ಬೆಂಗಳೂರು: ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಕಾಪು, ಹೆಬ್ರಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮತಿ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಾಪುರ ತಾಲೂಕಿನ ಅಜ್ರೆ, ಕೊಡ್ಲಾಡಿ, ಅಂಪಾರು, ಕರ್ಕುಂಜೆ, ಸಿದ್ದಾಪುರ ಹಾಗೂ ಇತರೆ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ 105 ಕೋಟಿ ರೂ. ವೆಚ್ಚದ ಸಿದ್ಧಾಪುರ ಏತ ನೀರಾವರಿ ಯೋಜನೆಗೆ ಗುರುವಾರ ರಾಜ್ಯ ಸಚಿವ ಸಂಪುಟ ತನ್ನ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ವ್ಯಾಪ್ತಿಯಲ್ಲಿನ ಸಿದ್ಧಾಪುರ, ಅಂಪಾರು, ಅಜ್ರಿ ಮತ್ತು ಕೊಡ್ಲಾಡಿ ಗ್ರಾಮಗಳ ಪ್ರದೇಶವು ವಾರಾಹಿ ಬಲದಂಡೆ ನಾಲೆಯ ಬಲ ಭಾಗದಲ್ಲಿ ಬರುವುದರಿಮದ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುತ್ತದೆ. ಈ ಪ್ರದೇಶದ ಬಹುಭಾಗವು ಕೃಷಿ ಭೂಮಿಯಾಗಿದ್ದು, ನೀರಾವರಿಯು ಅಗತ್ಯವಾಗಿರುವುದರಿಂದ, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ನೀರಾವರಿ ಸೌಲಭ್ಯವನ್ನು ಒದಗಿಸುವಂತೆ ಒತ್ತಾಯಿಸುತ್ತಿರುತ್ತಾರೆ. ಆದುದರಿಂದ ಸದರಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುತ್ತದೆ.
ಜಲ ಜೀವನ್ ಮಿಷನ್ ಯೋಜನೆಯಲ್ಲಿ 1600 ಕೋಟಿ ರೂ. ವೆಚ್ಚದಲ್ಲಿ ಕಾರ್ಕಳ, ಹೆಬ್ರಿ ಹಾಗೂ ಕಾಪು ತಾಲೂಕಿನ 69 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಇನ್ನು ಮಲ್ಪೆ 3ನೇ ಹಂತದ ಮೀನುಗಾರಿಕೆ ಬಂದರು ಅಭಿವೃದ್ಧಿಗೆ 49.90 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.