Advertisement

ಗ್ರಾಹಕರ ಮೇಲಿನ ನಿರ್ಬಂಧ ಸದ್ಯದಲ್ಲೇ ತೆರವು

10:01 AM Mar 14, 2020 | Sriram |

ನವದೆಹಲಿ: ಯೆಸ್‌ ಬ್ಯಾಂಕ್‌ ಗ್ರಾಹಕರ ಮೇಲೆ ವಿಧಿಸಲಾಗಿದ್ದ ಹಣ ಹಿಂಪಡೆಯುವ ಮೇಲಿನ ಮಿತಿ ಹಾಗೂ ಇನ್ನಿತರ ಆರ್ಥಿಕ ವ್ಯವಹಾರಗಳ ನಿರ್ಬಂಧವನ್ನು ಬಹುಶಃ ಇನ್ನು 3 ದಿನಗಳಲ್ಲಿ ಹಿಂಪಡೆಯುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 

Advertisement

ಎಸ್‌ಬಿಐ ನೇತೃತ್ವದಲ್ಲಿ ಯೆಸ್‌ಬ್ಯಾಂಕ್‌ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ನಷ್ಟದಲ್ಲಿರುವ ಬ್ಯಾಂಕಿನ ಸಮಸ್ಯೆ ಬೇಗನೇ ದೂರವಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಪುನಶ್ಚೇತನಗೊಳ್ಳಲಿರುವ ಯೆಸ್‌ ಬ್ಯಾಂಕ್‌ಗೆ ಹೊಸ ಆಡಳಿತ ಮಂಡಳಿ ನೇಮಿಸುವುದಾಗಿ ಹೇಳಿದ್ದಾರೆ.

ಈ ನಡುವೆ, ಯೆಸ್‌ ಬ್ಯಾಂಕ್‌ನ ಷೇರುಗಳನ್ನು ಖರೀದಿಸಲು ಮುಂದಾಗಿರುವ ಐಸಿಐಸಿಐ, ಈ ಖರೀದಿಗಾಗಿ 1,000 ಕೋಟಿ ರೂ. ವ್ಯಯಿಸುವುದಾಗಿ ಹೇಳಿದೆ. ಎಚ್‌ಡಿಎಫ್ಸಿ ಬ್ಯಾಂಕ್‌ 1,000 ಕೋಟಿ ರೂ., ಆ್ಯಕ್ಸಿಸ್‌ ಬ್ಯಾಂಕ್‌ 600 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಮೂರೂ ಬ್ಯಾಂಕುಗಳು ಒಟ್ಟಾರೆಯಾಗಿ 60 ಕೋಟಿ ಷೇರುಗಳನ್ನು ಖರೀದಿಸಲಿವೆ.

ಸಿಬಿಐನಿಂದ ಹೊಸ ಪ್ರಕರಣ
ಯೆಸ್‌ ಬ್ಯಾಂಕ್‌ನ ಸಂಸ್ಥಾಪಕ ರಾಣಾ ಕಪೂರ್‌, ಅವರ ಪತ್ನಿ ಬಿಂದು ಹಾಗೂ ಆವಂತಾ ರಿಯಾಲ್ಟಿ ಸಂಸ್ಥೆಯ ಪ್ರವರ್ತಕರಾದ ಗೌತಮ್‌ ಥಾಪರ್‌ ವಿರುದ್ಧ ಸಿಬಿಐ ಹೊಸದಾಗಿ ಪ್ರಕರಣವೊಂದನ್ನು ದಾಖಲಿಸಿಕೊಂಡಿದೆ. ಅಮೃತಾ ಶೆರ್ಗಿಲ್‌ ಬಂಗಲೆಯ ಮಾರಾಟ ಪ್ರಕ್ರಿಯೆಯಲ್ಲಿ ಸುಮಾರು 2,000 ಕೋಟಿ ರೂ.ಗಳ ಸಾಲವನ್ನು ಥಾಪರ್‌ರವರ ಕಂಪನಿಗೆ ನೀಡಲು ಲಂಚ ಪಡೆದ ಆರೋಪವುಳ್ಳ ಪ್ರಕರಣ ಇದಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next