Advertisement

ಕನ್ನಡಿಗರಿಗೇ ಹುದ್ದೆ; ಕೈಗಾರಿಕಾ ಉದ್ಯೋಗ ನೀತಿಗೆ ತಿದ್ದುಪಡಿಗೆ ಸಂಪುಟ ಒಪ್ಪಿಗೆ

08:29 AM Nov 02, 2019 | Team Udayavani |

ಬೆಂಗಳೂರು: ಕೈಗಾರಿಕಾ ಉದ್ಯೋಗ ನೀತಿಗೆ ತಿದ್ದುಪಡಿ ತರಲು ರಾಜ್ಯ ಸರಕಾರ ನಿರ್ಧರಿಸಿದ್ದು, ಖಾಸಗಿ ಉದ್ಯಮಗಳಲ್ಲಿ ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಷರತ್ತು ವಿಧಿಸಲು ಸಂಪುಟ ಸಭೆ ತೀರ್ಮಾನಿಸಿದೆ.

Advertisement

ಜತೆಗೆ, ಟೆಕ್ಸ್‌ಟೈಲ್‌ ಮತ್ತು ಗಾರ್ಮೆಂಟ್ಸ್‌ ನೀತಿ (2019-2024 ) ಸಂಪುಟ ಒಪ್ಪಿಗೆ ನೀಡಿದ್ದು, ಕೆಲವು ವಿನಾಯಿತಿ-ರಿಯಾಯಿತಿ ಘೋಷಿಸಲಾಗಿದೆ. ಐದು ವರ್ಷಗಳಲ್ಲಿ 10 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ, 5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ.

ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಕೈಗಾರಿಕಾ ಉದ್ಯೋಗ ನೀತಿ ಕರ್ನಾಟಕ ಇಂಡಸ್ಟ್ರಿಯಲ್‌-1961 (ಸ್ಟಾಂಡಿಗ್‌ ಆರ್ಡರ್)ಗೆ ತಿದ್ದುಪಡಿ ಮಾಡಲು ಸಂಪುಟ ಒಪ್ಪಿಗೆ ನೀಡಿದ್ದು, ಸಿ ಮತ್ತು ಡಿ ವೃಂದದ ಹುದ್ದೆಗಳಿಗೆ ಕನ್ನಡಿಗರಿಗೆ ಆದ್ಯತೆಯ ಷರತ್ತು, ಶೇ.5 ರಷ್ಟು ವಿಕಲಚೇತನರಿಗೆ ಮೀಸಲಾತಿ ಅಂಶಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

2016ರಲ್ಲಿ ಈ ನೀತಿ ಜಾರಿಯಾಗಿತ್ತಾದರೂ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ದೊರೆಯಬೇಕು ಎಂಬ ಬೇಡಿಕೆಯಿತ್ತು. ಆ ಹಿನ್ನೆಲೆಯಲ್ಲಿ ನೀತಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನಾಲ್ಕು ವಿಭಾಗ: ನೂತನ ಟೆಕ್ಸ್‌ಟೈಲ್‌ ಮತ್ತು ಗಾರ್ಮೆಂಟ್ಸ್‌ ನೀತಿ -2019-2024 ಜಾರಿಗೆ ಸಂಪುಟ ಒಪ್ಪಿಗೆ ನೀಡಿದೆ. ಸಣ್ಣ ಮತ್ತು ಅತಿ ಸಣ್ಣ, ಬೃಹತ್‌, ಭಾರೀ ಎಂಬ ನಾಲ್ಕು ವಿಭಾಗ ಮಾಡಲಾಗಿದ್ದು, ಆ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡು ವವರಿಗೆ ಭೂಮಿ, ತೆರಿಗೆ ವಿನಾಯಿತಿ ಸೇರಿ ಹಲವು ಸೌಲಭ್ಯ ಕಲ್ಪಿಸಲು ಹೊಸ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಉದ್ಯೋಗ ಸೃಷ್ಟಿಯು ಪ್ರಮುಖ ಆದ್ಯತೆಯೂ ಆಗಿದೆ ಎಂದು ತಿಳಿಸಿದರು.

