Advertisement

ದೇಶಕ್ಕೆ ದೇಶವೇ ಸಿಎಎ ವಿರೋಧಿಸುತ್ತಿದೆ

12:24 AM Jan 05, 2020 | Lakshmi GovindaRaj |

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್‌ ಮಾತ್ರವಲ್ಲ, ದೇಶದ ಎಲ್ಲ ಭಾಗದ ಜನ ವಿರೋಧಿಸುತ್ತಿದ್ದಾರೆ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಮ್‌ ನಬಿ ಆಜಾದ್‌ ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ, ಗುಜರಾತ್‌ನಿಂದ ಆಸ್ಸಾಂವರೆಗೂ ಎಲ್ಲ ವರ್ಗದ ಜನರಿಗೂ ಗೊತ್ತಾಗಿದೆ. ಹೀಗಾಗಿ ಜನರೇ ನೇರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳೂರಿನಲ್ಲಿ ಇಬ್ಬರು ಅಮಾಯಕ ಯುವಕರು ಪೋಲೀಸರ ಗೋಲಿಬಾರಿಗೆ ಬಲಿಯಾದರು. ಆಸ್ಸಾಂನಲ್ಲಿ ಐವರು ಅಮಾಯಕರು ಬಲಿಯಾದರು. ಅವರಲ್ಲಿ ಒಬ್ಬರು ಮಾತ್ರ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದರು.

2014ರ ಚುನಾವಣೆಯಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಬಿಜೆಪಿ ಈಡೇಸಲಿಲ್ಲ. ದೇಶದ ಬಹುತೇಕ ಜನ ಅನಕ್ಷರಸ್ಥರು ಹಾಗೂ ಬಡವರಿದ್ದಾರೆ. ಅವರಿಗೆ ಪ್ರತಿ ವ್ಯಕ್ತಿ ಖಾತೆಗೆ 15 ಲಕ್ಷ ರೂ. ಹಾಕುವ ಭರವಸೆ ನೀಡಿದ್ದಕ್ಕೆ ಅವರು ಮತ ಹಾಕಿದ್ದರು. ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದರಿಂದ ಎಲ್ಲರೂ ನಂಬಿ ಮತ ಹಾಕಿದ್ದರು. ಆದರೆ, ನೀಡಿದ ಯಾವುದೇ ಭರವಸೆಗಳನ್ನು ಅವರು ಈಡೇರಿಸಲಿಲ್ಲ ಎಂದರು.

ದಾರಿ ತಪ್ಪಿಸುವ ಕೆಲಸ: ಬಿಜೆಪಿಯವರು ಇಡೀ ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯುವ ಪ್ರಯತ್ನ ಮಾಡಿದ್ದಾರೆ. ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಸಂವಿಧಾನದ 370ನೇ ಕಲಂ ರದ್ದು ಪಡಿಸಿದರು. ಆದರೆ, ಎರಡೂ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡರು. ಜಾರ್ಖಂಡ್‌ ಹಾಗೂ ದೆಹಲಿ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿಎಎ ಜಾರಿಗೆ ತಂದರು. ಆದರೆ ಜಾರ್ಖಂಡ್‌ ಜನ ತಿರಸ್ಕರಿಸಿದರು. ದೇಶದ ಜನ ಅವರ ಅಜೆಂಡಾ ಅರ್ಥ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಎನ್‌ಆರ್‌ಸಿ ಹಾಗೂ ಸಿಎಎ ಬಗ್ಗೆ ತಮ್ಮ ಪ್ರಣಾಳಿಕೆಯಲ್ಲಿಯೇ ಹೇಳಿದ್ದಾರೆ. ಆದರೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅದನ್ನು ಅಲ್ಲಗಳೆಯುತ್ತಿದ್ದಾರೆ ಎಂದು ಹೇಳಿದರು.

ಈ ದೇಶದ ಜನರು ಒಗ್ಗಟ್ಟಾಗಿ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ್ದಾರೆ. ಜಾತಿ ಧರ್ಮ ಎನ್ನದೇ ಗಾಂಧೀಜಿ ಜೊತೆ ಸೇರಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದೇವೆ. ಒಟ್ಟಾಗಿಯೇ ಹಸಿರು ಕ್ರಾಂತಿ, ಅಭಿವೃದ್ಧಿ ಮಾಡಿದ್ದೇವೆ. ಯಾವುದೇ ಧರ್ಮದ ಆಧಾರದಲ್ಲಿ ಅಭಿವೃದ್ಧಿ ಮಾಡಿಲ್ಲ. ಬಿಜೆಪಿ ಜನರ ನಡುವೆ ತಿರಸ್ಕಾರ ಮನೋಭಾವನೆ ಬೆಳೆಸಿ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸುತ್ತಿದೆ ಎಂದರು.

