Advertisement
1988ನೇ ಮೋಟಾರು ವಾಹನ ಕಾಯ್ದೆ ಕಲಂ 2 (25)ರಲ್ಲಿ ತಿಳಿಸಿರುವಂತೆ ಮೋಟಾರು ಕ್ಯಾಬ್ (ಸಾರಿಗೆ ವಾಹನಗಳು)ಗಳಾಗಿ ನೋಂದಣಿಯಾಗಿರುವ ವಾಹನಗಳಲ್ಲಿ ಅಳವಡಿಸಿ ರುವ ಚೈಲ್ಡ್ ಲಾಕ್ ಸಿಸ್ಟಮ್ ನಿಷ್ಕ್ರಿಯ ಗೊಳಿಸುವಂತೆ ಮತ್ತು ಚೈಲ್ಡ್ ಲಾಕ್ ಸಿಸ್ಟಮ್ ಅಳವಡಿಸಿಕೊಂಡಂತಹ ವಾಹನಗಳಿಗೆ ರಹದಾರಿ (ಪರ್ಮಿಟ್) ನೀಡಬಾರದು ಎಂದು ತಿಳಿಸಿ ಕರ್ನಾಟಕ ಮೋಟಾರು ವಾಹನ ನಿಯಮಾವಳಿ ಗಳು ನಿಯಮ 130 ಎ ಗೆ ತಿದ್ದುಪಡಿ ಮಾಡಿ ಕರ್ನಾಟಕ ಸರಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದರಂತೆ ಮೋಟಾರ್ ಕ್ಯಾಬ್‌ಗಳಲ್ಲಿ ಈಗಾಗಲೇ ಅಳವಡಿಸಿರುವ ಚೈಲ್ಡ್ ಲಾಕ್ ಸಿಸ್ಟಮ್ ತೆಗೆಯಬೇಕಾಗುತ್ತದೆ. ಹೊಸದಾಗಿ ನೋಂದಣಿಯಾಗಿ ಪರ್ಮಿಟ್ ಪಡೆಯುವ ಮೋಟಾರು ಕ್ಯಾಬ್ ವಾಹನಗಳಿಗೂ ಸಹ ಚೈಲ್ಡ್ ಲಾಕ್ ಸಿಸ್ಟಮ್ ತೆಗೆಯಬೇಕಾಗಿದೆ.
ಕಾರಿನಲ್ಲಿ ‘ಸೆಂಟ್ರಲ್ ಲಾಕ್’ ಸಿಸ್ಟಮ್ ಬಳಕೆಯಲ್ಲಿದೆ. ಅಂದರೆ, ವಾಹನದ ನಾಲ್ಕು ಬಾಗಿಲು ಒಮ್ಮೆಗೆ ಡ್ರೈವರ್ ಲಾಕ್ ಮಾಡುವ ಕ್ರಮವಿದು. ಇದರ ಜತೆಗೆ ಪ್ರಯಾಣಿಕರ ಭದ್ರತೆಯ ದೃಷ್ಟಿಯಿಂದ ‘ಚೈಲ್ಡ್ ಲಾಕ್’ ಸಿಸ್ಟಮ್ ಜಾರಿಯಲ್ಲಿದೆ. ಇದರಲ್ಲಿ ಕಾರಿನ ಹಿಂಭಾಗದ ಎರಡು ಡೋರ್‌ಗಳ ಲಾಕ್‌ನ ಬದಿಯಲ್ಲಿ ‘ಚೈಲ್ಡ್ ಲಾಕ್’ ಇರುತ್ತದೆ. ಬಹುತೇಕ ಎಲ್ಲ ಕಾರುಗಳಲ್ಲಿ ಈ ಸಿಸ್ಟಮ್ ಇದೆ. ಹಿಂಬದಿಯ ಸೀಟಿನಲ್ಲಿ ಮಕ್ಕಳು ಕುಳಿತಿದ್ದರೆ ಅವರು ಲಾಕ್ ತೆಗೆಯುವ ಅಪಾಯ ಇರುವ ಕಾರಣದಿಂದ ಬಹುತೇಕ ಜನ ಭದ್ರತೆಯ ಕಾರಣಕ್ಕಾಗಿ ಚೈಲ್ಡ್ ಲಾಕ್ ಹಾಕಿರುತ್ತಾರೆ. ಇದರಿಂದಾಗಿ ಹಿಂಬದಿಯ ಸೀಟನ್ನು ಒಳಗಿನಿಂದ ತೆಗೆಯಲು ಸಾಧ್ಯವಾಗುವುದಿಲ್ಲ.