Advertisement

ಮಾಹಿತಿ ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ನಾವಿನ್ಯತಾ ಪ್ರಾಧಿಕಾರ ರಚಿಸಲು ಸಂಪುಟ ಒಪ್ಪಿಗೆ ನೀಡಿದ್ದು, ಈ ವಲಯದಲ್ಲಿ ಉದ್ಯಮ ಆರಂಭಿಸುವವರಿಗೆ ಅಗತ್ಯವಾದ ಅನುಮತಿ ಸೇರಿ ಇತರೆ ಮಂಜೂರಾತಿಗಳಿಗಾಗಿ ಪ್ರತ್ಯೇಕ ಘಟಕ ಸ್ಥಾಪಿಸಲಾಗುವುದು. ಮುಖ್ಯಮಂತ್ರಿಯವರು ಇದಕ್ಕೆ ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1242 ಸಹಾಯಕ ಪ್ರಾದ್ಯಾಪಕ ಹುದ್ದೆಗಳನ್ನು ವಿಶೇಷ ನಿಯ ಮದಡಿ ಭರ್ತಿಗೆ ಸಂಪುಟ ಒಪ್ಪಿಗೆ ನೀಡಿದೆ. ಜತೆಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆ ತುಂಬಲು ಅನುಮತಿ ನೀಡಲಾಗಿದೆ. ಕಾನೂನು ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿಗೆ 7 ನೇ ವೇತನ ಆಯೋಗದ ಶಿಫಾರಸಿನಂತೆ ಯುಜಿಸಿ ಪರಿಷ್ಕೃತ ವೇತನ ನೀಡಲು ಸಂಪುಟ ಅನುಮೋದನೆ ನೀಡಿದೆ.

2 ಎ ವರ್ಗಕ್ಕೆ ಮೀಸಲಿದ್ದ 46 ಸಿವಿಲ್‌ ನ್ಯಾಯಾಧೀಶರ ಹುದ್ದೆಗಳಿಗೆ ಆ ವರ್ಗದವರು ಸಿಗದ ಕಾರಣ ಬೇರೆ ವರ್ಗಕ್ಕೆ ಮೀಸಲು ಬದಲಾಯಿಸಲು ಹೈಕೋರ್ಟ್‌ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷ ಪ್ರಕರಣ ಎಂದು ಪಶು ಸಂಗೋಪನೆ ಇಲಾಖೆಯ 83 ಪಶು ವೈದ್ಯಕೀಯ ಸಹಾಯಕರ ಹುದ್ದೆ ಹಾಗೂ 66 ಪಶು ವೈದ್ಯಾದಿಕಾರಿಗಳ ಹುದ್ದೆ ಭರ್ತಿಗೆ ಸಂಪುಟ ಅನುಮೋದನೆ ನೀಡಿದೆ ಎಂದು ವಿವರಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಸಿವಿಲ್‌ ಎಂಜಿನಿಯರ್ ನೇಮಕಾತಿಯನ್ನು ಈ ಮೊದಲು ರಾಜ್ಯಮಟ್ಟದ ಸಮಿತಿ ಮಾಡುತ್ತಿತ್ತು. ಆ ನೇಮಕಾತಿಯನ್ನೂ ಇನ್ನು ಮುಂದೆ ಕೆಪಿಎಸ್‌ಸಿ ಮೂಲಕವೇ ಮಾಡಲು ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು.

ಕಾರ್ಖಾನೆಗಳಿಗೆ ಅದಿರು
ರಾಜ್ಯದಲ್ಲಿ ಬಳಕೆಗೆ ಅನುಮತಿ ಇರುವ 35 ದಶಲಕ್ಷ ಟನ್‌ ಕಬ್ಬಿಣದ ಅದಿರು ಪೈಕಿ 28 ದಶಲಕ್ಷ ಟನ್‌ ಕಬ್ಬಿಣದ ಅದಿರು ಬಳಕೆಯಾಗುತ್ತಿದ್ದು ಉಳಿದ 7 ದಶಲಕ್ಷ ಟನ್‌ ಅದಿರು ಉಪ ಉತ್ಪನ್ನವಾಗಿ ಪರಿವರ್ತನೆ ಮಾಡಿ ಅಗತ್ಯ ಇರುವ ಕಾರ್ಖಾನೆಗಳಿಗೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರಕ್ಕೇ ಮೆಡಿಕಲ್‌ ಕಾಲೇಜು
ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ವಿಷಯದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಒತ್ತಡಕ್ಕೆ ಮಣಿಯದಂತೆ ಸಂಪುಟದಲ್ಲಿ ಕೆಲವು ಸಚಿವರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೇರಿ ಹಲವು ಸಚಿವರು, ವೈದ್ಯಕೀಯ ಕಾಲೇಜು ಸ್ಥಳಾಂತರ ಬಗ್ಗೆ ಮತ್ತೆ ನಿಲುವು ಬದಲಿಸುವುದು ಬೇಡ ಎಂದು ಸಿಎಂಗೆ ತಿಳಿಸಿದರು. ಇದಕ್ಕೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಕೂಡ, ತಾಲೂಕಿಗೆ ಒಂದು ವೈದ್ಯಕೀಯ ಕಾಲೇಜು ಕೊಡಲು ಆಗುವುದಿಲ್ಲ. ಈಗಾಗಲೇ ರಾಮನಗರಕ್ಕೆ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಜೂರಾತಿ ಆಗಿದೆ ಎಂದು ಹೇಳಿದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next