Advertisement

ಕೇಂದ್ರ ಸರ್ಕಾರ ನಿರುದ್ಯೋಗ, ಸಿಎಎ, ತ್ರಿವಳಿ ತಲಾಖ್‌ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ನೀಡಬೇಕು. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ವಿದೇಶಿ ಬಂಡವಾಳ ಬರುತ್ತಿಲ್ಲ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ರೈತರ ಸಮಸ್ಯೆ ಬಗ್ಗೆ ಚರ್ಚಿಸುತಿಲ್ಲ. ಜಿಡಿಪಿ ಕಡಿಮೆಯಾಗುತ್ತಿರುವ ಬಗ್ಗೆ ಪ್ರಧಾನಿ ಸೇರಿದಂತೆ ಕೇಂದ್ರದ ಯಾವುದೇ ಸಚಿವರು ಮಾತನಾಡುತ್ತಿಲ್ಲ. ಅದರ ಬದಲು ಭಾವನಾತ್ಮಕವಾಗಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಯಾವುದೇ ರಾಷ್ಟ್ರದ ನಿರಾಶ್ರಿತರಿಗೆ ಪೌರತ್ವ ನೀಡಲು ವಿರೋಧಿಸಿಲ್ಲ. ಆದರೆ, ಬಿಜೆಪಿ ಧರ್ಮದ ಆಧಾರಲ್ಲಿ ಪೌರತ್ವ ನೀಡಲು ಮುಂದಾಗಿ ರುವುದನ್ನು ನಾವು ವಿರೋಧಿಸುತ್ತಿದ್ದೇವೆ. ಬಿಜೆಪಿಯ ವರಿಗೆ ಇಷ್ಟು ದೊಡ್ಡ ದೇಶವನ್ನು ಆಳಿದ ಅನುಭವ ಇಲ್ಲ. ಅವರು ಕೇಂದ್ರದ ಸ್ವಾಯತ್ತ ಸಂಸ್ಥೆಗಳನ್ನು ಇಟ್ಟು ಕೊಂಡು ಕೆಲವು ರಾಜ್ಯಗಳನ್ನು ಆಳುತ್ತಿರಬಹುದು. ಆದರೆ, ಭಾರತವನ್ನು ಅದೇ ರೀತಿ ಆಳಲು ಬಯಸುತ್ತಿದ್ದಾರೆ. ಅದು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.

ರಾಜ್ಯಸಭೆಯಲ್ಲಿ ಕಾಯ್ದೆ ಸೋಲಿಸಬಹುದಿತ್ತು: ಕಾಯ್ದೆಯನ್ನು ಕೇವಲ ಮುಸ್ಲಿಂ ಸಮುದಾಯ ವಿರೋಧಿಸಿಲ್ಲ. ಎಲ್ಲ ವರ್ಗದ ಜನ ವಿರೋಧಿಸಿ ದ್ದಾರೆ. ಸಂಸತ್ತಿನಲ್ಲಿ ಬಹುಮತ ಇಲ್ಲದಿದ್ದರೂ ಬಹುತೇಕ ರಾಜಕೀಯ ಪಕ್ಷಗಳು ವಿರೋಧಿಸಿವೆ. ಪ್ರತಿಪಕ್ಷಗಳಿಗೆ ರಾಜ್ಯ ಸಭೆಯಲ್ಲಿ ಬಹುಮತ ಇದ್ದರೂ ಕೆಲವು ಪ್ರಾದೇಶಿಕ ಪಕ್ಷಗಳು ಬಿಜೆಪಿ ಯನ್ನು ಬೆಂಬಲಿಸಿ ಈಗ ವಾಸ್ತವ ಅರಿವಾಗಿ ಪಶ್ಚಾತಾಪ ಪಡುತ್ತಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೇರಿ ಎಲ್ಲರೂ ಈ ಕಾಯ್ದೆ ಬೆಂಬಲಿಸಬಾರದಿತ್ತು ಎಂದು ಬೇಸರ ಪಟ್ಟು ಕೊಳ್ಳುತ್ತಿದ್ದಾರೆ. ಐದಾರು ಪ್ರಾದೇಶಿಕ ಪಕ್ಷಗಳು ನಮ್ಮ ಪರವಾಗಿದ್ದರೆ ಈ ಕಾಯ್ದೆಯನ್ನು ರಾಜ್ಯಸಭೆಯಲ್ಲಿ ಸೋಲಿಸಬಹುದಿತ್ತು ಎಂದು ಹೇಳಿದರು.

ವಿದೇಶ ಸುತ್ತಿ ವರ್ಚಸ್ಸು ಹೆಚ್ಚಿಸಿಕೊಂಡರು: ದೇಶದಲ್ಲಿ 370 ಕಾಯ್ದೆ ರದ್ದು ಪಡಿಸಿದಾಗಿನಿಂದ ವಿಶ್ವಮಟ್ಟದಲ್ಲಿ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇಂಗ್ಲೆಂಡ್‌, ಫ್ರಾನ್ಸ್‌ ಸೇರಿ ಸಣ್ಣ ಪುಟ್ಟ ರಾಷ್ಟ್ರಗಳು ಭಾರತದ ನಿರ್ಧಾರಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಧೆಯಕಗಳು ಬಹುತೇಕ ಜನ ವಿರೋಧಿ ಹಾಗೂ ವಿವಾದಾತ್ಮಕವಾಗಿವೆ.

ಇದರಿಂದ ದೇಶದಲ್ಲಿ ಒಂದಿಲ್ಲೊಂದು ಸಮಸ್ಯೆ ಸೃಷ್ಟಿಯಾಗುತ್ತಿದೆ. ಪ್ರಧಾನಿ ಮೋದಿ ಐದು ವರ್ಷ ಬರೀ ವಿದೇಶ ಸುತ್ತಿ ತಮ್ಮ ವಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದರು. ನೋಟ್‌ ರದ್ದು ಮಾಡಿದ್ದರಿಂದ ದೇಶದಲ್ಲಿ ಹಲವು ಕಂಪನಿಗಳು ಬಾಗಿಲು ಮುಚ್ಚಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ಹಾಗೂ ಬಿಜೆಪಿಯ ಯಾವ ನಾಯಕರೂ ಮಾತನಾಡುವುದಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next