Advertisement

ಚಾಲಕನ ಥಳಿಸಿ ಕ್ಯಾಬ್‌ ಕದಿಯುತ್ತಿದ್ದವನ ಬಂಧನ

11:28 AM Jul 12, 2017 | Team Udayavani |

ಬೆಂಗಳೂರು: ಕ್ಯಾಬ್‌ ಬಾಡಿಗೆ ಪಡೆದು ಮಾರ್ಗಮಧ್ಯೆ ಚಾಲಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಕಾರು ಸಮೇತ ಪರಾರಿಯಾಗಿದ್ದ ನಾಲ್ವರ ಪೈಕಿ ಒಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.

Advertisement

ಲಗ್ಗೆರೆ ಚೌಡೇಶ್ವರಿನಗರದ ವಿನೋದ್‌(18) ಬಂಧಿತ. ಸೂರಿ, ಗಣೇಶ್‌ ಮತ್ತು ಕಾರ್ತಿಕ್‌ ಎಂಬುವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ. 
ಹಲ್ಲೆಗೊಳಗಾದ ಕ್ಯಾಬ್‌ ಚಾಲಕ ಹರೀಶ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಆರೋಪಿಗಳೆಲ್ಲರೂ ಆಟೋ ಚಾಲಕರಾಗಿದ್ದು, ಕಾರು ಕಳವು, ದರೋಡೆ ಮಾಡುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕದ್ದ ಕಾರು ಬಳಸಿ ದರೋಡೆ ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದರು ಎಂದು  ಪೊಲೀಸರು ತಿಳಿಸಿದ್ದಾರೆ.

ನಾಪತ್ತೆಯಾಗಿರುವ ರೌಡಿ ಸೂರಿ ಸೇರಿದಂತೆ ನಾಲ್ವರು ಸೋಮವಾರ ರಾತ್ರಿ ಲಗ್ಗೆರೆಗೆ ಹೋಗಲು ಮೇರು ಕ್ಯಾಬ್‌ ಬುಕ್‌ ಮಾಡಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಕ್ಯಾಬ್‌ ಚಾಲಕ ಹರೀಶ್‌ ನಾಲ್ವರು ಆರೋಪಿಗಳನ್ನು ಹತ್ತಿಸಿಕೊಂಡಿದ್ದಾನೆ. ಲಗ್ಗೆರೆಯಿಂದ ಗೊರಗುಂಟೆಪಾಳ್ಯಗೆ ಹೋಗುತ್ತಿದ್ದಂತೆ ಹೆಬ್ಟಾಳಕ್ಕೆ ಹೋಗುವಂತೆ ಆರೋಪಿಗಳು ಸೂಚಿದ್ದಾರೆ.

ಈ ಮಾರ್ಗದ ನಿರ್ಜನ  ಪದೇಶದಲ್ಲಿ ಕ್ಯಾಬ್‌ ನಿಲ್ಲಿಸುವಂತೆ ಹರೀಶ್‌ಗೆ ಸೂಚಿಸಿದ್ದು, ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳನ್ನು ತೋರಿಸಿ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಬೆದರಿಕೆಯೊಡ್ಡಿ ಹರೀಶ್‌ ಮೂಲಕವೇ ಕ್ಯಾಬ್‌ನ್ನು ಚಾಲನೆ ಮಾಡಿಸಿದ್ದಾರೆ. 

Advertisement

ಇದರಿಂದ ಗಾಬರಿಗೊಂಡ ಹರೀಶ್‌, ಕೊಡಿಗೇಹಳ್ಳಿ ಮುಖ್ಯ ರಸ್ತೆ ಸಿಗ್ನಲ್‌ ಬಳಿ ಕಾರು ನಿಧಾನ ಮಾಡಿ ಕೆಳಗಿಳಿದು ತಪ್ಪಿಸಿಕೊಂಡಿದ್ದಾರೆ. ತಕ್ಷಣ “ನಮ್ಮ-100′ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿ, ಕಾರಿನ ನೋಂದಣಿ ಸಂಖ್ಯೆ ತಿಳಿಸಿದ್ದರು. 

ಸಹಾಯವಾಣಿ ಕೇಂದ್ರದಿಂದ ಸಂದೇಶ ರವಾನೆಯಾದ ನಂತರ ಕೊಡಿಗೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಚಾಲಕ ಹರೀಶ್‌ಗೆ ಚಿಕಿತ್ಸೆ ಕೊಡಿಸಿದ್ದಾರೆ. ನಂತರ  ಕೆಂಗೇರಿ ಠಾಣೆಗೆ ಮಾಹಿತಿ ರವಾನಿಸಲಾಯಿತು.

ಸಬ್‌ಇನ್‌ಸ್ಟೆಕ್ಟರ್‌ ನಂಜುಂಡಸ್ವಾಮಿ, ಮುಖ್ಯಪೇದೆ ಕಿರಣ್‌, ಎಎಸ್‌ಐ ಈಶ್ವರ್‌ ಮತ್ತು ಪೇದೆ ಲೋಕೇಶ್‌ ಕೆಂಗೇರಿ ಕೆಂಗಲ್‌ ಹನುಮಂತರಾಯ ಬಸ್‌ ನಿಲ್ದಾಣ ಮುಂಭಾಗ ನಾಕಬಂದಿ ಮಾಡಿದ್ದರು. ಪೊಲೀಸ್‌ ಕಂಟ್ರೋಲ್‌ ರೂಂನಲ್ಲಿ ತಿಳಿಸಿದ ಮೆರು ಕ್ಯಾಬ್‌ ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದನ್ನು ಗಮನಿಸಿದ ಪೊಲೀಸರು ಕಾರನ್ನು ಅಡ್ಡಗಟ್ಟಿದ್ದಾರೆ.

ಕಾರಿನ ವೇಗ ಹೆಚ್ಚು ಮಾಡಿದ ಆರೋಪಿಗಳು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಪರಾರಿಯಾಗುತ್ತಿದ್ದರು. ಆಗ ಆರೋಪಿಗಳ ಬೆನ್ನಟ್ಟಿದ ಪೊಲೀಸರು ವಿನೋದ್‌ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರು ವಶಕ್ಕೆ ಪಡೆದಿದ್ದು, ವಿನೋದ್‌ ಬಳಿ 1 ಲಾಂಗು, 2 ಮೊಬೈಲ್‌, 2 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಕೆಂಗೇರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next