಯಾಗದ ಕಾರಣ ಕಳೆದ ಸಲದ ಅಂತಿಮ ಕಸರತ್ತು ಕೊನೆ ಕ್ಷಣದಲ್ಲಿ ರದ್ದಾಗಿತ್ತು.
ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವೆ ಸಚಿವರ ಪಟ್ಟಿ ಸಿದ್ಧಪಡಿಸುವಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಸಿಎಂ ಪಟ್ಟಿಗೆ ಡಿಸಿಎಂ ವಿರೋಧ, ಡಿಸಿಎಂ ಪಟ್ಟಿಗೆ ಸಿಎಂ ವಿರೋಧ, ಅಷ್ಟೇ ಅಲ್ಲ, ಹೈಕಮಾಂಡ್ ಸಿದ್ಧಪಡಿಸಿರುವ ಪಟ್ಟಿಗೆ ಈ ಇಬ್ಬರ ವಿರೋಧ. ಹೀಗಾಗಿಯೇ ಪಟ್ಟಿ ಸಿದ್ಧಪಡಿಸುವುದು ಕಷ್ಟವಾಗುತ್ತಿದೆ. ಎಂಟØತ್ತು ಮಂದಿ ಹೊರತುಪಡಿಸಿದರೆ ಉಳಿದ ಅಭ್ಯರ್ಥಿಗಳ ವಿಷಯದಲ್ಲಿ ಒಮ್ಮತ ಮೂಡುತ್ತಿಲ್ಲ.
Related Articles
Advertisement
ಜಿಲ್ಲೆ, ಜಾತಿ, ಸಾಮಾಜಿಕ ನ್ಯಾಯ ಎಲ್ಲವನ್ನೂ ಪರಿಗಣಿಸಿ ಪಟ್ಟಿ ಸಿದ್ಧಪಡಿಸಬೇಕಿದೆ. ಬೆಂಗಳೂರಿಗೆ ಈಗಾಗಲೇ ಮೂವರಿಗೆ ಸಚಿವ ಸ್ಥಾನ ನೀಡಿರುವುದರಿಂದ ಮತ್ತಷ್ಟು ಮಂದಿಗೆ ಅವಕಾಶ ಕೊಡಬಾರದು ಎಂಬ ಆಗ್ರಹವೂ ಇದೆ. ಅದೇ ರೀತಿ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬಾರದೆಂಬ ಒತ್ತಾಯವಿದೆ. ಆದರೆ ಬೆಂಗಳೂರಿನಲ್ಲಿ ಎನ್.ಎ.ಹ್ಯಾರಿಸ್, ಎಂ.ಕೃಷ್ಣಪ್ಪ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಬೆಳಗಾವಿಯಲ್ಲಿ ಲಕ್ಷ್ಮಣ ಸವದಿ, ಲಕ್ಷ್ಮೀ ಹೆಬ್ಟಾಳ್ಕರ್, ಅಶೋಕ ಪಟ್ಟಣ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಯಾರ್ಯಾರ ಹೆಸರು ಮುಂಚೂಣಿಯಲ್ಲಿ?
ಪಿರಿಯಾಪಟ್ಟಣದ ವೆಂಕಟೇಶ್, ಟಿ.ನರಸೀಪುರದ ಡಾ| ಎಚ್.ಸಿ. ಮಹದೇವಪ್ಪ, ಅರಸೀಕೆರೆಯ ಶಿವಲಿಂಗೇ ಗೌಡ, ಶೃಂಗೇರಿಯ ಟಿ.ಡಿ. ರಾಜೇಗೌಡ, ದಾವಣಗೆರೆಯಿಂದ ಎಸ್.ಎಸ್.ಮಲ್ಲಿಕಾರ್ಜುನ, ಚಳ್ಳಕೆರೆಯ ರಘುಮೂರ್ತಿ, ಮಧುಗಿರಿ ರಾಜಣ್ಣ, ಗದಗದ ಎಚ್.ಕೆ.ಪಾಟೀಲ್, ರೋಣದ ಜೆ.ಎಸ್.ಪಾಟೀಲ್, ಭಾಲ್ಕಿ ಈಶ್ವರ ಖಂಡ್ರೆ, ಸೇಡಂನ ಡಾ| ಶರಣ ಪ್ರಕಾಶ್ ಪಾಟೀಲ್, ಧಾರವಾಡದಿಂದ ವಿನಯ ಕುಲಕರ್ಣಿ, ಭದ್ರಾವತಿಯ ಬಿ.ಕೆ.ಸಂಗಮೇಶ್, ಹುನಗುಂದದ ವಿಜಯಾನಂದ ಕಾಶಪ್ಪನವರ್, ಮೊಳಕಾಲ್ಮೂರಿನ ಎನ್.ವೈ.ಗೋಪಾಲಕೃಷ್ಣ, ಬಸವನಬಾಗೇವಾಡಿಯ ಶಿವಾನಂದ ಪಾಟೀಲ್, ಮುದ್ದೇಬಿಹಾಳದ ಸಿ.ಎಸ್.ನಾಡಗೌಡ ಅಪ್ಪಾಜಿ, ಜೇವರ್ಗಿಯ ಡಾ| ಅಜಯ್ ಸಿಂಗ್, ಸಿಂಧನೂರಿನ ಹಂಪನಗೌಡ ಬಾದರ್ಲಿ, ಕನಕಗಿರಿಯ ಶಿವರಾಜ ತಂಗಡಗಿ, ಯಲಬುರ್ಗಾದ ಬಸವರಾಜ ರಾಯರೆಡ್ಡಿ, ಹಾವೇರಿಯ ರುದ್ರಪ್ಪ ಲಮಾಣಿ, ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಪ್ರಕಾಶ್ ರಾಥೋಡ್, ನಜೀರ್ ಅಹ್ಮದ್, ಸಲೀಂ ಅಹ್ಮದ್, ಬಳ್ಳಾರಿಯ ನಾಗೇಂದ್ರ, ಸೊರಬದ ಮಧು ಬಂಗಾರಪ್ಪ, ನಾಗಮಂಗಲದ ಚಲುವರಾಯ ಸ್ವಾಮಿ, ಮಳವಳ್ಳಿಯ ನರೇಂದ್ರ ಸ್ವಾಮಿ ಅವರ ಹೆಸರು ಮುಂಚೂಣಿಯಲ್ಲಿವೆ.