ಬೆಂಗಳೂರು: ಕ್ಯಾಬ್ ಚಾಲಕನ ವಿರುದ್ಧ ಯುವತಿಯೊಬ್ಬರು ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಶನಿವಾರ ನೂರಾರು ಮಂದಿ, ಆ್ಯಪ್ ಆಧಾರಿತ ಕ್ಯಾಬ್ ಚಾಲಕರು ಬೆಳ್ಳಂದೂರು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು.
ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಠಾಣೆ ಮುಂದೆ ಜಮಾಯಿಸಿದ ಕ್ಯಾಬ್ ಚಾಲಕರು, ನಾಲ್ಕೈದು ಚಾಲಕರ ವಿರುದ್ಧ ಯುವತಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಕ್ಯಾಬ್ ಚಾಲಕರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಢಿದ ಹಿರಿಯ ಪೊಲೀಸ್ ಅಧಿಕಾರಿಗಳು, ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ಹೇಳಿ ವಾತಾವರಣ ತಿಳಿಗೊಳಿಸಿದ್ದಾರೆ.
ಏನಿದು ಪ್ರಕರಣ?: ದೂರುದಾರ ಯುವತಿ, ಶುಕ್ರವಾರ ರಾತ್ರಿ ತನ್ನ ಸಹೋದರನ ಜತೆ ಬೆಳ್ಳಂದೂರು ಸಮೀಪದ ಅರಳೂರಿಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಮನೆ ಮುಂಭಾಗ ಸಂತ್ರಸ್ತೆ ಇಳಿದುಕೊಂಡಿದ್ದು, ಆಕೆಯ ಸಹೋದರ ಕಾರನ್ನು ತಿರುಗಿಸಿಕೊಂಡು ಬರುವುದಾಗಿ ಹೋಗಿದ್ದಾರೆ. ಅದೇ ವೇಳೆ ರಸ್ತೆ ತಿರುವಿನಲ್ಲಿ ಬರುತ್ತಿದ್ದ ಕ್ಯಾಬ್‌ಗ ಆತನ ಕಾರು ತಗುಲಿದೆ.
ಈ ವಿಚಾರಕ್ಕೆ ಕ್ಯಾಬ್ ಚಾಲಕ ಹಾಗೂ ಯುವತಿಯ ಸಹೋದರನ ನಡುವೆ ವಾಗ್ವಾದ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಷ್ಟರಲ್ಲಿ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇತರೆ ನಾಲ್ಕೈದು ಮಂದಿ ಕ್ಯಾಬ್ ಚಾಲಕರು ಸೇರಿಕೊಂಡಿದ್ದಾರೆ.
ಸಹೋದರನ ಜತೆಗೆ ಕ್ಯಾಬ್ ಚಾಲಕರ ಜಗಳದ ವಿಷಯ ತಿಳಿದು ಮನೆಯಲ್ಲಿದ್ದ ಯುವತಿಯ ಜತೆಯೂ ವಾಗ್ವಾದ ನಡೆಸಿದ ಕ್ಯಾಬ್ ಚಾಲಕರು, ಆಕೆ ಮೇಲೂ ಹಲ್ಲೆ ನಡೆಸಿ, ಅಸಭ್ಯ ವರ್ತನೆ ತೋರಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಸಂತ್ರಸ್ತೆ ತಡರಾತ್ರಿಯೇ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕ್ಯಾಬ್ ಚಾಲಕರಾದ ಮಂಜೇಗೌಡ, ಸುರೇಶ್, ಶಂಕರ್ ಹಾಗೂ ಇತರರ ವಿರುದ್ಧ ಹಲ್ಲೆ ಹಾಗೂ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ಆದರೆ, ಇದೊಂದು ಸುಳ್ಳು ಪ್ರಕರಣ. ಕಾರು ಡಿಕ್ಕಿಯಾಗಿದನ್ನು ಪ್ರಶ್ನಿಸಿದಕ್ಕೆ ಯುವತಿ ನಡುರಸ್ತೆಯಲ್ಲಿ ರಾದ್ದಾಂತ ಸೃಷ್ಟಿಸಿ ಹಲ್ಲೆ ಕೂಡ ನಡೆಸಿದ್ದಾರೆ ಎಂದು ಆರೋಪಿಸಿ ಕ್ಯಾಬ್ ಚಾಲಕರು ಪ್ರತಿಭಟನೆ ನಡೆಸಿದರು.