ಬೆಂಗಳೂರು: ಕ್ಯಾಬ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರೇ ಮೊಬೈಲ್‌ನಲ್ಲಿ ವೈಯಕ್ತಿಕ ವಿಚಾರಗಳನ್ನು ಮಾತನಾಡುವಾಗ ಎಚ್ಚರ!ಹೌದು, ನೀವು ಮಾತನಾಡುವ ವಿಚಾರಗಳನ್ನೇ ಬಂಡವಾಳ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡುವ ವ್ಯಕ್ತಿಗಳಿದ್ದಾರೆ.
ತನ್ನ ಕ್ಯಾಬ್‌ನಲ್ಲಿ 2-3 ಬಾರಿ ಪ್ರಯಾಣಿಸಿದ ಮಹಿಳೆಯ ವೈಯಕ್ತಿಕ ವಿಚಾರಗಳನ್ನು ತಿಳಿದ ಕ್ಯಾಬ್ ಚಾಲಕನೊಬ್ಬ ಆಕೆಯಿಂದ ಲಕ್ಷಾಂತರ ರೂ. ನಗದು ಪಡೆದುಕೊಂಡಿದಲ್ಲದೆ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹೆಸರುಘಟ್ಟ ನಿವಾಸಿ ಕಿರಣ್ ಕುಮಾರ್(35) ಬಂಧಿತ ಆರೋಪಿ. ಈತ 2022ರ ನವೆಂಬರ್‌ನಲ್ಲಿ ಮಹಿಳೆಯನ್ನು ಒಂದೆರಡು ಬಾರಿ ಕ್ಯಾಬ್‌ನಲ್ಲಿ ಕರೆದೊಯ್ದಿದ್ದಾನೆ. ಈ ವೇಳೆ ಆಕೆಯ ದೌರ್ಬಲ್ಯ ತಿಳಿದುಕೊಂಡು ಬ್ಲ್ಯಾಕ್‌ಮೇಲ್ ಮಾಡಿ 20 ಲಕ್ಷ ರೂ. ನಗದು ಮತ್ತು 60 ಲಕ್ಷ ರೂ. ಮೌಲ್ಯದ 960 ಗ್ರಾಂ ಚಿನ್ನಾಭರಣ ದೋಚಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯಿಂದ 960 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಏನಿದು ಪ್ರಕರಣ?: ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಮಹಿಳೆ ಕೌಟುಂಬಿಕ ವಿಚಾರವಾಗಿ ಬೇಸತ್ತಿದ್ದರು. ಒಂದು ಹಂತದಲ್ಲಿ ಪತಿಯಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಈ ಮಧ್ಯೆ 2022ರ ನವೆಂಬರ್ ನಲ್ಲಿ ಮಹಿಳೆ ಇಂದಿರಾನಗರದಿಂದ ಬಾಣಸವಾಡಿಗೆ ಹೋಗಲು ಆರೋಪಿಯ ಕ್ಯಾಬ್ ಹತ್ತಿದ್ದಾರೆ. ಈ ವೇಳೆ ತನ್ನ ಬಾಲ್ಯ ಸ್ನೇಹಿತ ಸುಮನ್ ಎಂಬಾತನ ಜತೆ ಕೌಟುಂಬಿಕ ವಿಚಾರಗಳನ್ನು ಹೇಳಿಕೊಂಡು ಸಹಾಯ ಕೋರಿದ್ದಾರೆ. ಇದೇ ರೀತಿ 3-4 ಬಾರಿ ಆರೋಪಿಯ ಕ್ಯಾಬ್‌ನಲ್ಲಿ ಹೋಗುವಾಗಲೂ ಅದೇ ವಿಚಾರಗಳನ್ನು ಪದೇ ಪದೆ ಮಾತನಾಡಿದ್ದಾರೆ. ಅದನ್ನು ಗಮನಿಸಿದ ಆರೋಪಿ, ಕೆಲ ದಿನಗಳ ಬಳಿಕ ಆಕೆಗೆ ಸ್ನೇಹಿತನ ಸೋಗಿನಲ್ಲಿ ಸಂದೇಶ ಕಳುಹಿಸಿದ್ದಾನೆ. ಬಳಿಕ ಕರೆ ಮಾಡಿ ಸಮಸ್ಯೆಗೆ ಪರಿಹಾರ ನೀಡುವ ಕುರಿತು ಸಮಾಧಾನ ಮಾಡಿದ್ದಾನೆ. ಆ ಬಳಿಕ ತನಗೆ ಹಣಕಾಸಿನ ಸಮಸ್ಯೆಯಿದೆ ಎಂದು 3-4 ಬಾರಿ 20 ಲಕ್ಷ ರೂ.