ಹೊಸದಿಲ್ಲಿ : ಪತ್ನಿಗೆ ತ್ರಿವಳಿ ತಲಾಕ್ ನೀಡುವ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ “ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ’ ಮಸೂದೆಯಲ್ಲಿ ಮುಸ್ಲಿಂ ಪುರುಷರಿಗೆ ಜಾಮೀನು ಪಡೆಯುವ ಅವಕಾಶವನ್ನು ಕಲ್ಪಿಸುವ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಇಂದು ಗುರುವಾರ ಅನುಮತಿ ನೀಡಿತು.
ಹಾಗಿದ್ದರೂ ‘ಕಾನೂನು ಬಾಹಿರ ತ್ರಿವಳಿ ತಲಾಕ್ ನೀಡುವ ಮುಸ್ಲಿಂ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ’ ಅವಕಾಶವನ್ನು ಈ ಮಸೂದೆಯಲ್ಲಿ ಅಂತೆಯೇ ಉಳಿಸಲಾಗಿದೆ.
ತ್ರಿವಳಿ ತಲಾಕ್ ನಿಷೇಧದ ಮಸೂದೆ ಎಂದೇ ತಿಳಿಯಲ್ಪಟ್ಟಿರುವ ಈ ಮಸೂದೆಯನ್ನು ಲೋಕಸಭೆ ಪಾಸು ಮಾಡಿದೆ; ಆದರೆ ರಾಜ್ಯಸಭೆಯಲ್ಲಿ ಅದು ಬಾಕಿ ಉಳಿದಿದೆ; ರಾಜ್ಯಸಭೆಯಲ್ಲಿ ಆಳುವ ಬಿಜೆಪಿಗೆ ಬಹುಮತ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ.
ತ್ರಿವಳಿ ತಲಾಕ್ ನಿಷೇಧಿಸುವ ಈ ಪ್ರಸ್ತಾವಿತ ಕಾನೂನು ‘ತಲಾಕ್ ಎ ಬಿದ್ದತ್’ (ತ್ರಿವಳಿ ತಲಾಕ್) ಗೆ ಮಾತ್ರವೇ ಸಂಬಂಧಿಸಿರುತ್ತದೆ. ತ್ರಿವಳಿ ತಲಾಕ್ ಸಂತ್ರಸ್ತ ಮಹಿಳೆಯು ಮ್ಯಾಜಿಸ್ಟ್ರೇಟರ ಕೋರ್ಟನ್ನು ಸಂಪರ್ಕಿಸಿ ತನಗೆ ಮತ್ತು ತನ್ನ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮಾಸಾಶನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಮಾತ್ರವಲ್ಲದೆ ತ್ರಿವಳಿ ತಲಾಕ್ ಸಂತ್ರಸ್ತೆಯು ತನ್ನ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ತನ್ನ ಸುಪರ್ದಿಗೆ ನೀಡಬೇಕೆಂದು ಮ್ಯಾಜಿಸ್ಟ್ರೇಟರನ್ನು ಕೋರಬಹುದಾಗಿದ್ದು ಈ ಕುರಿತ ಅಂತಿಮ ನಿರ್ಧಾರ ಅವರದ್ದೇ ಆಗಿರುತ್ತದೆ.