ಹೊಸದಿಲ್ಲಿ: ದಿವಾಳಿ ಕಾಯ್ದೆಯಲ್ಲಿ ಕೆಲವೊಂದು ಸಮಸ್ಯೆಗಳು ಇರುವುದರಿಂದ ಅದಕ್ಕೆ ತರಲಾಗಿರುವ ಎರಡನೇ ತಿದ್ದುಪಡಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. ಈಗಾಗಲೇ ಅನುಮೋದನೆಗೊಂಡಿರುವ ಕಾಯ್ದೆಯ ಅನುಷ್ಠಾನದಲ್ಲಿ ಸಮಸ್ಯೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದವು. ಹೀಗಾಗಿ, ಅದನ್ನು ಪರಿಗಣಿಸಲಾಗಿದೆ. ಎರಡನೇ ತಿದ್ದುಪಡಿಗೆ ಅನುಮೋದನೆ ಸಿಕ್ಕಿದ್ದರಿಂದಲಾಗಿ ಅಧಿಕೃತ ಪ್ರತಿನಿಧಿ ಮೂಲಕ ದಿವಾಳಿ ಪ್ರಕ್ರಿಯೆ ನಡೆಸಲು ಉಂಟಾಗುತ್ತಿದ್ದ ಕಷ್ಟಗಳು ನಿವಾರಣೆಯಾದಂತಾಗಿದೆ. ವಿಶೇಷವಾಗಿ ದಿವಾಳಿ ಹೊಂದಿದ ಕಂಪೆನಿ ಖರೀದಿಸಲು ಮುಂದಾಗುವವರಿಗೆ ಯಾವುದೇ ಕಿರುಕುಳ ನೀಡದಂತೆ ಇರುವ ತಿದ್ದುಪಡಿ ತರಲಾಗಿದೆ. ಹಿಂದಿನ ಕಂಪೆನಿಯ ಆಡಳಿತ ಮಂಡಳಿ ಮಾಡಿರುವ ತಪ್ಪಿಗೆ ಅದನ್ನು ಖರೀದಿಸಲು ಹೊರಟಿರುವ ಹೊಸಬರಿಗೆ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ತಿದ್ದುಪಡಿಯನ್ನು ಹಾಲಿ ಅಧಿವೇಶನದಲ್ಲಿಯೇ ಮಂಡಿಸಲು ಉದ್ದೇಶಿಸಲಾಗಿದೆ.
ಇದರ ಜತೆಗೆ ಸಂಕಷ್ಟಕ್ಕೆ ಸಿಲುಕಿದ ಉದ್ದಿಮೆಗಳಿಗೆ ವಿತ್ತೀಯ ನೆರವು ಪಡೆದುಕೊಳ್ಳಲೂ ನೆರವಾಗಲಿದೆ. ಉದ್ದಿಮೆ ನಡೆಸಿ ನಷ್ಟ ಹೊಂದಿದ ಕಾರ್ಪೊರೇಟ್ ಸಾಲಗಾರ ವಹಿ ವಾಟು ನಡೆಸಲು ಅಸಾಧ್ಯವಾಗದೇ ಇರು ವಂಥ ವಾತಾವರಣ ನಿರ್ಮಾಣವಾಗುವುದನ್ನು ತಪ್ಪಿಸಲು ನಿಗದಿತ ಉದ್ದಿಮೆಗೆ ನೀಡಲಾಗಿರುವ ಪರವಾನಗಿ, ಅನುಮತಿ, ರಿಯಾಯಿತಿಗಳನ್ನು ರದ್ದು ಪಡಿಸದೇ ಇರುವಂತೆಯೂ ಅವಕಾಶ ಮಾಡಿಕೊಡಲಾಗಿದೆ. ಆದರೆ ನಿಷೇಧದ ಅವಧಿ ಯಲ್ಲಿ ಅವು ಯಾವುದನ್ನೂ ನವೀಕರಿ ಸುವುದಕ್ಕೆ ಅವಕಾಶ ಇರುವುದಿಲ್ಲ.
ಐಐಎಫ್ಸಿಎಲ್‌ಗೆ 5,300 ಕೋಟಿ:
ಮೂಲ ಸೌಕರ್ಯ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ 100 ಲಕ್ಷ ಕೋಟಿ ರೂ. ವಿನಿಯೋಗ ಮಾಡಲು ಮುಂದಾಗಿರುವ ಕೇಂದ್ರ ಸರಕಾರ ಭಾರತ ಮೂಲ ಸೌಕರ್ಯ ಹಣಕಾಸು ಸಂಸ್ಥೆ ನಿಯಮಿತ (ಐಐಎಫ್ಸಿಎಲ್)ಕ್ಕೆ 2019-20ನೇ ಸಾಲಿನಲ್ಲಿ 5,300 ಕೋಟಿ ರೂ. ಮತ್ತು 2020-21ನೇ ಸಾಲಿನಲ್ಲಿ 10 ಸಾವಿರ ಕೋಟಿ ರೂ. ನೀಡುವ ಬಗ್ಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.