Related Articles
ವಿವಿಧ ಭಾಗಗಳಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಕಾರಣದಿಂದ ಚೈಲ್ಡ್ ಲಾಕ್ ತೆಗೆಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಇತ್ತೀಚೆಗೆ ಸೂಚಿಸಿತ್ತು. ಬೆಂಗಳೂರಿನ ಕ್ಯಾಬ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ಬಹುತೇಕ ಪ್ರಕರಣದಲ್ಲಿ ಚಾಲಕರು ಚೈಲ್ಡ್ ಲಾಕ್ ವ್ಯವಸ್ಥೆಯನ್ನು ದುರುಪ ಯೋಗಿಸಿರುವುದು ಕಂಡುಬಂದಿದೆ. ಹೀಗಾಗಿ ಇದನ್ನು ತೆಗೆಯಲು ನಿಯಮದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಬಿಎಸ್‌ಒಜಿ ಸಂಘಟನೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಇದರಂತೆ ರಾಜ್ಯ ಸರಕಾರ ಮೋಟಾರ್ ವಾಹನಗಳಲ್ಲಿ ಚೈಲ್ಡ್ ಲಾಕ್ ತೆಗೆಯುವ ಬಗ್ಗೆ ಹೈಕೋರ್ಟ್‌ಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದೆ.
Advertisement
ಕಾರ್ಯಾಚರಣೆ ಆರಂಭತುರ್ತು ಸಂದರ್ಭದಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಸಾರಿಗೆ ವಾಹನಗಳಲ್ಲಿರುವ ಚೈಲ್ಡ್ ಲಾಕ್ ಸಿಸ್ಟಮ್ ಅನ್ನು ತೆಗೆಯುವಂತೆ ಸರಕಾರದ ಸೂಚನೆಯ ಮೇರೆಗೆ ದ.ಕ. ವ್ಯಾಪ್ತಿಯಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಜತೆಗೆ ನಿಲ್ದಾಣಗಳಿಗೆ ತೆರಳಿ ಚೈಲ್ಡ್ ಲಾಕ್ ತೆರವು ಮಾಡಲಾಗುತ್ತಿದೆ. ಇದು ನಿರಂತರವಾಗಿ ಮುಂದುವರಿಯಲಿದೆ.
– ಜಿ.ಎಸ್. ಹೆಗಡೆ,
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಂಟ್ವಾಳ ಚೈಲ್ಡ್ ಲಾಕ್ ಅಗತ್ಯ
ಸಾರಿಗೆ ವಾಹನಗಳು ಚೈಲ್ಡ್ ಲಾಕ್ ತೆಗೆಯಬೇಕೆಂಬ ನಿಯಮ ಸ್ವಾಗತಾರ್ಹ. ಆದರೆ, ಸಾರಿಗೇತರ ವಾಹನದಲ್ಲಿ ಇಂತಹ ಲಾಕ್ ವ್ಯವಸ್ಥೆ ಇದೆ. ಹಾಗಾದರೆ, ಅದರಿಂದಾಗಿ ಯಾವುದೇ ಸಮಸ್ಯೆ ಆಗುವುದಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಪ್ರಯಾಣಿಕರ ಭದ್ರತೆ ದೃಷ್ಟಿಯಿಂದ ಚೈಲ್ಡ್ ಲಾಕ್ ಬಹಳ ಉಪಯುಕ್ತ. ಸಾರಿಗೆ ನಿಯಮಗಳಿಗೆ ಅನ್ವಯವಾಗುವ ಎಲ್ಲ ವ್ಯವಸ್ಥೆಗಳನ್ನು ವಾಹನ ತಯಾರಿ ವೇಳೆ ಕಂಪೆನಿಯಿಂದಲೇ ಮಾಡಿದರೆ ಉತ್ತಮ.
ಶುಭಕರ ಶೆಟ್ಟಿ,
ಟ್ಯಾಕ್ಸಿ ಚಾಲಕರು ಕಂಕನಾಡಿ •ವಿಶೇಷ ವರದಿ