Advertisement

ಪೌರತ್ವ ತಿದ್ದುಪಡಿ ಮಸೂದೆ; ಮಮತಾ ಬ್ಯಾನರ್ಜಿ ಆಕ್ರೋಶದ ಹಿಂದಿದೆ ರಾಜಕೀಯ ಲಾಭದ ಲೆಕ್ಕಾಚಾರ!

09:56 AM Dec 13, 2019 | Team Udayavani |

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿದೆ. ಮತ್ತೊಂದೆಡೆ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ನೇರಾನೇರ ಸಡ್ಡು ಹೊಡೆದವರು ಪಶ್ಚಿಮಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

Advertisement

ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವ ಮಸೂದೆ ಇದಾಗಿದೆ. ಆದರೆ ಪಶ್ಚಿಮಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ದೇಶದ ಯಾವುದೇ ವ್ಯಕ್ತಿಯನ್ನು ಗಡಿಪಾರು ಮಾಡಲು ನಾವು ಅವಕಾಶ ನೀಡುವುದಿಲ್ಲ ಎಂದು ಮಮತಾ ಸವಾಲೊಡ್ದಿದ್ದಾರೆ. ವಿಪರ್ಯಾಸವೆಂದರೆ ಬಾಂಗ್ಲಾದೇಶದಿಂದ ಬಂದ ವಲಸಿಗರ ಬಗ್ಗೆ ಮಮತಾ ಬ್ಯಾನರ್ಜಿ ಹಿಂದಿನ ನಿಲುವು ಏನಾಗಿತ್ತು? ಈಗ ಯಾಕೆ ದಿಢೀರನೆ ಉಲ್ಟಾ ಹೊಡೆದಿದ್ದೇಕೆ ಎಂಬುದು ಮಹತ್ವ ಪಡೆದಿದೆ.

ಮಮತಾ ಬ್ಯಾನರ್ಜಿ ಮತ್ತು ಅಕ್ರಮ ವಲಸಿಗರು:

ಅಂದು ಪಶ್ಚಿಮಬಂಗಾಳದಲ್ಲಿ ಎಡಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಮಮತಾ ಬ್ಯಾನರ್ಜಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಬಗ್ಗೆ ಪ್ರಬಲ ವಿರೋಧ ವ್ಯಕ್ತಪಡಿಸಿ ಪ್ರಚಾರ ನಡೆಸಿದ್ದರು. ಇದೊಂದು ವೋಟ್ ಬ್ಯಾಂಕ್ ರಾಜಕೀಯ ಎಂದು ಮಮತಾ ಆರೋಪಿಸಿದ್ದರು.

Advertisement

2005ರಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದರು. ಯಾಕೆಂದರೆ ಬಾಂಗ್ಲಾ ಅಕ್ರಮ ವಲಸಿಗರ ಕುರಿತು ಎಡಪಕ್ಷಗಳಿಗೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿತ್ತು. ಬಾಂಗ್ಲಾದೇಶದ ಅಕ್ರಮ ವಲಸಿಗರು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ಒಂದು ಭಾಗವಾಗಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಮೌನವಾಗಿದೆ. ಹೀಗಾಗಿ ಈ ವಿಷಯದ ಬಗ್ಗೆ ಚರ್ಚಿಸಲೇಬೇಕಾಗಿದೆ ಎಂದು ಮಮತಾ ಬ್ಯಾನರ್ಜಿ ಅಂದು ಒತ್ತಾಯಿಸಿದ್ದರು.

ಸಿಪಿಐ(ಎಂ)ನ ದಿವಂಗತ ಸೋಮನಾಥ್ ಚಟರ್ಜಿ ಬಂಗಾಳದ ಆಡಳಿತಾರೂಢ ಎಪಪಕ್ಷದ ಸದಸ್ಯರಾಗಿದ್ದರು. ಅವರು ಲೋಕಸಭಾ ಸ್ಪೀಕರ್ ಕೂಡಾ ಆಗಿದ್ದರು. ಅಂದು ಬಂಗಾಳದ ಅಕ್ರಮ ವಲಸಿಗರ ಕುರಿತು ಚರ್ಚೆಗೆ ಅವಕಾಶ ನೀಡಲು ನಿರಾಕರಿಸಿದ್ದರು. ಆ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಲೋಕಸಭೆಯ ಬಾವಿಗಿಳಿದು ಪೇಪರ್ ಅನ್ನು ಡೆಪ್ಯುಟಿ ಸ್ಪೀಕರ್ ಚರಣ್ ಜಿತ್ ಸಿಂಗ್ ಅಟ್ವಾಲ್ ಕುರ್ಚಿಯತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಅಕ್ರಮ ವಲಸಿಗರ ಕುರಿತು ಚರ್ಚೆ ನಡೆಸದ್ದಕ್ಕೆ ಪ್ರತಿಭಟಿಸಿ ಮಮತಾ ಬ್ಯಾನರ್ಜಿ ಕೋಲ್ಕತಾ ದಕ್ಷಿಣ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅದು ಸಮರ್ಪಕವಾದ ಕ್ರಮದಲ್ಲಿ ಇಲ್ಲ ಎಂದು ರಾಜೀನಾಮೆ ತಿರಸ್ಕೃತಗೊಂಡಿತ್ತು. ಲೋಕಸಭೆಯಲ್ಲಿ ಮಮತಾ ಬ್ಯಾನರ್ಜಿ ಅಕ್ರಮ ವಲಸಿಗರ ಕುರಿತು ಪ್ರದರ್ಶಿಸಿದ ಆಕ್ರೋಶ 2011ರಲ್ಲಿ ಎಡಪಕ್ಷಗಳ ವಿರುದ್ಧ ಪ್ರಚಾರ ನಡೆಸಲು ನೆರವು ನೀಡಿತ್ತು.

ಹೀಗೆ ಅಕ್ರಮ ವಲಸಿಗರ ಕುರಿತ ರಾಜಕೀಯದಲ್ಲಿ ಲಾಭ ಪಡೆದವರಲ್ಲಿ ಮಮತಾ ಬ್ಯಾನರ್ಜಿ ಮಾತ್ರವಲ್ಲ, ಅಸೋಮ್ ಗಣ ಪರಿಷತ್ ನ ಪ್ರಫುಲ್ ಕುಮಾರ್ ಮಹಾಂತ್ ಮತ್ತು ಬಿಜೆಪಿ ಕೂಡಾ ಲಾಭ ಪಡೆದಿದೆ ಎಂದು ಇಂಡಿಯಾ ಟುಡೇ ವರದಿ ವಿಶ್ಲೇಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next