Advertisement
ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮಕ್ಕಳಿಗಾಗಿ “ಹೋಬಳಿಗೊಂದು ವಸತಿ ಶಾಲೆ’ ಎಂಬ ಆಶಯ ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಅಂದಾಜು 646.42 ಕೋಟಿ ರೂ. ವೆಚ್ಚದಲ್ಲಿ 40 ವಸತಿ ಶಾಲಾ ಸಂಕೀರ್ಣಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು.
Related Articles
ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲಾ ಸಂಕೀರ್ಣಗಳನ್ನು 205.94 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.
Advertisement
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 48.95 ಕೋಟಿ ರೂ. ಅಂದಾಜು ಮೊತ್ತದಲ್ಲಿ ಒಳಚರಂಡಿ ಯೋಜನೆ ಕೈಗೆತ್ತಿಕೊಳ್ಳಲು ಒಪ್ಪಿಗೆ ಕೊಡಲಾಗಿದೆ. ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣಕ್ಕೆ ನೀರು ಸರಬರಾಜು ಕಾಮಗಾರಿಯನ್ನು 88 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣಕ್ಕೆ 49.36 ಕೋಟಿ ರೂ. ವೆಚ್ಚದಲ್ಲಿ ನೀರು ಸರಬರಾಜು ಯೋಜನೆಗೆ ಅನುಮೋದನೆ ಕೊಡಲಾಗಿದೆ ಎಂದು ಅವರು ಹೇಳಿದರು. ಭೀಮಾ ಏತ ನೀರಾವರಿ ಯೋಜನೆಯಡಿಬಾಧಿತರಾದ ಸಂತ್ರಸ್ತರಿಗೆ ಶೇ.25ರಷ್ಟು ಸವಕಳಿ ಮೊತ್ತವನ್ನು ಕಡಿತಗೊಳಿಸದೆ ಕಟ್ಟಡಗಳ ಪರಿಹಾರವಾಗಿ ಒಟ್ಟು 6.32 ಕೋಟಿ ರೂ. ಮೌಲ್ಯದ ಅವಾರ್ಡ್ ಮಾಡಿರುವ ಪ್ರಕರಣದ ವ್ಯತ್ಯಾಸದ ಮೊತ್ತ ಹಾಗೂ ಅವಾರ್ಡ್ ಮಾಡಬೇಕಾಗಿರುವ ಪ್ರಕರಣಗಳ ಮೊತ್ತ ಪಾವತಿಗೆ ಒಪ್ಪಿಗೆ. ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲೂಕಿನ ಸರಗೂರು-ಹೆಡೆಯಾಲ ರಸ್ತೆಯನ್ನು ಬಡಗಲಪುರ ಮಾರ್ಗವಾಗಿ ಕಾಮಗಾರಿ ಪೂರ್ಣಗೊಳಿಸಲು 29.84 ಕೋಟಿ ರೂ. ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಇತರ ನಿರ್ಣಯಗಳು– ಕರ್ನಾಟಕ ಜಲಸಂಪನ್ಮೂಲ ಇಲಾಖೆ (ಸಹಾಯಕ ಇಂಜಿನಿಯರ್ ಮತ್ತು ಕಿರಿಯ ಇಂಜಿನಿಯರುಗಳ ವೃಂದದ ನೇಮಕಾತಿ) (ವಿಶೇಷ) ನಿಯಮಗಳು-2017ಕ್ಕೆ ಅನುಮೋದನೆ. – ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತಕ್ಕೆ 300 ಕೋಟಿ ರೂ. ಸಾಲಕ್ಕೆ ಸರ್ಕಾರಿ ಖಾತರಿಗೆ ಒಪ್ಪಿಗೆ. – ಕುಪಲತಿಗಳ ನಿವೃತ್ತಿ ವಯೋಮತಿ ಪರಿಷ್ಕರಿಸುವ ಸಂಬಂಧ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಅಧಿನಿಯಮಕ್ಕೆ ತಿದ್ದುಪಡಿ. – ಇಲಾಖಾ ವಿಚಾರಣೆ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳಾದ ಗಿರೀಶ್ಚಂದ್ರ ಹಾಗೂ ಎಸ್.ಕೆ. ಹೆಗಡೆಗೆ ಕಡ್ಡಾಯ ನಿವೃತ್ತಿಗೆ ಒಪ್ಪಿಗೆ. – ಬ್ರಹ್ಮಕುಮಾರಿ ಸಂಸ್ಥೆ ಮುಂಬೈ ಇವರಿಗೆ ಭಾಲ್ಕಿ ಪುರಸಭೆ ವ್ಯಾಪ್ತಿಯಲ್ಲಿ ಸಿಎ ನಿವೇಶನ ಮಂಜೂರು. – ಹಟ್ಟಿ ಚಿನ್ನದ ಗಣಿ ಕಂಪೆನಿಗೆ 57 ಕೋಟಿ ರೂ. ವೆಚ್ಚದಲ್ಲಿ ಸಾವಿರ ಟನ್ ಅದಿರು ಅರೆಯವ ಸಾಮರ್ಥಯದ 2 ಬಾಲ್ ಮಿಲ್‌ಗಳ ಅಳವಡಿಕೆಗೆ ಒಪ್ಪಿಗೆ.