Advertisement

ಮೋದಿ ಪ್ಯಾಕೇಜ್‌ಗೆ ಸಚಿವ ಸಂಪುಟ ಒಪ್ಪಿಗೆ

02:46 AM May 21, 2020 | Sriram |

ಹೊಸದಿಲ್ಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ(ಎಂಎಸ್‌ಎಂಇ)ಗಳಿಗೆ 3 ಲಕ್ಷ ಕೋಟಿ ರೂ.ವರೆಗಿನ ಹಣಕಾಸು ನೆರವು ನೀಡುವುದೂ ಸೇರಿ ದೇಶದ ಆರ್ಥಿಕ ಸ್ಥಿತಿ ಉತ್ತೇಜನಕ್ಕಾಗಿ ಕೇಂದ್ರ ಸರಕಾರ ಘೋಷಿಸಿದ್ದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನ ಹಲವು ಮಹತ್ವದ ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ.

Advertisement

ಇದರೊಂದಿಗೆ ಬ್ಯಾಂಕೇತರ ಹಣಕಾಸು ಕಂಪೆನಿಗಳು ಮತ್ತು ವಸತಿ ಹಣ ಕಾಸು ಸಂಸ್ಥೆ ಗಳ ಆರ್ಥಿಕ ಸ್ಥಿತಿ ಸುಧಾರಣೆಗೆ ವಿಶೇಷ ನಗದು ಯೋಜನೆ, ವಲಸೆ ಕಾರ್ಮಿಕರಿಗೆ 2 ತಿಂಗಳು ಉಚಿತ ಆಹಾರಧಾನ್ಯವಿತರಣೆ, ಕಲ್ಲಿ ದ್ದಲು ಮತ್ತು ಲಿಗ್ನೆ„ಟ್‌ ಗಣಿಗಳ ಹರಾಜು ಪ್ರಕ್ರಿಯೆ ಜಾರಿ, ಅಸಂಘಟಿತ ಸೂಕ್ಷ್ಮ ಆಹಾರ ಸಂಸ್ಕರಣೆ ಉದ್ದಿಮೆಗಳ ಸ್ಥಿರೀಕರಣಕ್ಕೆ 10,000 ಕೋಟಿ ರೂ. ಆರ್ಥಿಕ ನೆರವು ನೀಡಲು ಸಂಪುಟ ಸಭೆಯ ಸಮ್ಮತಿ ದೊರೆತಿದೆ.

ದೇಶದ ಆರ್ಥಿಕತೆ ಸುಧಾರಿಸುವ ನಿಟ್ಟಿನಲ್ಲಿ ವಿವಿಧ ವಲಯಗಳನ್ನು ಗಮನದಲ್ಲಿರಿಸಿಕೊಂಡು ಮೇ 13ರಿಂದ ಒಟ್ಟು 5 ದಿನ, ಐದು ಹಂತಗಳಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ಗಳು ಸೇರಿ ವ್ಯವಹಾರಗಳಿಗೆ ಮೇಲಾಧಾರ ರಹಿತ ಸಾಲ ನೀಡುವ ಉದ್ದೇಶದಿಂದ 3 ಲಕ್ಷ ಕೋಟಿ ರೂ. ಅನುದಾನ ಮೀಸಲಿರಿಸಿದ್ದರು. ಇದರಿಂದ ಸರಿಸುಮಾರು 45 ಲಕ್ಷ ಕೈಗಾರಿಕೆಗಳಿಗೆ ನೆರವಾಗಲಿದೆ ಎಂದು ತಿಳಿಸಿದ್ದರು. ಪ್ರಸ್ತುತ ಈ ಯೋಜನೆಗೆ ಸಂಪುಟದ ಅನುಮೋದನೆ ದೊರೆತಿದೆ.

ವಲಸಿಗರಿಗೆ ಆಹಾರ
ಆತ್ಮನಿರ್ಭರ ಭಾರತ ಪ್ಯಾಕೇಜ್‌ನಲ್ಲಿ ನೀಡಿದ್ದ ಭರವಸೆಯಂತೆ ವಲಸೆ ಕಾರ್ಮಿಕರ ಹಸಿವು ನೀಗಿಸುವತ್ತ ಕೇಂದ್ರ ಗಮನಹರಿಸಿದ್ದು, ದೇಶಾದ್ಯಂತ ಸುಮಾರು 8 ಕೋಟಿ ಕಾರ್ಮಿಕರಿಗೆ ಮೇ, ಜೂನ್‌ ಅವಧಿಯಲ್ಲಿ ಉಚಿತವಾಗಿ 5 ಕೆ.ಜಿ. ಆಹಾರ ಧಾನ್ಯ ವಿತರಿಸುವ ಯೋಜನೆಗೆ ಹಸುರು ನಿಶಾನೆ ತೋರಿದೆ. ಇದರಿಂದ 3,500 ಕೋಟಿ ರೂ. ಹೊರೆ ಬೀಳಲಿದೆ.

ಪಿಎಂವಿವಿವೈ ವಿಸ್ತರಣೆ
ಹಿರಿಯ ನಾಗರಿಕರಿಗೆ ಸಾಮಾಜಿಕ ಸುರಕ್ಷತೆಯ ಭರವಸೆ ನೀಡುವ ಪ್ರಧಾನ ಮಂತ್ರಿ ವಯ ವಂದನ ಯೋಜನೆ (ಪಿಎಂವಿವಿವೈ)ಯನ್ನು 2023ರ ವರೆಗೆ (3 ವರ್ಷ) ವಿಸ್ತರಿಸಲು ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೂಡಿಕೆ ಆಧಾರದಲ್ಲಿ ಮಾಸಿಕ ನಿಗದಿತ ಪಿಂಚಣಿ ನೀಡುವ ಎಲ್‌ಐಸಿಯ ಈ ಯೋಜನೆಯಡಿ ವಾರ್ಷಿಕ ಶೇ.7.4 ಖಚಿತ ರಿಟರ್ನ್ ಲಭ್ಯವಾಗಲಿದೆ.

Advertisement

ಸಾಮಾಜಿಕ ಅಂತರದ ಪಾಠ
ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರು ಸ್ವತಃ ಸಾಮಾಜಿಕ ಅಂತರದ ನಿಯಮ ಪಾಲಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಸಚಿವರು ನಿರ್ದಿಷ್ಟ ಅಂತರದಲ್ಲಿ ಹಾಕಿದ್ದ ಆಸನಗಳಲ್ಲಿ ಕುಳಿತಿದ್ದರು. ಈ ಬಗ್ಗೆ ಅಮಿತ್‌ ಶಾ ಟ್ವೀಟ್‌ ಮಾಡಿದ್ದು, ನಾವೆಲ್ಲರೂ ಕೊರೊನಾ ಸೋಂಕಿನ ವಿರುದ್ಧದ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದೇವೆ. ನೀವೂ ಪಾಲಿಸಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next