ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಅಶ್ಲೀಲ ಸಿ.ಡಿ ತಯಾರಿಸಿ ಘನತೆಗೆ ಧಕ್ಕೆ ತರುವ ಕೃತ್ಯ ನಡೆಸಿದ ಆರೋಪ ಪ್ರಕರಣದ ವಿಚಾರಣೆ ವಾಪಸ್ ಪಡೆಯಲು ಹಿಂದಿನ ಕಾಂಗ್ರೆಸ್ ಸರ್ಕಾರ ಹೊರಡಿಸಿದ್ದ ಆದೇಶ ಹಿಂಪಡೆಯಲು ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಆ ಮೂಲಕ ದೋಷಾರೋಪಣಾ ಪಟ್ಟಿ ಹೊರ ಡಿಸುವ ಹಂತದಲ್ಲೇ ಸ್ಥಗಿತಗೊಂಡಿರುವ ಪ್ರಕರ ಣಕ್ಕೆ ಮತ್ತೆ ಮರು ಜೀವ ದೊರೆತಂತಾಗಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಯಲಿದೆ. ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ರಾಘವೇಶ್ವರ ಭಾರತಿ ಸ್ವಾಮೀಜಿಯವರ ಘನತೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಅಶ್ಲೀಲ ಚಿತ್ರ, ಆಕೃತಿ, ಸಿಡಿ ತಯಾರಿಸಿ,
ಮತೀಯ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೃತ್ಯಕ್ಕೆ ಸಂಬಂಧಪಟ್ಟಂತೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದ ವಿಚಾರಣೆ ಹಿಂಪಡೆಯಲು 2015ರಲ್ಲಿ ಅಂದಿನ ಸರ್ಕಾರ ನೀಡಿದ್ದ ಆದೇಶ ಹಿಂಪಡೆಯಲು ಸಂಪುಟ ಸಭೆ ನಿರ್ಧರಿಸಿದೆ. ಅದರಂತೆ ಪ್ರಕರಣದ ತನಿಖೆ ಮುಂದುವರಿಯಲಿದೆ ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ 2010ರ ಏ. 1ರಂದು ಕಾಮ ದಹನ ಪೂರ್ಣಿಮೋತ್ಸವ ನಡೆಯುವ ವೇಳೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧ ಅಶ್ಲೀಲ ಸಿ.ಡಿ. ತಯಾರಿಸಿದ್ದು, ಲೇಖನ ಹಂಚುತ್ತಿರುವ ಆರೋಪ ಕೇಳಿ ಬಂದಿತ್ತು. ಸ್ವಾಮೀಜಿಗಳ ಘನತೆಗೆ ಧಕ್ಕೆ ಉಂಟು ಮಾಡುವ ಸಲುವಾಗಿ ಅಶ್ಲೀಲ ಚಿತ್ರ, ಆಕೃತಿ, ಸಿ.ಡಿ. ತಯಾರಿಸಿ ಮತೀಯ ಭಾವನೆಗಳಿಗೆ ಧಕ್ಕೆ ತಂದು ಮಾನ ಹಾನಿ ಮಾಡಲು ಉದ್ದೇಶ ಪೂರ್ವಕವಾಗಿ ಸಂಚು ನಡೆಸಿರುವ ಆರೋಪವೂ ಇತ್ತು.
ಈ ಸಂಬಂಧ ಗೋಕರ್ಣ ಠಾಣೆಯಲ್ಲಿ ಐಪಿಸಿ ಕಲಂ 120(ಬಿ), 153 (ಎ)(ಬಿ), 292 (ಎ), 295 (ಎ), 499, 511, 298 ರೆ.ವಿ. 34, ತಂತ್ರಜ್ಞಾನ ಕಾಯ್ದೆ ಹಾಗೂ ಮಹಿಳೆಯರನ್ನು ಅಶ್ಲೀಲ ಚಿತ್ರಿಸುವ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದವು. ಈ ನಡುವೆ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಆರ್‌ಪಿಸಿ ಕಲಂ 321ರಡಿ ಪ್ರಕರಣದ ವಿಚಾರಣೆ ಹಿಂಪಡೆಯುವ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು 2015ರ ನ.4ರಂದು ಆದೇಶ ಹೊರಡಿಸಲಾಗಿತ್ತು. ಆದರೆ ಈವರೆಗೆ ಪ್ರಕರಣ ಹಿಂಪಡೆದಿಲ್ಲ.
ಆ ಹಿನ್ನೆಲೆಯಲ್ಲಿ ಹಿಂಪಡೆದಿರುವ ಪ್ರಸ್ತಾವನೆ ಪುನರ್ ಪರಿಶೀಲಿಸಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸದ್ಯ ಆ ಪ್ರಕರಣ ವಿಚಾರಣಾ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸುವ ಹಂತದಲ್ಲಿದೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ವಿಚಾರಣೆ ಹಿಂಪಡೆಯಲು ಹೊರಡಿಸಿದ್ದ ಆದೇಶ ಹಿಂಪಡೆಯುವ ತೀರ್ಮಾನ ಕೈಗೊಳ್ಳುವ ಮೂಲಕ ಪ್ರಕರಣದ ವಿಚಾರಣೆ ಮುಂದುವರಿಸಲು ರಾಜ್ಯ ಬಿಜೆಪಿ ಸರ್ಕಾರ ಅವಕಾಶ ನೀಡಿದೆ.