ಗೂ ಅಧಿಕ ಹಣ ಪಡೆದುಕೊಂಡಿದ್ದಾನೆ. ಆ ನಂತರವೂ ಒಂದೆರಡು ಬಾರಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆದರೆ, ಆಕೆ ಹಣ ಇಲ್ಲ ಎಂದಾಗ, ‘ನಿನ್ನ ಬಳಿಯ ಚಿನ್ನಾಭರಣ ಕೊಡು, ಅಡಮಾನ ಇಟ್ಟು ಕೆಲ ದಿನಗಳ ಬಳಿಕ ಬಿಡಿಸಿಕೊಡುತ್ತೇನೆ ಎಂದಿದ್ದಾನೆ ‘ ಅದಕ್ಕೆ ಒಪ್ಪಿದ ಮಹಿಳೆಯಿಂದ ಆಕೆಯ ಮನೆಗೆ ಹೋಗಿ ನೇರವಾಗಿಯೇ ಸ್ವಲ್ಪ ಚಿನ್ನಾಭರಣ ಪಡೆದುಕೊಂಡಿದ್ದಾನೆ. ಈ ವೇಳೆ ಆಕೆಗೆ ಅನುಮಾನಗೊಂಡು ಮತ್ತೂಮ್ಮೆ ಬಂದಾಗ ಕೇಳಬಹುದು ಎಂದು ಸುಮ್ಮನಾಗಿದ್ದರು.
ಬ್ಲ್ಯಾಕ್‌ಮೇಲ್ ಮಾಡಿ ಚಿನ್ನಾಭರಣ: ಕೆಲ ದಿನಗಳ ಬಳಿಕ ಮತ್ತೂಮ್ಮೆ ಕರೆ ಮಾಡಿದ ಆರೋಪಿ, ಆಕೆ ಮನೆಗೆ ಹೋಗಿದ್ದಾನೆ. ಆಗ ಮಹಿಳೆ ತನ್ನ ಹಳೇ ಸ್ನೇಹಿತನಿಗೆ ಕರೆ ಮಾಡಿ ಖಚಿತಪಡಿಸಿಕೊಂಡು ಆರೋಪಿಗೆ ನಿಂದಿಸಿದ್ದಾರೆ. ಅದರಿಂದ ಆಕ್ರೋಶಗೊಂಡ ಆರೋಪಿ, “ನಿನ್ನ ವಿಚಾರಗಳನ್ನು ಪತಿಗೆ ಹಾಗೂ ಮಾಧ್ಯಮಗಳಲ್ಲಿ ಹರಿಬಿಡುತ್ತೇನೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಅದರಿಂದ ಹೆದರಿದ ಮಹಿಳೆ, ಆತನಿಗೆ ಸುಮಾರು 960 ಗ್ರಾಂ ಚಿನ್ನಾಭರಣ ಕೊಟ್ಟಿದ್ದಾರೆ. ಈ ಚಿನ್ನಾಭರಣವನ್ನು ಕೆಲ ಫೈನಾನ್ಸ್ ಹಾಗೂ ಗಿರವಿ ಅಂಗಡಿಯಲ್ಲಿ ಅಡಮಾನ ಇಟ್ಟು ಹಣ ಪಡೆದುಕೊಂಡಿದ್ದಾನೆ. ಎಲ್ಲ ನಗದನ್ನು ಆನ್‌ಲೈನ್ ಗೇಮಿಂಗ್, ಜೂಜಾಟ, ವೇಶ್ಯಾವಾಟಿಕೆ ಸೇರಿ ಬೇರೆ ಬೇರೆ ಮೋಜಿನ ಜೀವನಕ್ಕೆ ವ್ಯಯಿಸಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?: ಆರೋಪಿ ಕೆಲ ದಿನಗಳ ಹಿಂದೆ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಕಾರಿನಲ್ಲಿ ಓಡಾಡುತ್ತಿದ್ದ. ಆಗ ಮಾಹಿತಿ ಮೇರೆಗೆ ಗಸ್ತಿ ನಲ್ಲಿದ್ದ ಪಿಎಸ್‌ಐ ಮೌನೇಶ್ ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಚಿನ್ನಾ ಭರಣ ಅಡಮಾನ ಇಟ್ಟಿರುವ ಚೀಟಿಗಳು ಪತ್ತೆಯಾಗಿತ್ತು. ಅನುಮಾನಗೊಂಡು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ವಂಚನೆಯ ರಹಸ್ಯ ಬಾಯಿಬಿಟ್ಟಿದ್ದಾನೆ. ಮಹಿಳೆಯಿಂದ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.